Bengaluru: ಕುಡಿಯಲು ಹಣ ಕೊಡದ ತಾತನನ್ನೇ ಹತ್ಯೆಗೈದ ಮೊಮ್ಮಗ
Bengaluru News: ಕುಡಿಯಲು ಹಣ ನೀಡುವಂತೆ ಪದೇಪದೆ ತಾತನೊಂದಿಗೆ ಮೊಮ್ಮಗ ಜಗಳ ನಡೆಸುತ್ತಿದ್ದನು. ಫೆಬ್ರವರಿ 13ರಂದು ರಾತ್ರಿಯೂ ನಡೆದ ಜಗಳದ ವೇಳೆ ಮೊಮ್ಮಗ ದೊಣ್ಣೆಯಿಂದ ತಾತನಿಗೆ ಹೊಡೆದ ಹತ್ಯೆ ಮಾಡಿದ್ದಾನೆ. ಈ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು: ಆತನಿಗೆ ದುಡಿದು ತಿನ್ನುವ ಶಕ್ತಿ ಇದೆ, ಆದರೆ ತೀವ್ರ ಕುಡಿತದ ಚಟಕ್ಕೆ ಬಿದ್ದಿದ್ದಿದ್ದರಿಂದ ಮದ್ಯ (Alcohol) ಖರೀದಿಗೆ ಹಣ ನೀಡಲು ತಾತನ ಬಳಿ ಪೀಡಿಸುತ್ತಿದ್ದನು. ದಿನ ನಿತ್ಯ ತಾತನೊಂದಿಗೆ ಜಗಳ ಮಾಡುತ್ತಿದ್ದ ಮೊಮ್ಮಗ ದೊಣ್ಣೆಯಿಂದ ಹಲ್ಲೆ ನಡೆಸಿ ಕತ್ತು ಹಿಚುಕಿ ಕೊಲೆ (Murder) ಮಾಡಿಯೇ ಬಿಟ್ಟಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು, ಬೆಂಗಳೂರಿನ ಕಮ್ಮನಹಳ್ಳಿ ಸ್ಲಮ್ನಲ್ಲಿ ನಡೆದಿದೆ. ಜೋಸೆಫ್ (54) ಕೊಲೆಯಾದ ವ್ಯಕ್ತಿ. ಪ್ರಕರಣ ಸಂಬಂಧ ಆರೋಪಿ ಆ್ಯಂಟೊನಿಯನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಜೋಸೆಫ್ ಸಂಬಂಧದಲ್ಲಿ ಆ್ಯಂಟೊನಿಗೆ ತಾತ ಆಗಬೇಕು. ಅಂದರೆ ಜೋಸೆಫ್ ಅಕ್ಕನ ಮೊಮ್ಮಗ ಆ್ಯಂಟೋನಿ. ಚಿಕ್ಕವನಿದ್ದಾಗಿಂದಲೂ ಆ್ಯಂಟೊನಿಯನ್ನು ಜೋಸೆಫ್ ಸಾಕುತ್ತಿದ್ದರು. ಆದರೆ ಆ್ಯಂಟೊನಿ ಮಾತ್ರ ಕುಡಿತದ ದಾಸನಾಗಿದ್ದನು. ಅದರಂತೆ ನಿತ್ಯ ಮೂರು ಹೊತ್ತು ಅನ್ನ ಹಾಕುತ್ತಿದ್ದ ತಾತ ಜೋಸೆಫ್ ಜೊತೆ ಮೊಮ್ಮಗ ಆ್ಯಂಟೊನಿ ಮದ್ಯದ ವಿಚಾರವಾಗಿ ಜಗಳ ನಡೆಸುತ್ತಿದ್ದನು.
ಇದನ್ನೂ ಓದಿ: ಬೆಳಗಾವಿ: ಕುಡಿದ ಮತ್ತಿನಲ್ಲಿ ಕಟ್ಟಡದ 3ನೇ ಮಹಡಿಯಿಂದ ಜಿಗಿದು ಯುವಕ ಸಾವು
ಕುಡಿಯಲು ದುಡ್ಡು ನೀಡುವಂತೆ ಜೋಸೆಫ್ ಜೊತೆ ಆ್ಯಂಟೊನಿ ಜಗಳಕ್ಕೆ ನಿಲ್ಲುತ್ತಿದ್ದನು. ಎಂದಿನಂತೆ ನಿನ್ನೆ ರಾತ್ರಿ (ಫೆಬ್ರವರಿ 13) ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ ಆ್ಯಂಟೋನಿ ದೊಣ್ಣೆಯಿಂದ ತಾತನ ತಲೆಗೆ ಹೊಡೆದು ಕತ್ತು ಹಿಸುಕಿದ್ದಾನೆ. ವಿಚಾರ ತಿಳದ ಸ್ಥಳೀಯರು ಮನೆಗೆ ದೌಡಾಯಿಸಿ ಜೋಸೆಫ್ರನ್ನು ಆಸ್ಪತ್ರಗೆ ರವಾನಿಸಿದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಜೋಸೆಫ್ ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಗೆ ದಾಖಲಿದ ಜೋಸೆಫ್ರನ್ನು ವೈದ್ಯರು ಪರೀಕ್ಷಿಸಿದಾಗ ಅವರು ದಾರಿ ಮಧ್ಯೆ ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ. ನಂತರ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಕೃತ್ಯದ ನಂತರ ಆರ್.ಟಿ.ನಗರದಿಂದ ಪರಾರಿಯಾಗುತ್ತಿದ್ದ ಆ್ಯಂಟೊನಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Tue, 14 February 23