ಬಂಡಲ್‌ಗಳಷ್ಟು ಹಣ ಯಾರದ್ದು? ಐಟಿ ರೇಡ್‌ ಬೆನ್ನಲ್ಲೇ ಹುಟ್ಟಿಕೊಂಡ ರಾಜಕೀಯ ನಂಟು!

ಬೆಂಗಳೂರು ನಗರದಲ್ಲಿ ಗುತ್ತಿಗೆದಾರರು, ಜ್ಯುವೆಲ್ಲರಿ ಶಾಪ್​ ಮಾಲೀಕರು ಹಾಗೂ ಮಾಜಿ ಕಾರ್ಪೊರೇಟರ್​ಗಳ ಮನೆಗಳ ಮೇಲೆ ಐಟಿ ದಾಳಿ ನಡೆದಿದ್ದು, ಈ ವೇಳೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕ ಮಾಜಿ ಕಾರ್ಪೊರೇಟರ್ ಅಶ್ವತ್ಥಮ್ಮ ಮತ್ತು ಪತಿ ಅಂಬಿಕಾಪತಿ ಸಂಬಂಧಿ ಪ್ರದೀಪ್ ಮನೆಯಲ್ಲಿ 40 ಕೋಟಿ ರೂಪಾಯಿ ಪತ್ತೆಯಾಗಿದೆ. ಸದ್ಯ ಇದು ರಾಜಕೀಯ ತಿರುವು ಪಡೆದುಕೊಂಡಿದೆ.

ಬಂಡಲ್‌ಗಳಷ್ಟು ಹಣ ಯಾರದ್ದು? ಐಟಿ ರೇಡ್‌ ಬೆನ್ನಲ್ಲೇ ಹುಟ್ಟಿಕೊಂಡ ರಾಜಕೀಯ ನಂಟು!
ರಾಜಕೀಯ ತಿರುವು ಪಡೆದುಕೊಂಡ ಬೆಂಗಳೂರಿನಲ್ಲಿ ನಡೆದ ಐಟಿ ದಾಳಿ
Follow us
Anil Kalkere
| Updated By: Rakesh Nayak Manchi

Updated on:Oct 13, 2023 | 3:32 PM

ಬೆಂಗಳೂರು, ಅ.13: ನಗರದಲ್ಲಿ ಗುತ್ತಿಗೆದಾರರು, ಜ್ಯುವೆಲ್ಲರಿ ಶಾಪ್​ ಮಾಲೀಕರು ಹಾಗೂ ಮಾಜಿ ಕಾರ್ಪೊರೇಟರ್​ಗಳ ಮನೆಗಳ ಮೇಲೆ ಐಟಿ ದಾಳಿ (IT Raid) ನಡೆದಿದ್ದು, ಈ ವೇಳೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕ ಮಾಜಿ ಕಾರ್ಪೊರೇಟರ್ ಅಶ್ವತ್ಥಮ್ಮ ಮತ್ತು ಪತಿ ಅಂಬಿಕಾಪತಿ (Ambikapati) ಸಂಬಂಧಿ ಪ್ರದೀಪ್ ಮನೆಯಲ್ಲಿ 40 ಕೋಟಿ ರೂಪಾಯಿ ಪತ್ತೆಯಾಗಿದೆ. ಸದ್ಯ ಇದು ರಾಜಕೀಯ ತಿರುವು ಪಡೆದುಕೊಂಡಿದೆ. ಪಂಚರಾಜ್ಯ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಹಣ ಸಂಗ್ರಹ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಐಟಿ ದಾಳಿ ಬಗ್ಗೆ ನಮಗ್ಯಾಕೆ ಕೇಳುತ್ತೀರಾ ಎಂದು ಪ್ರಶ್ನಿಸಿದರು. ಯಾವ ರಾಜ್ಯಗಳಿಗೂ ನಾವು ಹಣ ಕೊಡಲ್ಲ, ಅವರು ಕೇಳುವುದಿಲ್ಲ. ಹಣ ಹೋಗಿರುವುದು ಬಿಜೆಪಿ ಅವರು ನೋಡಿದ್ದಾರಾ? ಬಿಜೆಪಿಯವರ ಮಾಡಿದ ಎಲ್ಲಾ ಆರೋಪಗಳು ಆಧಾರ ರಹಿತ ಎಂದರು.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿದ, ರಾಜಕೀಯ ಇಲ್ಲದೆ ಐಟಿ ಅಧಿಕಾರಿಗಳು ಬರುವುದಿಲ್ಲ. ರಾಜಕೀಯ ನಡೆಯುತ್ತಾ ಇರುವುದು ನಮಗೆ ಗೊತ್ತಿದೆ. ಬಿಜೆಪಿ ಅಧಿಕಾರದಲ್ಲಿ ಇರುವ ಕಡೆ ಐಟಿ ದಾಳಿ ನಡೆಯುವುದಿಲ್ಲ ಎಂದರು. ಐದು ರಾಜ್ಯ ಚುನಾವಣೆಗೆ ಕರ್ನಾಟಕ ಕಲೆಕ್ಷನ್ ಸೆಂಟರ್ ಎಂಬ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ಅವನ್ಯಾರೋ ರಸ್ತೆ ಬೀದಿಯಲ್ಲಿ ಮಾತಾಡೋವರಿಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.

ಐಟಿ ದಾಳಿ, ಸರಣಿ ಟ್ವೀಟ್ ಮಾಡಿದ ಕುಮಾರಸ್ವಾಮಿ

ಐಟಿ ರೈಡ್ ವಿಚಾರವಾಗಿ ಸರಣಿ ಟ್ವಿಟ್ ಮಾಡಿದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ, ಪಂಚರಾಜ್ಯ ಚುನಾವಣೆ ಘೋಷಣೆ ಆಗಿದ್ದೇ ತಡ ರಾಜ್ಯದಲ್ಲಿ ಕುರುಡು ಕಾಂಚಾಣ ಕಂತೆ ಕಂತೆಯಾಗಿ ಕಾಟನ್ ಬಾಕ್ಸ್​ಗಳಲ್ಲಿ ಕುಣಿಯುತ್ತಿದೆ. ಅದೂ ಮಂಚದ ಕೆಳಗೆ. ಐಟಿದಾಳಿ ವೇಳೆ ಗುತ್ತಿಗೆದಾರನ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು? ಯಾರ ಹೆಣದ ಮೇಲೆ ಸಂಗ್ರಹಿಸಿದ ಪಾಪದ ಹಣವಿದು? ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ ಎಂದಿದ್ದಾರೆ.

ಆಯ್ದ ಗುತ್ತಿಗೆದಾರರಿಗೆ ಬಿಬಿಎಂಪಿಯಿಂದ 650 ಕೋಟಿ ರೂ. ಬಿಡುಗಡೆಯಾದ ಬೆನ್ನಲ್ಲೇ ಈ 42 ಕೋಟಿ ರೂ. ಐಟಿ ಅಧಿಕಾರಿಗಳಿಗೆ ಸಿಕ್ಕಿಬೀಳುತ್ತದೆ. ಅಲ್ಲಿಗೆ ಕಲೆಕ್ಷನ್ ನಿಜ ಎಂದಾಯಿತು. ಅದು ಎಷ್ಟು ಪರ್ಸಂಟೇಜ್? ಅದರ ಹಿಂದೆ ಅಡಗಿ ಕೂತಿರುವ ಆದಿಪುರುಷರು ಯಾರು? 23 ಬಾಕ್ಸ್​ಗಳಲ್ಲಿ ತುಂಬಿಡಲಾಗಿದ್ದ ಈ ಇಡಗಂಟು ಪಕ್ಕದ ತೆಲಂಗಾಣಕ್ಕೆ ಹೊರಟು ನಿಂತಿತ್ತು ಎನ್ನುವುದು ಮಾಹಿತಿ ಇದೆ. ಅಲ್ಲಿಗೆ ಚುನಾವಣೆಗಾಗಿ ಈ ಹಣವನ್ನು ಸಂಗ್ರಹ ಮಾಡಲಾಗಿತ್ತು ಎನ್ನುವುದು ಸತ್ಯ ಎಂದರು.

ಇದನ್ನೂ ಓದಿ: ಐಟಿ ಅಧಿಕಾರಿಗಳ ಭರ್ಜರಿ ಬೇಟೆ; ಬೆಂಗಳೂರಲ್ಲಿ ಒಂದು ವಾರದಲ್ಲಿ 80 ಕೋಟಿಗೂ ಅಧಿಕ ಹಣ ಪತ್ತೆ

ಈ ಕನಕ ಮಹಾಲಕ್ಷ್ಮಿಯ ಕಲೆಕ್ಷನ್​ಗೆ ‘ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ’ಯ ಕೈ ಕರಾಮತ್ತು ಅಂತ ಇನ್ನೊಂದು ಮಾಹಿತಿ. ಅಷ್ಟರಲ್ಲಿ ಐಟಿ ಇಲಾಖೆ ಮುಗಿಬಿದ್ದ ಪರಿಣಾಮ, ಗುಟ್ಟು ರಟ್ಟಾಗಿದೆ. ಅಲ್ಲಿಗೆ ಕಾಂಗ್ರೆಸ್ ಸರಕಾರದಲ್ಲಿ ಪರ್ಸಂಟೇಜ್ ಪಾರಮ್ಯ ಅವ್ಯಾಹತ ಎಂದಾಯಿತು? ಈಗ ಹೇಳಿ ಸನ್ಮಾನ್ಯ ಸಿದ್ದರಾಮಯ್ಯನವರೇ.. 42 ಕೋಟಿ ರೂ. ಬಗ್ಗೆ ಯಾವ ತನಿಖೆ ಮಾಡಿಸುತ್ತೀರಿ? ಸಿಬಿಐ, ಈಡಿ, ಹಾಲಿ ನ್ಯಾಯಾಧೀಶರು, ನಿವೃತ್ತ ನ್ಯಾಯಾಧೀಶರು? ದಯಮಾಡಿ ಹೇಳಿ ಎಂದರು.

ರೈತರು ಬರ, ವಿದ್ಯುತ್ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದಾರೆ. ಗುತ್ತಿಗೆದಾರರು ಅಯೋಮಯ ಸ್ಥಿತಿಯಲ್ಲಿದ್ದಾರೆ. ಆದರೂ ಕಲೆಕ್ಷನ್ ‘ಕೈ’ ಚಳಕ ಜೋರಾಗಿದೆ. ಪಂಚರಾಜ್ಯಗಳ ಪಾಲಿಕೆ ಕರ್ನಾಟಕ ಸಮೃದ್ಧ ಎಟಿಎಮ್. ಕಾವೇರಿ ನೀರು ತಮಿಳುನಾಡಿಗೆ ನಿರಂತರ ಹರಿಯುತ್ತಿದ್ದರೆ, ಕನ್ನಡಿಗರ ತೆರಿಗೆಲಕ್ಷ್ಮೀ ಎಲೆಕ್ಷನ್ ರಾಜ್ಯಗಳ ಪಾಲಾಗುತ್ತಿದ್ದಾಳೆ. ಆದಿಯಿಂದಲೂ ಇದೇ ಕಥೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೈಕಮಾಂಡ್​ಗೆ ಹಬ್ಬ. ಈಗಲೂ ಅದೇ ಆಗುತ್ತಿದೆ. ಪಂಚರಾಜ್ಯಗಳ ಚುನಾವಣೆಗಾಗಿ ಕರ್ನಾಟಕಕ್ಕೆ ಕನ್ನ ಹೊಡೆಯಲಾಗಿದೆ. ವೋಟು ಕೊಟ್ಟ ತಪ್ಪಿಗೆ ಕಾಂಗ್ರೆಸ್ ಉಂಡು ಹೋಗುತ್ತಿದೆ, ಕೊಂಡು ಹೋಗುತ್ತಿದೆ. ಇದು ಕನ್ನಡಿಗರ ಕರ್ಮ ಎಂದು ಟ್ವಿಟ್ ಮಾಡಿ ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಎಂಎಲ್​ಸಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, 42 ಕೋಟಿ ನಗದು ಹಣವನ್ನು ಯಾವುದಕ್ಕೆ ಸಂಗ್ರಹ ಮಾಡಲಾಗಿತ್ತು. ಯಾರ ಮೂಲಕ ಸಂಗ್ರಹ ಮಾಡಲಾಗಿತ್ತು, ಯಾರಿಗೆ ಕಳುಹಿಸುವುದಕ್ಕೆ ಈ ಹಣವನ್ನು ಸಂಗ್ರಹ ಮಾಡಲಾಗಿತ್ತು, ಪಂಚರಾಜ್ಯ ಚುನಾವಣೆಗೂ ನಂಟು ಇದೆಯಾ ಅಂತಾ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿದರು.

ಸಾಕ್ಷಿ ಸಮೇತ ಸಿಕ್ಕಿಬಿದ್ದ ಕಳ್ಳರು

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಟಿಎಂ ಆಗುತ್ತೆ ಎಂದು ಈ ಹಿಂದೆ ಅಮಿತ್ ಶಾ ಹೇಳಿದ್ದರು. ಇದೀಗ ಸಾಕ್ಷಿ ಸಮೇತ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಯಾವ ಕಮಿಷನ್ ಮೂಲಕ ಹಣ ಸಂಗ್ರಹಿಸಿದ್ದಾರೆ ಅಂತಾ ತನಿಖೆ ಆಗಲಿ. ಸಿಎಂ, ಡಿಸಿಎಂ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪಾತ್ರ ಏನು ಅಂತಾ ತನಿಖೆ ಆಗಬೇಕು. ಕೆಂಪಣ್ಣ ಕಾಂಗ್ರೆಸ್ ಪಕ್ಷದ​ ಏಜೆಂಟ್​ ಅನ್ನೋದು ಪ್ರೂವ್​ ಆಗುತ್ತಿದೆ. ಪತ್ತೆಯಾಗಿರುವ ದುಡ್ಡು ಪಂಚರಾಜ್ಯಗಳಿಗೆ ಎಲ್ಲೆಲ್ಲಿ ಹೋಗುತ್ತಿತ್ತೋ, ಈ ಬಗ್ಗೆ ತನಿಖೆಯಾದರೆ ಎಲ್ಲರೂ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದರು.

ಎಟಿಎಂ ಸರ್ಕಾರ ಅನ್ನೋದು ಈಗ ಸಾಕ್ಷಿ ಸಮೇತ ಗೊತ್ತಾಗಿದೆ ಎಂದು ಹೇಳಿದ ಬಿಜೆಪಿ ಶಾಸಕ ಡಾ.ಅಶ್ವತ್ಥ ನಾರಾಯಣ, ಕೇವಲ ಸಣ್ಣ ಮೊತ್ತವಷ್ಟೇ ಸಿಕ್ಕಿದೆ, ಇನ್ನೂ ಬಹಳಷ್ಟು ಕಡೆ‌ ಇರುತ್ತದೆ. ಕಿರುಕುಳ ನೀಡಿ ಹೆದರಿಸಿ ಕಲೆಕ್ಷನ್ ಮಾಡಿರುವ ಈ ದುಡ್ಡು ಯಾರಿಗೆ ಸೇರಿದ್ದು ಅಂತಾ ಗುತ್ತಿಗೆದಾರರು ಹೇಳಬೇಕು ಎಂದರು.

ಇದನ್ನೂ ಓದಿ: IT Raids: ಬೆಂಗಳೂರಿನಲ್ಲಿ ಮತ್ತೆ 10ಕ್ಕೂ ಹೆಚ್ಚು ಕಡೆ ಐಟಿ ದಾಳಿ, ಚಿನ್ನದ ವ್ಯಾಪಾರಿಗಳಿಗೆ ಶಾಕ್

ಹಿಂಸೆ ಕೊಟ್ಟು ವಸೂಲಿ ಮಾಡಿದ್ದಾರೆಂದು ಗುತ್ತಿಗೆದಾರರು ಹೇಳಬೇಕು. ನಮ್ಮ ಸರ್ಕಾರದ ಮೇಲೆ ಆಧಾರವಿಲ್ಲದೆ ಆರೋಪ ಮಾಡಿದ್ದರು. ಅಂದು ಆಪಾದನೆ ಮಾಡಿದವರಲ್ಲಿ ಅಂಬಿಕಾಪತಿ ಒಬ್ಬ. ಯಾವುದಾದರೂ ಗುತ್ತಿಗೆದಾರರ ಹತ್ತಿರ ಕ್ಯಾಶ್ ಹೇಗೆ ಬರುತ್ತದೆ? ಇದು ಕಿಕ್ ಬ್ಯಾಕ್ ದುಡ್ಡು, ವಸೂಲಿ ದುಡ್ಡು, ಕಮಿಷನ್ ದುಡ್ಡು ಎಂದು ವಾಗ್ದಾಳಿ ನಡೆಸಿದರು.

ಭರ್ಜರಿ ಟಾಂಗ್ ಕೊಟ್ಟ ಬಿಜೆಪಿ ಶಾಸಕ ಯತ್ನಾಳ್

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿ, ಕಾಂಗ್ರೆಸ್ ನಾಯಕಿ, ಮಾಜಿ ಕಾರ್ಪೋರೇಟರ್ ಅಶ್ವತ್ಥಮ್ಮ ಪತಿ ಅಂಬಿಕಾಪತಿಯ ಮನೆಯಲ್ಲಿ ಐಟಿ ಅಧಿಕಾರಿಗಳು ಸೀಜ್ ಮಾಡಿರುವುದು 42 ಕೋಟಿ ಹಣ! ಈತ ಯಾರ “ಚಿರಂಜೀವಿ” ಯವರ ಪರವಾಗಿ ಹಣ ಸಂಗ್ರಹ ಮಾಡುತ್ತಿದ್ದ ಎಂದು ಗುತ್ತಿಗೆದಾರರ ಬಳಿ ಕೇಳಿದರೆ ನಿಜ ಹೊರಬರಬಹುದು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನೇ ಸರ್ಕಾರದ ಪರವಾಗಿ ವಸೂಲಿಗೆ ಇಳಿದರೆ, ಗುತ್ತಿಗೆದಾರರನ್ನು ಕಾಪಾಡುವವರು ಯಾರು? ಈ ಹಣ ಯಾರದ್ದು ಎಂಬ ತನಿಖೆಯಾಗಲಿ ಎಂದರು.

“ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ! ಮಹದೇವಪ್ಪನ ದುಡ್ಡು, ಕಾಕಪಾಟಿಲನ ದುಡ್ಡು, ದಯಾನಂದನ ದುಡ್ಡು, 1/4ರಷ್ಟು ರಾಜಸ್ಥಾನಕ್ಕೆ, 1/4ರಷ್ಟು ಮಧ್ಯಪ್ರದೇಶಕ್ಕೆ, 1/4ರಷ್ಟು ತೆಲಂಗಾಣಕ್ಕೆ, 1/4 ರಷ್ಟು ಛತ್ತೀಸಘಡಕ್ಕೆ!! ಅವರಿಗೆ ವಿಧಾನಸೌಧ, ಜನರಿಗೆ ಲಾಲಬಾಗ್!” ಎಂದು ಯತ್ನಾಳ್ ಟ್ವೀಟ್ ಮಾಡಿದ್ದಾರೆ.

ಈ ಐಟಿ ರೇಡ್​ನಲ್ಲಿ ಕಾಂಗ್ರೆಸ್ ಏಜಂಟ್ ಅಂಬಿಕಾಪತಿಯ ಮನೆಯಲ್ಲಿ ದೊರೆತ 42 ಕೋಟಿ ಹಣದ ಮೂಲವನ್ನು ಹುಡುಕುವುದು ಬಹಳ ಸುಲಭ. ಬಿಬಿಎಂಪಿ ಬಿಡುಗಡೆ ಮಾಡಿರುವ 650 ಕೋಟಿ ಅನುದಾನ ಪಡೆದಿರುವ ಗುತ್ತಿಗೆದಾರರು ಯಾರು? ಅವರ ಹಿನ್ನಲೆ ಏನು? ಬಾಕಿ ಬಿಲ್ಲುಗಳ ವಿವರ!, 650 ಕೋಟಿ ರೂಗಳಿಗೆ ಎಷ್ಟು ಪರ್ಸೆಂಟೇಜ್ ಫಿಕ್ಸ್ ಮಾಡಲಾಗಿತ್ತು? ಈ ಹಣ ತಮಿಳುನಾಡಿನಿಂದ ತೆಲಂಗಾಣಕ್ಕೆ ಕಳುಹಿಸಲು ಯಾಕೆ ಯೋಜನೆ ಮಾಡಲಾಗಿತ್ತು? ತೆಲಂಗಾಣಕ್ಕೆ ಕಳುಹಿಸುವುದಾದರೆ ಚುನಾವಣೆಗಾಗಿ ಅಲ್ಲವೇ? ಕುಮಾರಕೃಪಾ ಗೋಡೆಗಳನ್ನು ಕೇಳಿದರು ಹೇಳುವುದು ಈ ಹಣ ನೀಡಿರುವ ಸುಮಾರು 23 ಗುತ್ತಿಗೆದಾರರು ಯಾರೆಂದು!, ಕೆಂಪಣ್ಣ ಆಂಡ್ ಕಂಪನಿಗೆ ಈ ಮಾಹಿತಿ ಇಲ್ಲವಾ? ಎಂದು ಟ್ವೀಟ್​ ಮೂಲಕ ಯತ್ನಾಳ್ ಪ್ರಶ್ನಿಸಿದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳುವುದೇನು?

ಅಂಬಿಕಾಪತಿ ಮನೆಯಲ್ಲಿ ಹಣ ಪತ್ತೆಯಾಗಿರುವ ವಿಚಾರ ಗೊತ್ತಾಯಿತು ಎಂದು ಹೇಳಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುತ್ತೇವೆ, ಪ್ರಧಾನಿಗೂ ಪತ್ರ ಬರೆಯುತ್ತೇವೆ. ಅಂಬಿಕಾಪತಿ ಬಹಳ ವರ್ಷಗಳಿಂದ ಕಂಟ್ರ್ಯಾಕ್ಟರ್​​ ಕೆಲಸ ಮಾಡುತ್ತಿಲ್ಲ. ಅಂಬಿಕಾಪತಿಯದ್ದು ಕೃಷಿ, ಕ್ರಷರ್ ಸೇರಿದಂತೆ ಅನೇಕ ವ್ಯಾಪಾರಗಳಿವೆ. ಅಂಬಿಕಾಪತಿ ಈಗ ಕಂಟ್ರಾಕ್ಟರ್ ಕೆಲಸವನ್ನೇ ನಿಲ್ಲಿಸಿಬಿಟ್ಟಿದ್ದಾರೆ ಎಂದಿದ್ದಾರೆ.

ಪಂಚರಾಜ್ಯಗಳ ಚುನಾವಣೆಗೆ ಗುತ್ತಿಗೆದಾರರ ಮೂಲಕ ಹಣ ಸಂಗ್ರಹ ಮಾಡಲಾಗುತ್ತಿದೆ ಎಂಬ ಬಿಜೆಪಿ ಶಾಸಕ ಎನ್. ಮುನಿರತ್ನ ಆರೋಪ ವಿಚಾರವಾಗಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಐಟಿ ಅಧಿಕಾರಿಗಳ ದಾಳಿಗೂ, ರಾಜ್ಯ ಸರ್ಕಾರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಬಂದ ಮೇಲೆ 500 ದಾಳಿ ಆಗಿದೆ. ಎಲ್ಲಾ ಪಕ್ಷಗಳ ನಾಯಕರ ಜೊತೆ ಗುತ್ತಿಗೆದಾರರು ಚೆನ್ನಾಗಿ ಇರುತ್ತಾರೆ. ಅದನ್ನು ನಮಗೆ ಕನೆಕ್ಟ್ ಮಾಡಲು ಆಗುತ್ತಾ? ಐಟಿ ದಾಳಿಯಾದ ತಕ್ಷಣ ಆ ಪಕ್ಷ ಈ ಪಕ್ಷ ಎಂದು ಹೇಳಲು ಆಗುತ್ತಾ? ಎಲ್ಲದಕ್ಕೂ ರಾಜಕೀಯ ಕಲ್ಪಿಸುವುದಕ್ಕೆ ಆಗಲ್ಲ. ಕೆಲವೊಂದು ಬಾರಿ ಸ್ವಾಭಾವಿಕವಾಗಿ ಐಟಿ ದಾಳಿ ನಡೆದಿರುತ್ತದೆ. ಕೆಲವೊಂದು ಆರೋಪ ಬಂದಾಗಲೂ ಐಟಿ ದಾಳಿ ಆಗುತ್ತದೆ ಎಂದರು.

ಪಂಚರಾಜ್ಯಗಳ ಚುನಾವಣೆಗೆ ಕರ್ನಾಟಕ ಕಲೆಕ್ಷನ್ ಕೇಂದ್ರ

ಕೋಟ್ಯಂತರ ರೂಪಾಯಿ ಪತ್ತೆಯಾಗಿರುವ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುತ್ತದೆ. ಈ ಮಾತನ್ನು ನಾವು ಹೇಳುತ್ತಲೇ ಬಂದಿದ್ದೆವು. ಗುತ್ತಿಗೆದಾರರಿಗೆ ರಾಜ್ಯ ಸರ್ಕಾರ ಬಾಕಿ ಹಣವನ್ನು ಬಿಡುಗಡೆ ಮಾಡಿರಲಿಲ್ಲ. ಕಾಂಗ್ರೆಸ್​​ ಸರ್ಕಾರ ಈಗ ಗುತ್ತಿಗೆದಾರರನ್ನು ಕೈಗೊಂಬೆ ಮಾಡಿಕೊಂಡಿದೆ. ಪಂಚರಾಜ್ಯಗಳ ಚುನಾವಣೆಗೆ ಕರ್ನಾಟಕ ಕಲೆಕ್ಷನ್ ಕೇಂದ್ರವಾಗಿದೆ. ಐಟಿ ಅಧಿಕಾರಿಗಳ ದಾಳಿಯಿಂದ ಕಲೆಕ್ಷನ್ ಕೊಂಡಿಗಳು ಹೊರ ಬರುತ್ತಿದೆ. ಇದರ ಹಿಂದಿರುವ ಕೈಗಳ ಯಾರದ್ದು ಎಂದು ಜನರಿಗೆ ತಿಳಿಯಬೇಕು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Fri, 13 October 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್