ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ನಳಿನ್ ಕುಮಾರ್ ಕಟೀಲ್ಗೆ ಮಹತ್ವದ ಜವಾಬ್ದಾರಿ ನೀಡಿದ ಹೈಕಮಾಂಡ್
ದಕ್ಷಿಣ ಕನ್ನಡದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಲೋಕಸಭಾ ಬಿಜೆಪಿ ಟಿಕೆಟ್ ಕೈತಪ್ಪಿದೆ. ಕಟೀಲ್ ಅವರ ಬದಲಿಗೆ ಕ್ಯಾಪ್ಟನ್ ಬೃಜೇಶ್ ಚೌಟ ಎನ್ನುವರಿಗೆ ದಕ್ಷಿಣ ಕನ್ನಡ ಲೋಕಸಭಾ ಟಿಕೆಟ್ ನೀಡಲಾಗಿದೆ. ಇದರಿಂದ ಬೇಸರದಲ್ಲಿರುವ ನಳಿನ್ ಕುಮಾರ್ ಕಟೀಲ್ಗೆ ಹೈಕಮಾಂಡ್ ಮಹತ್ವದ ಜವಾಬ್ದಾರಿಯನ್ನು ನೀಡಿದೆ.
![ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ನಳಿನ್ ಕುಮಾರ್ ಕಟೀಲ್ಗೆ ಮಹತ್ವದ ಜವಾಬ್ದಾರಿ ನೀಡಿದ ಹೈಕಮಾಂಡ್](https://images.tv9kannada.com/wp-content/uploads/2024/03/nalin-kumar-kateel-2.jpg?w=1280)
ಬೆಂಗಳೂರು, (ಮಾರ್ಚ್ 27): ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ (Dakshina Kannada Loksabha) ಟಿಕೆಟ್ ಕೈತಪ್ಪಿದ್ದರಿಂದ ಬೇಸರದಲ್ಲಿರುವ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ಗೆ (Nalin Kumar Kateel )ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ. ಹೌದು.. ನಳಿನ್ ಕುಮಾರ್ ಕಟೀಲ್ ಅವರನ್ನು ಕೇರಳ (Kerala) ಲೋಕಸಭಾ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಇದರ ಜೊತೆ ತೆಲಂಗಾಣ ಮತ್ತು ಮಹಾರಾಷ್ಟ್ರ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಕರ್ನಾಟಕದ ಬಿಜೆಪಿ ನಾಯಕರುಗಳಿಗೆ ನೀಡಲಾಗಿದೆ.
ತೆಲಂಗಾಣ ಲೋಕಸಭಾ ಚುನಾವಣೆಯ ಬಿಜೆಪಿ ಉಸ್ತುವಾರಿಯಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು ನಿರ್ಮಲ್ ಕುಮಾರ್ ಸುರಾನಾ ಅವರನ್ನು ಮಹಾರಾಷ್ಟ್ರ ಬಿಜೆಪಿ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ಟಿಕೆಟ್ ಕೈತಪ್ಪಿದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದ ಕಟೀಲ್
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲ್ ಮೂರು ಬಾರಿ ಸಂಸದರಾಗಿದ್ದಾರೆ. ಆದ್ರೆ, ಈ ಬಾರಿ ಹೈಕಮಾಂಡ್ ಹೊಸ ಮುಖಕ್ಕೆ ಮಣೆ ಹಾಕಿದೆ. ಟಿಕೆಟ್ ಕೈತಪ್ಪಿದ್ದರು ಸಹ ನಳಿನ್ ಕಟೀಲ್ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಭಾವುಕರಾಗಿ ಮಾತನಾಡಿದ್ದರು. ಅಲ್ಲದೇ ನನಗೆ ಮೂರು ಬಾರಿ ಅವಕಾಶ ನೀಡಿದ್ದಾರೆ. ಪಕ್ಷ ನಿಂತ ನೀರಾಗಬಾರದು, ಹೊಸಬರು ಬರ್ತಾ ಇರಬೇಕು. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ, ಪಕ್ಷ ಕಸ ಗುಡಿಸಿ ಎಂದರೂ ಗುಡಿಸುತ್ತೇನೆ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:56 pm, Wed, 27 March 24