Rajya Sabha Election 2022: ಡಿಕೆ ಶಿವಕುಮಾರ್ಗೆ ಮತ ತೋರಿಸಿದ ಹೆಚ್ಡಿ ರೇವಣ್ಣ! ಚುನಾವಣಾಧಿಕಾರಿಗೆ ದೂರು ನೀಡಿದ ಬಿಜೆಪಿ, ಕಾಂಗ್ರೆಸ್
ಮತದಾನ ಮಾಡಿ ತಮ್ಮ ಮತವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ತೋರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ರೇವಣ್ಣರವರ ಮತವನ್ನು ಅಸಿಂಧು ಮಾಡುವಂತೆ ಬಿಜೆಪಿ ಚುನಾವಣಾಧಿಕಾರಿಗೆ ದೂರು ನೀಡಿದೆ.
ಬೆಂಗಳೂರು: ಇಂದು ರಾಜ್ಯಸಭಾ (Rajya Sabha Election) 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 4 ಸ್ಥಾನಗಳಿಗೆ ಮೂರು ಪಕ್ಷದ ಒಟ್ಟು 6 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಶಾಸಕರು ಬಂದು ಮತದಾನ ಮಾಡುತ್ತಿದ್ದಾರೆ. ಈ ವೇಳೆ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ (HD Revanna) ಮತದಾನ ಮಾಡಿ ತಮ್ಮ ಮತವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ತೋರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ರೇವಣ್ಣರವರ ಮತವನ್ನು ಅಸಿಂಧು ಮಾಡುವಂತೆ ಬಿಜೆಪಿ, ಕಾಂಗ್ರೆಸ್ ಚುನಾವಣಾಧಿಕಾರಿಗೆ ದೂರು ನೀಡಿದೆ.
ಈ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಹೆಚ್ಡಿ ರೇವಣ್ಣ, ನಾನು ಮತ ಹಾಕಿದ್ದನ್ನು ಯಾರಿಗೂ ತೋರಿಸಿಲ್ಲ. ನಾನು ಮತ ಹಾಕುವುದನ್ನ ಡಿಕೆಶಿಗೆ ಯಾಕೆ ತೋರಿಸಲಿ? ಉದ್ದೇಶಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.
ಕುಮಾರಸ್ವಾಮಿ ಹೇಳಿದ್ದೇನು? ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ 2 ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಹೀಗೆ ಮಾಡುತ್ತಿವೆ. ಸೋಲುವ ಭೀತಿಯಿಂದ ಈ ರೀತಿಯಾಗಿ ಮಾಡುತ್ತಿವೆ. ಅಲ್ಲಿ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.
ಅಸಿಂಧು ಆಗುವ ಸಾಧ್ಯತೆ: ಮತವನ್ನು ಯಾರಿಗೂ ತೋರಿಸುವಂತಿಲ್ಲ. ಹಾಗೇನಾದರೂ ಬೇರೆಯವರ ಮುಂದೆ ಪ್ರದರ್ಶಿಸಿದರೆ ಆ ಮತವನ್ನು ಅಸಿಂಧು ಎಂದು ಘೋಷಿಸಲಾಗುತ್ತದೆ. ಅದೇ ರೀತಿ ಹೆಚ್ಡಿ ರೇವಣ್ಣ ತಮ್ಮ ಮತವನ್ನು ಡಿಕೆ ಶಿವಕುಮಾರ್ ಮುಂದೆ ಪ್ರದರ್ಶಿಸಿದರೆ ಮತ ಅಸಿಂಧು ಆಗುತ್ತದೆ.
ಶ್ರೀನಿವಾಸ್ ವಿರುದ್ಧ ರೇವಣ್ಣ ಗರಂ: ಅಡ್ಡ ಮತದಾನ ಮಾಡಿರುವ ಹಿನ್ನೆಲೆ ಗುಬ್ಬಿ ಶಾಸಕ ಶ್ರೀನಿವಾಸ್ ವಿರುದ್ಧ ರೇವಣ್ಣ ಗರಂ ಆಗಿದ್ದಾರೆ. ನಾನು ಕ್ರಾಸ್ ವೋಟ್ ಮಾಡಿಲ್ಲ. ಜೆಡಿಎಸ್ಗೆ ಮತ ಹಾಕಿದ್ದೇನೆ ಎಂದು ಶಾಸಕ ಶ್ರೀನಿವಾಸ್ ಹೇಳಿದ್ದಾರೆ.
ಮತ ಎಣಿಕೆ ವಿಳಂಬ ಸಾಧ್ಯತೆ: ಚುನಾವಣಾ ಮತ ಎಣಿಕೆ ವಿಳಂಬವಾಗುವ ಸಾಧ್ಯತೆಯಿದೆ. ಸಂಜೆ 5 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ನಿಗದಿಯಾಗಿತ್ತು. ಕನಿಷ್ಠ ಎರಡು ಗಂಟೆ ಕಾಲ ಮತ ಎಣಿಕೆ ವಿಳಂಬವಾಗುವ ಸಾಧ್ಯತೆಯಿದೆ. ರೇವಣ್ಣ ಮತ ವಿಚಾರಕ್ಕೆ ಸಂಬಂಧಿಸಿ ಆಯೋಗ ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ವಿಳಂಬವಾಗಬಹುದು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:28 am, Fri, 10 June 22