ಬೆಂಗಳೂರು, ಮಾರ್ಚ್ 27: ಲೋಕಸಭೆ ಚುನಾವಣೆಗೆ (Lok Sabha Elections) ಒಂದು ಕ್ಷೇತ್ರಕ್ಕಷ್ಟೇ ಅಭ್ಯರ್ಥಿ ಘೋಷಣೆ ಬಾಕಿ ಇರಿಸಿಕೊಂಡಿರುವ ಬಿಜೆಪಿ (BJP) ಈಗ ಅಸಮಾಧಾನ ಶಮನ ಮತ್ತು ಸಮನ್ವಯತೆಯತ್ತ ಗಮನ ಕೇಂದ್ರೀಕರಿಸಿದೆ. ದಾವಣಗೆರೆ ಮತ್ತು ಬೆಳಗಾವಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮದ್ದು ಅರೆಯಲು ಹೊರಟಿದ್ದರೆ, ಮಂಡ್ಯದಲ್ಲಿ ದೋಸ್ತಿ ಗೆಲುವಿಗೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶ್ರಮ ಹಾಕಿದ್ದಾರೆ.
ಲೋಕಸಭಾ ಟಿಕೆಟ್ ವಿಚಾರವಾಗಿ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಬೆಂಕಿ ತೀವ್ರಗೊಂಡಿದೆ. ಹೀಗಾಗಿಯೇ ಅಸಮಾಧಾನದ ಗಾಯಕ್ಕೆ ಮದ್ದರೆಯಲು ಖುದ್ದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಅಖಾಡಕ್ಕಿಳಿದಿದ್ದಾರೆ. ಇದರ ಮೊದಲ ಹಂತವಾಗಿ ಮಂಗಳವಾರ ದಾವಣಗೆರೆಗೆ ತೆರಳಿ ಅಸಮಾಧಾನಿತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗಾಯತ್ರಿ ಸಿದ್ದೇಶ್ವರಗೆ ಟಿಕೆಟ್ ನೀಡಿದ್ದಕ್ಕೆ ತೀವ್ರ ವಿರೋಧವ್ಯಕ್ತವಾಗಿತ್ತು. ಮಂಗಳವಾರವಷ್ಟೇ ಅಸಮಾಧಾನಿತರನ್ನು ಮನವೊಲಿಸಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯತ್ನಿಸಿದ್ದರು. ಆದರೆ, ಯಶಸ್ವಿಯಾಗಿರಲಿಲ್ಲ. ಸದ್ಯ ಅಸಮಾಧಾನಗೊಂಡಿದ್ದ ರವೀಂದ್ರನಾಥ್ಗೆ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ನೀಡಿದ್ದಾರೆ. ಆದರೆ, ಬಂಡಾಯ ಟೀಮ್ ಮಾತ್ರ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಎಂಪಿ ರೇಣುಕಾಚಾರ್ಯ ಮತ್ತೊಂದು ಸಭೆ ಸೇರುವ ಸೂಚನೆ ಕೊಟ್ಟಿದ್ದಾರೆ.
ಅತ್ತ ಬಿಎಸ್ವೈ ಬಂಡಾಯ ಶಮನಕ್ಕೆ ಮುಂದಾಗಿದ್ದರೆ ಇತ್ತ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಸಮನ್ವಯತೆ ಕಾಪಾಡಿಕೊಳ್ಳಲು ಮಂಡ್ಯ ಮತಕ್ಷೇತ್ರದ ನಾಯಕರನ್ನು ಭೇಟಿಯಾಗಿದ್ದಾರೆ. ವಿಜಯೇಂದ್ರ ಮಂಡ್ಯದ ಮುಖಂಡರನ್ನು ಬೆಂಗಳೂರಿಗೆ ಕರೆಸಿಕೊಂಡು ಮನವೊಲಿಕೆ ಯತ್ನ ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಂಡ್ಯ ಮುಖಂಡರು ವಿಧಾನಸಭೆಯ ಪರಾಜಿತ ಅಭ್ಯರ್ಥಿಗಳ ಜೊತೆ ಸಭೆ ಮಾಡಿದ್ದಾರೆ. ಸಭೆಯಲ್ಲಿ ಮಾಜಿಸಚಿವ ಕೆಸಿ ನಾರಾಯಣ ಗೌಡ ಕೂಡ ಭಾಗಿಯಾದ್ದರು.
ಸಭೆಯಲ್ಲಿ ವಿಜಯೇಂದ್ರ ಮುಂದೆ ಮಂಡ್ಯ ಮುಖಂಡರು ಅಸಮಾಧಾನ ಹೇಳಿಕೊಂಡಿದ್ದಾರೆ. ಹಿಂದೆ ಯುದ್ಧ ಮಾಡಿದಂತೆ ಜೆಡಿಎಸ್ ವಿರುದ್ಧ ಚುನಾವಣೆ ಮಾಡಿದ್ದೇವೆ. ಗೆದ್ದ ಮೇಲೆ ಕುಮಾರಸ್ವಾಮಿ ಗೌರವ ಕೊಡುವುದಿಲ್ಲ. ಹೀಗಿರುವಾಗ ಯಾವ ಆಧಾರದಲ್ಲಿ ಕೆಲಸ ಮಾಡಬೇಕು ಅಂತ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಕ್ಷೇತ್ರವನ್ನು ನಾವೇ ಉಳಿಸಿಕೊಳ್ಳಬಹುದಾಗಿತ್ತು, ಸಮಯ ಕೊಡಿ, ಯೋಚನೆ ಮಾಡಿ ಹೇಳ್ತೇವೆ ಎಂದು ಹೇಳಿದ್ದಾರೆ. ಆಗ ಮುಖಂಡರ ಮನವೊಲಿಸಲು ಮುಂದಾದ ವಿಜಯೇಂದ್ರ ಕ್ಷೇತ್ರ ಬಿಟ್ಟು ಕೊಟ್ಟಿದ್ದು ವರಿಷ್ಠರ ನಿರ್ಧಾರ ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರಿಗೋಸ್ಕರ ಕೆಲಸ ಮಾಡಿ. ‘ನಿಮ್ಮ ಗೌರವ ಕಡಿಮೆಯಾಗದಂತೆ ನೋಡಿಕೊಳ್ಳೋದು ನನ್ನ ಜವಾಬ್ದಾರಿ ಅಂತ ಭರವಸೆ ನೀಡಿದ್ದಾರೆ.
ಮಂಗಳವಾರದ ಸಭೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅನುಪಸ್ಥಿತಿ ಇತ್ತಲ್ಲದೇ, ಇಂದು ಬೆಂಗಳೂರಿನಲ್ಲಿ ಅವರು ಬೆಂಬಲಿಗರ ಸಭೆ ನಡೆಸಲಿದ್ದಾರೆ. ಬಳಿಕ ಮುಂದಿನ ನಿಲುವು ಪ್ರಕಟಿಸುವ ಸಾಧ್ಯತೆ ಹೆಚ್ಚಾಗಿದೆ. ಇಂದು ಹಳೆ ಮೈಸೂರು ಭಾಗದಲ್ಲಿ ವಿಜಯೇಂದ್ರ ಪ್ರವಾಸ ಕೈಗೊಳ್ಳುತ್ತಿದ್ದು, ಸುಮಲತಾರನ್ನೂ ಭೇಟಿ ಮಾಡುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ದಾವಣಗೆರೆ ಬಿಜೆಪಿಯಲ್ಲಿನ ಭಿನ್ನಮತ ಶಮನ ಯತ್ನ ವಿಫಲ, ಕೋಪದಿಂದಲೇ ಹೋದ ಶಿಷ್ಯ ರೇಣುಕಾಚಾರ್ಯ
ಇತ್ತ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದ ವಿರುದ್ಧ ಈಶ್ವರಪ್ಪ ಸಮರ ಮುಂದುವರಿಸಿದ್ದಾರೆ. ಏಪ್ರಿಲ್ 12ರಂದು ಶಿವಮೊಗ್ಗ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸೋದಾಗಿ ಹೇಳಿದ್ದಾರೆ. ಇನ್ನು ಬಿಎಸ್ವೈ ಕುಟುಂಬದ ಕಡೆಗೆ ಮತ್ತೆ ಮಾತಿನ ಬಾಣ ಬಿಟ್ಟಿದ್ದಾರೆ.
ಸದ್ಯ ಬಿಜೆಪಿಯಲ್ಲಿ ಅಸಮಾಧಾನ ಶಮನ ಮಾಡುವುದೇ ಕಮಲ ನಾಯಕರ ಕಾಯಕವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ