ದಾವಣಗೆರೆ ಬಿಜೆಪಿಯಲ್ಲಿನ ಭಿನ್ನಮತ ಶಮನ ಯತ್ನ ವಿಫಲ, ಕೋಪದಿಂದಲೇ ಹೋದ ಶಿಷ್ಯ ರೇಣುಕಾಚಾರ್ಯ
ಸ್ಥಳೀಯ ನಾಯಕರ ತೀವ್ರ ವಿರೋಧದ ನಡುವೆಯೂ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಸಂಸದ ಜಿಎಂ ಸಿದ್ದೇಶ್ವರ ಬದಲಿಗೆ ಅವರ ಪತ್ನಿಗೆ ಘೋಷಣೆ ಮಾಡಲಾಗಿದೆ. ಆದರೆ, ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಎಂಪಿ ರೇಣುಕಾಚಾರ್ಯ ಮತ್ತು ತಂಡ ಅಸಮಾಧಾನಗೊಂಡಿದ್ದು, ಮುನಿಸು ಶಮನಗೊಳಿಸಲು ಯಡಿಯೂರಪ್ಪ ಅವರು ದಾವಣಗೆರೆಯಲ್ಲಿ ಅತೃಪ್ತ ಸಭೆ ನಡೆಸಿದರು. ಈ ವೇಳೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಇದ್ದರು.
ದಾವಣಗೆರೆ, ಮಾ.26: ಸಂಸದ ಜಿಎಂ ಸಿದ್ದೇಶ್ವರ (GM Siddeshwara) ಮತ್ತು ಅವರ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎಂಬ ಸ್ಥಳೀಯ ಬಿಜೆಪಿ ನಾಯಕರ ವಿರೋಧದ ನಡುವೆಯೂ ಸಿದ್ದೇಶ್ವರ ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ನೀಡಲಾಗಿದೆ. ಇದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ಸೇರಿದಂತೆ ಸ್ಥಳೀಯ ನಾಯಕರ ಕಣ್ಣು ಕೆಂಪಗಾಗಿಸಿದೆ. ಈ ವಿಚಾರವಾಗಿ ಇಂದು ಬಿಎಸ್ ಯಡಿಯೂರಪ್ಪ (BS Yediyurappa) ಅವರು ತನ್ನ ಶಿಷ್ಯನ ಮುನಿಸು ಶಮನಕ್ಕೆ ಸಭೆ ನಡೆಸಿ ಮಾತುಕತೆ ನಡೆಸಿದರೂ ರೇಣುಕಾಚಾರ್ಯ ಅವರು ತೃಪ್ತರಾಗದೆ ಕೋಪದಿಂದಲೇ ಹೊರನಡೆದರು.
ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ದಾವಣಗೆರೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಹೀಗಾಗಿ ದಾವಣಗೆರೆ ನಗರದ ಹೊರ ವಲಯದ ಅಪೂರ್ವ ರೆಸಾರ್ಟನಲ್ಲಿ ಅಸಮಾಧಾನಿತ ನಾಯಕರ ಜೆತೆ ಯಡಿಯೂರಪ್ಪ ಅವರು ಸಭೆ ನಡೆಸಿದ್ದು, ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಉಪಸ್ಥಿತರಿದ್ದರು. ಈ ಸಭೆಗೆ ಎಂ.ಪಿ.ರೇಣುಕಾಚಾರ್ಯ ನೇತೃತ್ವದ ರೆಬಲ್ ತಂಡ ಕೂಡ ಭಾಗಿಯಾಗಿದೆ.
ಮುರಗೇಶ ನಿರಾಣಿಗೆ ಪ್ರವೇಶ ನಿರಾಕರಣೆ
ರೆಬಲ್ ಬಿಜೆಪಿ ಸಭೆಗೆ ಹಾಲಿ ಸಂಸದ ಜಿಎಂ ಸಿದ್ದೇಶ್ವರ, ಮಾಜಿ ಸಚಿವ ಮುರಗೇಶ ನಿರಾಣಿ, ಮಾಜಿ ಶಾಸಕ ಎಸ್ ವಿ ರಾಮಚಂದ್ರ, ಎಚ್ ಪಿ ರಾಜೇಶ್ ಆಗಮಿಸಿದ್ದರು. ಆದರೆ, ನಿರಾಣಿಗೆ ಪ್ರವೇಶ ನಿರಾಕರಿಸಲಾಗಿದೆ. ಆದರೆ, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಗೈರಾಗಿದ್ದಾರೆ.
ಇದನ್ನೂ ಓದಿ: ಈಶ್ವರಪ್ಪಗೆ ವಿಧಾನಸಭಾ ಚುನಾವಣೆಯಲ್ಲಿ ಅನ್ಯಾಯವಾಗಿತ್ತು, ಈಗಲಾದರೂ ಟಿಕೆಟ್ ಕೊಡಬೇಕಿತ್ತು: ಎಂಪಿ ರೇಣುಕಾಚಾರ್ಯ
ಅಸಮಾಧಾನಿತರ ಜೊತೆ ಊಟ ಮಾಡಿದ ಯಡಿಯೂರಪ್ಪ
ಗಾಯತ್ರಿಗೆ ದಾವಣಗೆರೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಬೇಸರಗೊಂಡಿರುವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಪ್ರಮುಖರ ಜೊತೆ ಯಡಿಯೂರಪ್ಪ ಅವರು ಊಟ ಮಾಡಿದ್ದಾರೆ. ಬಳಿಕ ಸಿದ್ದೇಶ್ವರ ಮತ್ತು ಅವರ ಬೆಂಬಲಿಗರನ್ನು ಹೊರಗಿಟ್ಟು ರೆಬಲ್ ನಾಯಕರೊಂದಿಗೆ ಯಡಿಯೂರಪ್ಪ ಅವರು ಗೌಪ್ಯ ಸಭೆ ನಡೆಸಿದರು. ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ್, ಕರುಣಾಕಾರ ರೆಡ್ಡಿ ಮತ್ತಿತರರ ಜೊತೆ ಬಿಜೆಪಿ ಚರ್ಚೆ ನಡೆಸಿದರು.
ಸಿದ್ದೇಶ್ವರ ಬಣಕ್ಕೆ ಜಯ, ರೆಬಲ್ ಬಣಕ್ಕೆ ಮುಖಭಂಗ
ಸಭೆಯ ಬಳಿಕ ಬಹುತೇಕ ರೆಬಲ್ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ರೆಬಲ್ ತಂಡದ ನೇತೃತ್ವ ವಹಿಸಿದ್ದ ಮಾಜಿ ಸಚಿವ ಎಸ್ಎ ರವೀಂದ್ರನಾಥ ಅವರಿಗೆ ಯಡಿಯೂರಪ್ಪ ಅವರು ಚುನಾವಣೆ ಉಸ್ತುವಾರಿಯನ್ನಾಗಿ ನೇಮಿಸುವ ಮೂಲಕ ನೀರು ಹಾಕಿ ಉರಿಯುತ್ತಿರುವ ಬೆಂಕಿಯನ್ನು ಸ್ವಲ್ಪಮಟ್ಟಿಗೆ ತಣಿಸಿದ್ದಾರೆ. ಇದರಿಂದಾಗಿ ರೆಬಲ್ ಬಣಕ್ಕೆ ಮುಖಭಂಗ ಉಂಟಾಗಿದ್ದು, ಜಿ.ಎಂ.ಸಿದ್ದೇಶ್ವರ ಬಣಕ್ಕೆ ಜಯವಾಗಿದೆ.
ಮತ್ತೆ ರೆಬಲ್ ನಾಯಕರ ಸಭೆ
ಯಡಿಯೂರಪ್ಪ ಅವರು ರೇಣುಕಾಚಾರ್ಯ ಅವರನ್ನು ಮನವೊಲಿಸುವಲ್ಲಿ ವಿಫಲರಾಗಿದ್ದಾರೆ. ಸಭೆಯ ಬಳಿಕ ತೀವ್ರ ಬೇಸರದಿಂದ ಹೊರ ಬಂದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಮತ್ತೆ ಸಭೆ ಸೇರುವ ಸೂಚನೆ ನೀಡಿದ್ದಾರೆ. ಸಭೆ ಕುರಿತು ಯಾವುದೇ ಪ್ರಶ್ನೆಗೆ ಉತ್ತರ ನೀಡದೇ ಆಕ್ರೋಶದಿಂದಲೇ ತೆರಳಿದರು.
ಸಭೆಯ ಬಳಿಕ ಮಾತನಾಡಿದ ಯಡಿಯೂರಪ್ಪ, ದಾವಣಗೆರೆ ಚುನಾವಣೆಯಲ್ಲಿ ಐತಿಹಾಸಿಕ ಮತಗಳ ಅಂತರದಲ್ಲಿ ಗೆಲ್ಲಿಸಲು ಶ್ರಮಿಸುತ್ತಾರೆ. ರವೀಂದ್ರನಾಥ್ ಅವರಿಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ ನೀಡಲಾಗಿದೆ. ಯಾವುದೇ ಷರತ್ತಿಲ್ಲ ರವೀಂದ್ರನಾಥ್ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ