ಬಿಜೆಪಿ, ಜೆಡಿಎಸ್ ಮೈತ್ರಿ; ಪ್ರಧಾನಿ ಮೋದಿ ಭೇಟಿ ವೇಳೆ 5 ಸ್ಥಾನಗಳಿಗೆ ಬೇಡಿಕೆ ಇಡಲಿದ್ದಾರಾ ಹೆಚ್​ಡಿ ದೇವೇಗೌಡರು?

BJP-JDS alliance; ದೇವೇಗೌಡರ ನೇತೃತ್ವದ ಪಕ್ಷವು ಮಂಡ್ಯ, ಹಾಸನ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರುಗಳಿಗೆ ಬೇಡಿಕೆ ಇಡಲಿದೆ ಎನ್ನಲಾಗಿದೆ. ಈ ಐದು ಸ್ಥಾನಗಳಲ್ಲಿ ಕೋಲಾರ ಮತ್ತು ತುಮಕೂರಿನಲ್ಲಿ ಬಿಜೆಪಿ ಮತ್ತು ಮಂಡ್ಯದಿಂದ ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಹಾಸನದಲ್ಲಿ ಜೆಡಿಎಸ್ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು.

ಬಿಜೆಪಿ, ಜೆಡಿಎಸ್ ಮೈತ್ರಿ; ಪ್ರಧಾನಿ ಮೋದಿ ಭೇಟಿ ವೇಳೆ 5 ಸ್ಥಾನಗಳಿಗೆ ಬೇಡಿಕೆ ಇಡಲಿದ್ದಾರಾ ಹೆಚ್​ಡಿ ದೇವೇಗೌಡರು?
ಪ್ರಧಾನಿ ಮೋದಿ & ಹೆಚ್​ಡಿ ದೇವೇಗೌಡ

Updated on: Sep 20, 2023 | 5:33 PM

ಬೆಂಗಳೂರು, ಸೆಪ್ಟೆಂಬರ್ 20: ಜೆಡಿಎಸ್ (JDS) ಮುಖಂಡರಾದ ಹೆಚ್​​ಡಿ ಕುಮಾರಸ್ವಾಮಿ ಮತ್ತು ಅವರ ಸಹೋದರ ಹೆಚ್​​ಡಿ ರೇವಣ್ಣ ಗುರುವಾರ ದೆಹಲಿಗೆ ತೆರಳಲಿದ್ದಾರೆ. ಅಲ್ಲಿ ಅವರು ಪಕ್ಷದ ವರಿಷ್ಠ ಹೆಚ್​ಡಿ ದೇವೇಗೌಡರ (HD Deve Gowda) ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿ ಬಿಜೆಪಿಯೊಂದಿಗೆ ಮೈತ್ರಿಗೆ ಸಂಬಂಧಿಸಿದ ಮಾತುಕತೆ ಅಂತಿಮಗೊಳಿಸುವ ನಿರೀಕ್ಷೆಯಿದೆ. ಸಭೆಯಲ್ಲಿ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಐದಕ್ಕೆ ಚೌಕಾಸಿ ಮಾಡುವ ನಿರೀಕ್ಷೆಯಿದೆ.

ಕುಮಾರಸ್ವಾಮಿ ಅವರು ಗುರುವಾರ ದೆಹಲಿಗೆ ತೆರಳುವುದಾಗಿ ಖಚಿತಪಡಿಸಿದ್ದಾರೆ. ದೇವೇಗೌಡರು ಹಾಗೂ ರೇವಣ್ಣ ಅಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಜೆಡಿಎಸ್ ನಾಯಕರು ಈಗಾಗಲೇ ಸುಳಿವು ನೀಡಿದ್ದರೂ, ಯಾರೂ ಅದನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ ಮತ್ತು ಸೀಟು ಹಂಚಿಕೆ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈ ತಿಂಗಳ ಆರಂಭದಲ್ಲಿ ದೇವೇಗೌಡರು ಪ್ರಧಾನಿ ಮೋದಿ ಮತ್ತು ಶಾ ಅವರನ್ನು ಭೇಟಿ ಮಾಡಿದ್ದಾರೆ ಮತ್ತು ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲು ಜೆಡಿಎಸ್ ಜತೆ ಒಪ್ಪಂದಕ್ಕೆ ಬರಲಾಗಿದೆ ಎಂದು ಹೇಳಿದ್ದರು.

ಅಂದಿನಿಂದ ಜೆಡಿಎಸ್ ವರಿಷ್ಠರು ‘ಇನ್ನೂ ಸಮಯವಿದೆ’ ಎಂದು ಮೌನ ವಹಿಸಿದ್ದರು. ಗಣೇಶ ಚತುರ್ಥಿಯ ನಂತರ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಯಲಿದೆ ಎಂದು ಕುಮಾರಸ್ವಾಮಿ ಕಳೆದ ವಾರ ಸುಳಿವು ನೀಡಿದ್ದರು.

5 ಸ್ಥಾನಕ್ಕೆ ಜೆಡಿಎಸ್ ಬೇಡಿಕೆ?

ಜೆಡಿಎಸ್‌ಗೆ 28 ​​ಸ್ಥಾನಗಳ ಪೈಕಿ 4 ಸ್ಥಾನಗಳನ್ನು ಬಿಟ್ಟುಕೊಡಲು ಶಾ ಒಪ್ಪಿಕೊಂಡಿದ್ದಾರೆ ಎಂದು ಯಡಿಯೂರಪ್ಪ ಖಚಿತಪಡಿಸಿದ್ದರು. ಆದರೆ ಕುಮಾರಸ್ವಾಮಿ ಅವರ ಆಪ್ತ ಮೂಲಗಳು ಪಕ್ಷವು ಐದು ಸ್ಥಾನಗಳಿಗಿಂತ ಕಡಿಮೆಯ ಪ್ರಸ್ತಾಪವನ್ನು ಸ್ವೀಕರಿಸಲು ಸಿದ್ಧವಿಲ್ಲ ಎಂದು ತಿಳಿಸಿವೆ.

ದೇವೇಗೌಡರ ನೇತೃತ್ವದ ಪಕ್ಷವು ಮಂಡ್ಯ, ಹಾಸನ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರುಗಳಿಗೆ ಬೇಡಿಕೆ ಇಡಲಿದೆ ಎನ್ನಲಾಗಿದೆ ಎಂದು ‘ನ್ಯೂಸ್ 9’ ವರದಿ ಮಾಡಿದೆ. ಈ ಐದು ಸ್ಥಾನಗಳಲ್ಲಿ ಕೋಲಾರ ಮತ್ತು ತುಮಕೂರಿನಲ್ಲಿ ಬಿಜೆಪಿ ಮತ್ತು ಮಂಡ್ಯದಿಂದ ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಹಾಸನದಲ್ಲಿ ಜೆಡಿಎಸ್ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು.

ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಮೈತ್ರಿ: ನಮ್ಮ ಪಕ್ಷದ ನಿಲುವುಗಳೇ ಬೇರೆ ಎಂದ ಹೆಚ್​ಡಿ ಕುಮಾರಸ್ವಾಮಿ

ಸೀಟು ಹಂಚಿಕೆ ಅಂತಿಮಗೊಂಡ ನಂತರ ಜೆಡಿಎಸ್ ಮತ್ತು ಬಿಜೆಪಿ ನಾಯಕರು ದೆಹಲಿಯಲ್ಲಿ ಮೈತ್ರಿ ಬಗ್ಗೆ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.

ಕಳೆದ ವಾರ ಯಡಿಯೂರಪ್ಪ ಅವರು ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಬಿಜೆಪಿ ಹೈಕಮಾಂಡ್ ಇದುವರೆಗೆ ರಾಜ್ಯ ನಾಯಕರನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದರು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಪಕ್ಷದ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸಿರುವ ಸಂದರ್ಭದಲ್ಲೇ ಈ ಹೇಳಿಕೆ ಹೊರಬಿದ್ದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:32 pm, Wed, 20 September 23

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us