ಬೆಂಗಳೂರು, ಮಾರ್ಚ್ 29: ‘ಒಂದು ರಾಜ್ಯದ ಸಿಎಂ ಗಟ್ಟಿಯಾಗಿರಬೇಕಂತೆ, ದೇಶದ ಪ್ರಧಾನಿ ಬಹಳ ವೀಕ್ ಆಗಿರಬೇಕಂತೆ, ಅಬ್ಬಾ!’ ಹೀಗೆಂದು ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವ್ಯಂಗ್ಯವಾಡಿದ್ದು ಮತ್ಯಾರೂ ಅಲ್ಲ. ಜೆಡಿಸ್ (JDS) ವರಿಷ್ಠ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು (HD Deve Gowda). ಬಿಜೆಪಿ ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ವಿರುದ್ಧ ಈಗ ಸಿದ್ದರಾಮಯ್ಯ ಸರ್ಕಾರದವರು ಕೋರ್ಟಿಗೆ ಹೋಗಿದ್ದಾರೆ. ರೈತರ ಸಾಲದ ಮೇಲೆ ಬಡ್ಡಿ ಮನ್ನಾ ಮಾಡಿ ಎಂದಾಗ ಅಂದಿನ ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಆಗದು ಎಂದಿದ್ದರು. ಇದೆಲ್ಲಾ ಗೊತ್ತಿದ್ದರೂ ಸಿದ್ದರಾಮಯ್ಯನವರೇ ಕೋರ್ಟಿಗೆ ಅರ್ಜಿ ಹಾಕುತ್ತೀರಾ ಎಂದು ಪ್ರಶ್ನಿಸಿದರು. ಅಲ್ಲದೆ, ಸ್ಟ್ರಾಂಗೆಸ್ಟ್ ಮುಖ್ಯಮಂತ್ರಿ, ವೀಕೆಸ್ಟ್ ಪ್ರಧಾನಮಂತ್ರಿ ಎನ್ನುವ ಮುಖ್ಯಮಂತ್ರಿ ನಮ್ಮ ರಾಜ್ಯದಲ್ಲಿದ್ದಾರೆ. ಆ ಮಹಾನುಭಾವರಿಗೆ, ನಮೋ ನಮಃ ಎಂದು ಕುಹಕವಾಡಿದರು.
ನನಗೆ ಬಂದು ಪ್ರಚಾರ ಭಾಷಣ ಮಾಡುವ ಶಕ್ತಿ ಇದೆ. ಬೆಂಗಳೂರು ಗ್ರಾಮಾಂತರದ ಉಸ್ತುವಾರಿ ಆರ್. ಅಶೋಕ್‌ಗೆ ನೀಡಿ. ಒಬ್ಬ ಸಾಮಾನ್ಯ ಕಾರ್ಯಕರ್ತರನ್ನೂ ಬಿಡದೇ ಹೋರಾಟ ಮಾಡೋಣ ಎಂದು ದೇವೇಗೌಡರು ಬಿಜೆಪಿ, ಜೆಡಿಎಸ್ ನಾಯಕರು, ಕಾರ್ಯಕರ್ತರಿಗೆ ಕರೆ ನೀಡಿದರು.
ರಾಜ್ಯದ ಹಲವು ಕ್ಷೇತ್ರಗಳಲ್ಲಿ ನಮ್ಮ ಪರ ವಾತಾವರಣ ಇದೆ. ಕೆಲಸ ಮಾಡಿ ಎಲ್ಲಾ ಕ್ಷೇತ್ರಗಳನ್ನೂ ಗೆಲ್ಲಿಸಿ, ಹಳೆಯದನ್ನು ಮರೆಯಿರಿ. ಕಾಂಗ್ರೆಸ್ ಬಳಿ ಸಂಪನ್ಮೂಲ ಹೆಚ್ಚಾಗಿದೆ. ಅವರು ಸಂಪನ್ಮೂಲ ಸಂಗ್ರಹ ಮಾಡಿದ್ದೇ ಅಕ್ರಮ ಮಾರ್ಗದಲ್ಲಿ. ಕಾಂಗ್ರೆಸ್ನವರು ಬೇರೆ ರಾಜ್ಯಗಳಿಗೂ ಹಣ ಸಾಗಿಸಿದರು. ಕಾಂಗ್ರೆಸ್ ಈ ಚುನಾವಣೆಯಲ್ಲಿ ಹಣದ ಹೊಳೆ ಹರಿಸಬಹುದು. ಹಣ ಸುರಿಯುವ ಕಾಂಗ್ರೆಸ್ ಪಕ್ಷ ಸೋಲಿಸುವುದು ಸುಲಭವಲ್ಲ. ನಾಯಕರು ಎಲ್ಲಾ ಮಾಹಿತಿಯನ್ನು ಬಿಜೆಪಿ ವರಿಷ್ಠರಿಗೆ ನೀಡುತ್ತಿದ್ದಾರೆ ಎಂದು ದೇವೇಗೌಡ ಹೇಳಿದರು.
ಇದನ್ನೂ ಓದಿ: ದೇವೇಗೌಡರ ಆಶೀರ್ವಾದ ಆನೆ ಬಲ ತಂದಿದೆ: ಬಿಜೆಪಿ ಜೆಡಿಎಸ್ ಸಮನ್ವಯ ಸಭೆ ಬಳಿಕ ವಿಜಯೇಂದ್ರ ಹರ್ಷ
ಎರಡೂ ಪಕ್ಷದಲ್ಲಿ ಸಮನ್ವಯ ಸಾಧಿಸಬೇಕು. ಹಿಂದೆ ಆದಂತಹ ವಿಚಾರಗಳನ್ನೆಲ್ಲ ಮರೆತು ನಾವೆಲ್ಲರೂ ಒಂದಾಗಬೇಕಿದೆ ಎಂದು ಅವರು ಹೇಳಿದರು.
ಬಳಿಕ ‘ಟಿವಿ9’ಗೆ ಹೇಳಿಕೆ ನೀಡಿರುವ ದೇವೇಗೌಡರು, ಬಿಜೆಪಿ ಮತ್ತು ಜೆಡಿಎಸ್ ನಡುವೆ ಇದ್ದ ವ್ಯತ್ಯಾಸಗಳನ್ನು ಎಲ್ಲರೂ ಮರೆತು ಐಕ್ಯತೆಯಿಂದ ಕೆಲಸ ಮಾಡಬೇಕೆಂದೂ, 28ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದು ಸಂದೇಶ
ಕೊಟ್ಟಿದ್ದೇವೆ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿರುವ ಕಾಂಗ್ರೆಸ್ ಗೆ ಉತ್ತರ ಕೊಟ್ಟಿದ್ದೇನೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಒಂದೇ ಒಂದು ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಂಡು ಕೆಲಸ ಮಾಡಬೇಕೆಂದು ಕಾರ್ಯಕರ್ತರಿಗೆ ಸಂದೇಶ ಕೊಟ್ಟಿದ್ದೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ