ಬೆಂಗಳೂರು, ಡಿಸೆಂಬರ್ 02: ಕರ್ನಾಟಕ ಬಿಜೆಪಿಯಲ್ಲಿ (BJP) ಎರಡು ಬಣಗಳಾಗಿವೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರದ್ದು ಒಂದು ಬಣವಾದರೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದೂ ಒಂದು ಬಣವಾಗಿದೆ. ಎರಡೂ ಬಣಗಳ ನಾಯಕರು ಪರಸ್ಪರ ಬಹಿರಂಗವಾಗಿಯೇ ವಾಗ್ದಾಳಿ ಮಾಡುತ್ತಿದ್ದಾರೆ. ಈ ನಡುವೆ ಬಸನಗೌಡ ಪಾಟೀಲ್ ಯತ್ನಾಳ್ ಬಣ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಬಿವೈ ವಿಜಯೇಂದ್ರ ಬಣದವರು ಒತ್ತಡ ಹೇರುತ್ತಿದ್ದಾರೆ. ಇತ್ತ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿವೈ ವಿಜಯೇಂದ್ರ ಅವರ ಹೊಂದಾಣಿಕೆ ದಾಖಲೆ ಬಿಡುಗಡೆ ಮಾಡಲೇ ಎಂದು ಸವಾಲು ಹಾಕಿದ್ದಾರೆ. ಎರಡೂ ಬಣದ ಕಿತ್ತಾಟ ಹೈಕಮಾಂಡ್ ಅಂಗಳ ತಲುಪಿದೆ.
ಈಗಾಗಲೆ ಬಿಜೆಪಿ ವರಿಷ್ಠರು ಬನಸಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಶೋಕಾಸ್ ನೋಟಿಸ್ ನೀಡುತ್ತಿದ್ದಂತೆ ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿಗೆ ಹಾರಿದ್ದು, ವರಿಷ್ಠರನ್ನು ಭೇಟಿಯಾಗುತ್ತಾರಾ? ಕಾದು ನೋಡಬೇಕಿದೆ. ಯತ್ನಾಳ್ ಹಿಂದೆ ಹಿಂದೆ ಅವರ ಬಣದ ನಾಯಕರೂ ಕೂಡ ದೆಹಲಿಗೆ ತೆರಳುತ್ತಿದ್ದಾರೆ.
ಇದನ್ನೂ ಓದಿ: ಬಸನಗೌಡ ಪಾಟೀಲ್ ಯತ್ನಾಳ್ಗೆ ಹೈಕಮಾಂಡ್ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್
ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಅನುಮತಿ ಇಲ್ಲದೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಕ್ಫ್ ವಿವಾದ ಸಂಬಂಧ ಪ್ರತ್ಯೇಕ ಪ್ರತಿಭಟನೆ ಆರಂಭಿಸಿದೆ. ಯತ್ನಾಳ್ ಬಣವು ವಕ್ಫ್ ಮಂಡಳಿ ಆಸ್ತಿ ವಿಚಾರವಾಗಿ ತಮ್ಮದೇಯಾದ ವರದಿ ಸಿದ್ದಪಡಿಸಿದೆ. ಇಂದು (ಡಿ.02) ಮಧ್ಯಾಹ್ನ ಜೆಪಿಸಿ ಮುಂದೆ ವರದಿ ಮಂಡನೆಗೆ ಯತ್ನಾಳ್ ಬಣ ದೆಹಲಿಗೆ ತೆರಳುತ್ತಿದೆ ಎನ್ನಲಾಗುತ್ತಿದೆ.
ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಶಾಸಕ ಬಿ.ಪಿ.ಹರೀಶ್, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಸಿದ್ದೇಶ್ವರ್ ಗೋವಾದಿಂದ ದೆಹಲಿಗೆ ತೆರಳಲಿದ್ದಾರೆ. ಜೆಪಿಸಿ ಮುಂದೆ, ವಕ್ಫ್ ಮಂಡಳಿಯನ್ನು ತೆಗೆದು ಹಾಕಬೇಕು, ಅನ್ವರ್ ಮಾಣಿಪ್ಪಾಡಿ ಆಯೋಗದ ವರದಿಯನ್ನು ಜಾರಿ ಮಾಡಬೇಕು, ಕುಮಾರ್ ಬಂಗಾರಪ್ಪ ಸಮಿತಿ ವರದಿಯನ್ನೂ ಜಾರಿಗೊಳಿಸಬೇಕು ಎಂದು ವರದಿಯಲ್ಲಿ ಉಲ್ಲೇಖ ಮಾಡಿದೆ.
ಒಟ್ಟಿನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ದೆಹಲಿ ಪ್ರವಾಸ ತೀವ್ರ ಕುತೂಹಲ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:24 am, Mon, 2 December 24