ಬಿಜೆಪಿಯಲ್ಲಿ ತಣ್ಣಗಾಗದ ಬಣ ಬೇಗುದಿ: ರಾಧಾ ಮೋಹನ್ ದಾಸ್ ಸರಣಿ ಸಭೆ, ಹೊರಗೆ ಬಣ ಬಡಿದಾಟ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 21, 2025 | 7:07 PM

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಪಕ್ಷದೊಳಗೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಅಧ್ಯಕ್ಷ ಕುರ್ಚಿಗೆ ಚುನಾವಣೆ ಬೆನ್ನಲ್ಲೇ ರಾಜ್ಯಕ್ಕೆ ರಾಧಾ ಮೋಹನ್ ದಾಸ್ ಎಂಟ್ರಿ ಕೊಟ್ಟಿದ್ದು, ಸರಣಿ ಸಭೆ ಮಾಡಿದ್ದಾರೆ. ಒಳಗಡೆ ಹೈಕಮಾಂಡ್‌ ಸರಣಿ ಸಭೆ ಮಾಡಿದರೆ, ಹೊರಗಡೆ ಬಣ ಕಿತ್ತಾಟ ಹೊಗೆಯಾಡುತ್ತಿತ್ತು. ಯತ್ನಾಳ್ ಬಣದ ಆಕ್ರೋಶ ಮತ್ತು ಮಾಜಿ ಶಾಸಕರ ಆಕ್ಷೇಪಗಳು ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.

ಬಿಜೆಪಿಯಲ್ಲಿ ತಣ್ಣಗಾಗದ ಬಣ ಬೇಗುದಿ: ರಾಧಾ ಮೋಹನ್ ದಾಸ್ ಸರಣಿ ಸಭೆ, ಹೊರಗೆ ಬಣ ಬಡಿದಾಟ
ಬಿಜೆಪಿಯಲ್ಲಿ ತಣ್ಣಗಾಗದ ಬಣ ಬೇಗುದಿ: ರಾಧಾ ಮೋಹನ್ ದಾಸ್ ಸರಣಿ ಸಭೆ, ಹೊರಗೆ ಬಣ ಬಡಿದಾಟ
Follow us on

ಬೆಂಗಳೂರು, ಜನವರಿ 21: ಬಿಜೆಪಿ (BJP) ರಾಜ್ಯಾಧ್ಯಕ್ಷರ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದ ರಾಧಾ ಮೋಹನ್ ದಾಸ್ ಸರಣಿ ಸಭೆ ಮಾಡಿದರು. ಶಾಸಕರು, ಸಂಸದರು, ಪರಿಷತ್ ಸದಸ್ಯರು, ವೀಕ್ಷಕರು ಜೊತೆ ಸಭೆ ಮಾಡಿದ್ದಾರೆ. ಸಂಜೆ ಕೋರ್‌ ಕಮಿಟಿ ಸಭೆಯೂ ನಡೀತು. ಬಣ ಕಿತ್ತಾಟದ ಹೊತ್ತಲ್ಲೇ ಈ ಸರಣಿ ಸಭೆ ಭಾರೀ ಕುತೂಹಲ ಮೂಡಿಸಿತ್ತು. ನಿರೀಕ್ಷೆಯಂತೆ ಅತ್ತ ಸಭೆ ಮಾಡಿದರೆ, ಇತ್ತ ವಿಜಯೇಂದ್ರ ವಿರುದ್ಧ ಅಸಮಾಧಾನ ಸ್ಫೋಟಗೊಂಡಿತ್ತು.

ಸಿ.ಟಿ ರವಿ ಪ್ರಕರಣದಲ್ಲಿ ಪಕ್ಷದ ನಾಯಕತ್ವ ವಿಫಲ ಎಂದ ಅಭಯ್ ಪಾಟೀಲ್

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಯತ್ನಾಳ್ ಬಣ ಉರಿದುರಿದು ಬೀಳುತ್ತಿದೆ. ಯತ್ನಾಳ್, ರಮೇಶ್ ಜಾರಕಿಹೊಳಿ ಬಳಿಕ ಹರಿಹರ ಶಾಸಕ ಬಿ.ಪಿ.ಹರೀಶ್ ರಾಜ್ಯಾಧ್ಯಕ್ಷರ ಹುದ್ದೆ ಬಗ್ಗೆ ಪ್ರಶ್ನೆ ಎತ್ತಿದ್ದರು. ಇದೀಗ ಸಿ.ಟಿ ರವಿ ಪ್ರಕರಣ ಉಲ್ಲೇಖಿಸಿದ ಬಿಜೆಪಿ ಶಾಸಕ ಅಭಯ್ ರಾಜ್ಯ ನಾಯಕತ್ವ ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿ ಬಣ ಬಡಿದಾಟ: ಯತ್ನಾಳ್ ಪರ ಶ್ರೀಗಳ ಬ್ಯಾಟಿಂಗ್

ದಾವಣಗೆರೆಯಲ್ಲಿ ಯತ್ನಾಳ್ ಪರ ಮಾತನಾಡಿದ ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಶ್ರೀಗಳು, ಬಿಜೆಪಿಯವರು ಪಂಚಮಸಾಲಿ ಸಮುದಾಯಕ್ಕೆ ಉನ್ನತ ಸ್ಥಾನ ಕೊಟ್ಟಿಲ್ಲ. ಮುಂದೆಯಾದರೂ ಕೊಡಲಿ ಎಂದಿದ್ದಾರೆ. ಹೀಗೆ ಯತ್ನಾಳ್ ತಮ್ಮ ಬಲ ಹೆಚ್ಚಿಸಿಕೊಂಡು ರಾಜ್ಯಾಧ್ಯಕ್ಷ ಚುನಾವಣೆಗೆ ಸಜ್ಜಾಗ್ತಿದ್ದಾರೆ. ಹೊತ್ತಿಕೊಂಡಿರುವ ಬಣ ಬೆಂಕಿ ಚುನಾವಣೆ ಮೇಲೆ ಎಫೆಕ್ಟ್ ಆಗುವ ಸಾಧ್ಯತೆ ಇದೆ. ಹೀಗಾಗಿ ಸರಣಿ ಸಭೆ ನಡೆಸಿದ ರಾಧಾ ಮೋಹನ್ ದಾಸ್ ಎಲ್ಲದಕ್ಕೂ ಮದ್ದರೆಯೋ ಪ್ರಯತ್ನ ಮಾಡಿದ್ದಾರೆ. ಹೀಗಿದ್ದರೂ ರಾಧಾ ಮೋಹನ್ ದಾಸ್ ಸಭೆಗೂ ಆಕ್ಷೇಪ ವ್ಯಕ್ತವಾಗಿದೆ.

ಬಿಜೆಪಿ ಶಾಸಕರಿಗಷ್ಟೇ ಸಭೆ: ಮಾಜಿ ಶಾಸಕರ ಆಕ್ಷೇಪ

ಗೆದ್ದ ನಾಯಕರ ಜೊತೆ ರಾಧಾ ಮೋಹನ್ ದಾಸ್ ಸಭೆ ನಡೆಸ್ತಿರೋದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಶಾಸಕರು, ಅನುಮಾನ ವ್ಯಕ್ತಪಡಿಸಿದರು. ನಮ್ಮ ಅಭಿಪ್ರಾಯವನ್ನ ಕೇಳಬೇಕು ಅಂದ್ರು. ಇಷ್ಟಕ್ಕೆ ಸುಮ್ಮನಾಗದ ವಿಜಯೇಂದ್ರ ಬಣ, ಯತ್ನಾಳ್ ಬಣ ವಿರುದ್ಧ ಪ್ರತ್ಯೇಕ ಸಭೆ ನಡೆಸಿತು. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ನಡೆದ ಸಭೆಯಲ್ಲಿ ಎಂ.ಪಿ. ರೇಣುಕಾಚಾರ್ಯ, ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಬಸವರಾಜ ದಡೇಸೂಗೂರು, ಸೇರಿದಂತೆ 25ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಯತ್ನಾಳ್ ಟೀಮ್ ವಿರುದ್ಧ ಗುಡುಗಿದರು.

ಇದನ್ನೂ ಓದಿ: ಅತಿರೇಕ್ಕೇರಿದ ಬಿಜೆಪಿ ಬಣಬಡಿದಾಟ: ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ವಿಜಯೇಂದ್ರ

ಈ ಮಧ್ಯೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಿ ಕೊಡಿ ಎಂದು ಕೇಳಿಕೊಂಡಿರುವ ಸುನಿಲ್ ಕುಮಾರ್ ತಾವು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಎಂದಿದ್ದಾರೆ. ಅತ್ತ ಸಿಸಿ ಪಾಟೀಲ್, ಅಧ್ಯಕ್ಷರ ಬದಲಾವಣೆ ಹೈಕಮಾಂಡ್​ಗೆ ಬಿಟ್ಟಿದ್ದು ಎಂದಿದ್ದಾರೆ.

ಬಣ ಕಿಚ್ಚು ಹೆಚ್ಚಾಗಿರೋದನ್ನ ಗಮನಿಸಿದ ರಾಧಾ ಮೋಹನ್ ದಾಸ್, ಮಾಜಿ ಶಾಸಕರ ಜೊತೆಯೂ ಸಭೆ ಮಾಡಿದರು. ಮಾಜಿಗಳಿಂದಲೂ ಅಭಿಪ್ರಾಯ ಸಂಗ್ರಹಿಸಿದರು. ಅದೇನೇ ಇರಲಿ, ರಾಜ್ಯ ಬಿಜೆಪಿ ಮನೆಯಲ್ಲಿ ಒಂದಾದ್ಮೇಲೆ ಒಂದರಂತೆ ಅಸಮಾಧಾನ ಏಳುತ್ತಿದೆ. ಇದೆಲ್ಲಾ ಎಲ್ಲಿಗೆ ಹೋಗಿ ನಿಲ್ಲುತ್ತೋ ಅನ್ನೋದೇ ಮಿಲಿಯನ್ ಡಾಲರ್​ ಪ್ರಶ್ನೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:06 pm, Tue, 21 January 25