ಹಣ ಪಡೆದು ಸಿಎಂ ಸ್ಥಾನ ನೀಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ; ₹ 2,500 ಕೋಟಿ ಹೇಳಿಕೆಗೆ ಯುಟರ್ನ್ ಹೊಡೆದ ಯತ್ನಾಳ್
Basanagouda Patil Yatnal | Karnataka Politics: ಮುಖ್ಯಮಂತ್ರಿ ಖುರ್ಚಿಗೆ 2,500 ಕೋಟಿ ರೂ ಕೇಳಿದ್ದಾರೆ ಎಂಬ ಹೇಳಿಕೆಗೆ ಬಿಜೆಪಿ ಶಾಸಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯುಟರ್ನ್ ಹೊಡೆದಿದ್ದಾರೆ. ಹಣ ಪಡೆದು ಸಿಎಂ ಸ್ಥಾನ ನೀಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಹಣ ಪಡೆದು ಸ್ಥಾನ ನೀಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಖುರ್ಚಿಗೆ 2,500 ಕೋಟಿ ರೂ ಕೇಳಿದ್ದಾರೆ ಎಂಬ ಹೇಳಿಕೆಗೆ ಬಿಜೆಪಿ ಶಾಸಕ ಶಾಸಕ ಬಸನಗೌಡ ಪಾಟೀಲ್ (Basanagouda Patil Yatnal) ಯತ್ನಾಳ್ ಯುಟರ್ನ್ ಹೊಡೆದಿದ್ದಾರೆ. ಸಿಎಂ ಕುರ್ಚಿಗೆ 2,500 ಕೋಟಿ ಕೇಳಿದ್ದಾರೆಂದು ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಹಣ ಪಡೆದು ಸಿಎಂ ಸ್ಥಾನ ನೀಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಹಣ ಪಡೆದು ಸ್ಥಾನ ನೀಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿದೆ ಎಂದು ವಿಜಯಪುರದಲ್ಲಿ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಯತ್ನಾಳ್ ನೀಡಿದ್ದ ಹೇಳಿಕೆಗೆ ಸ್ವಪಕ್ಷೀಯರು ಸೇರಿದಂತೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಯತ್ನಾಳ್, ‘‘ಬಿಜೆಪಿಯಲ್ಲಿ ಅರ್ಹತೆ ಮೇಲೆಯೇ ಸ್ಥಾನಮಾನವನ್ನು ನೀಡುತ್ತಾರೆ. 1-2 ಘಟನೆ ಬಿಟ್ಟರೆ ನೂರಕ್ಕೆ ನೂರರಷ್ಟು ಅರ್ಹರಿಗೆ ಸ್ಥಾನ ನೀಡಲಾಗಿದೆ. ವರಿಷ್ಠರ ನಿರ್ಧಾರದ ಮೇಲೆಯೇ ಬೊಮ್ಮಾಯಿ ಸಿಎಂ ಆಗಿದ್ದು’’ ಎಂದಿದ್ದಾರೆ.
ರಾಮದುರ್ಗದಲ್ಲಿ ನೀಡಿದ ಹೇಳಿಕೆ ವ್ಯವಸ್ಥೆಯ ಭಾಗವಾಗಿ, ಪಕ್ಷ ಹೊರತುಪಡಿಸಿ ಮಾತನಾಡಿದ್ದೇನೆ ಎಂದಿರುವ ಯತ್ನಾಳ್, ಕೆಲ ದಲ್ಲಾಳಿಗಳು ಎಲ್ಲಾ ಪಕ್ಷದ ಮುಖಂಡರನ್ನ ಭೇಟಿ ಆಗುತ್ತಾರೆ. ಎಲ್ಲಾ ಪಕ್ಷದ ನಾಯಕರ ಜತೆ ಪೋಟೋ ತೆಗೆದುಕೊಂಡು ನಿನ್ನ ಸಿಎಂ ಮಾಡುತ್ತೇನೆ, ಸಚಿವನನ್ನಾಗಿ ಮಾಡುತ್ತೇನೆಂದು ಹೇಳ್ತಾರೆ. ಇದಕ್ಕಾಗಿ ಹಣ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಿ ಕಳುಹಿಸ್ತಾರೆ. ಈ ದಲ್ಲಾಳಿಗಳ ಬಗ್ಗೆ ಕಾಲ ಬಂದಾಗ ಬಹಿರಂಗಗೊಳಿಸುವೆ. ದಲ್ಲಾಳಿಗಳು ಎಲ್ಲಿಯವರು? ಯಾರು ಎಂಬುದೆಲ್ಲಾ ಇರತ್ತದೆ. ಸುಮ್ಮಸುಮ್ಮನೆ ಆರೋಪ ಮಾಡಲು ನಾನು ಹುಚ್ಚನಲ್ಲ ಎಂದಿದ್ದಾರೆ.
ರಾಜ್ಯ ರಾಜಕಾರಣದ ಎಲ್ಲಾ ಪಕ್ಷಗಳ ಮುಖಂಡರು ಹೊಂದಾಣಿಕೆಯಿಂದ ಇದ್ದಾರೆ: ಯತ್ನಾಳ್ ಮತ್ತೆ ಆರೋಪ
ರಾಜ್ಯ ರಾಜಕಾರಣ ಎಲ್ಲಾ ಪಕ್ಷಗಳ ಕೆಲ ಮುಖಂಡರು ಹೊಂದಾಣಿಕೆಯಿದ್ದಾರೆ ಎಂದು ಯತ್ನಾಳ್ ಮತ್ತೆ ಗಂಭೀರ ಆರೋಪ ಮಾಡಿದ್ದಾರೆ. ‘‘ಡಿಕೆಶಿ ಭ್ರಷ್ಟಾಚಾರದಲ್ಲಿ ಆರೆಸ್ಟ್ ಆದಾಗ ಬಿಜೆಪಿ ಮಹಾನ್ ನಾಯಕ ಸಿಎಂ ಆಗಿದ್ದಾಗ ಏನು ಹೇಳಿದ್ರು ಗೊತ್ತಾ? ಡಿಕೆಶಿಗೆ ಹೀಗಾಗಬಾರದಿತ್ತು, ಸತ್ಯ ಗೆಲ್ಲುತ್ತದೆ ಆದಷ್ಟು ಬೇಗ ಹೊರ ಬರುತ್ತಾರೆ ಎಂದಿದ್ದರು’’ ಎಂದು ಹೇಳಿದ ಯತ್ನಾಳ್, ಈ ಮೂಲಕ ಮಾಜಿ ಸಿಎಂ ಯಡಿಯೂರಪ್ಪಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಎಲ್ಲಾ ಪಕ್ಷದ ನಾಯಕರ ಹೊಂದಾಣಿಕೆ ಕುರಿತು ಸದನದಲ್ಲೇ ಮಾತನಾಡಿದ್ದೇನೆಂದೂ ಅವರು ನುಡಿದಿದ್ದಾರೆ.
ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಯತ್ನಾಳ್:
ಈ ವೇಳೆ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿದ ಯತ್ನಾಳ್, ‘‘ಕಾಂಗ್ರೆಸ್ ಪಕ್ಷ ಒಂದು ಕಳ್ಳರ ಗುಂಪಿದ್ದಂತೆ. ಭ್ರಷ್ಟಾಚಾರ ಬಗ್ಗೆ ಮಾತಾಡಲು ಕಾಂಗ್ರೆಸ್‌ನವರಿಗೆ ಅರ್ಹತೆಯಿಲ್ಲ’’ ಎಂದಿದ್ದಾರೆ. ಡಿಕೆ ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಯತ್ನಾಳ್, ಅವರ ಹಗರಣಗಳು ಎಲ್ಲಿ ಬಯಲಿಗೆ ಬರುತ್ತವೆ ಎಂಬ ಭಯದಲ್ಲಿ ಕಾಂಗ್ರೆಸ್ ಈ ವಿಚಾರ ದೊಡ್ಡದು ಮಾಡಿದೆ ಎಂದಿದ್ದಾರೆ.
ಕೋಟಿ ಕೋಟಿ ಹಣ ಕೊಟ್ಟರೆ ಸಿಎಂ ಹಾಗೂ ಸಚಿವ ಸ್ಥಾನ ಹಾಗೂ ಟಿಕೆಟ್ ಕೊಡುತ್ತಾರೆ ಎಂಬ ಹೇಳಿಕೆಯನ್ನು ರಾಮದುರ್ಗದಲ್ಲಿ ಹೇಳಿದ್ದು ವ್ಯವಸ್ಥೆಯ ಭಾಗವಾಗಿ, ಪಕ್ಷ ಹೊರತು ಪಡಿಸಿ ಮಾತನಾಡಿದ್ದೇನೆ. ಪಕ್ಷ ಹೊರತು ಪಡಿಸಿ, ಇಂಥದೊಂದು ದೊಡ್ಡ ಟೀಂ ಇರುತ್ತದೆ ಎಂದಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮ ಈಗ ಎಲ್ಲಾ ಹೊರ ಬರುತ್ತಿದೆಯಲ್ಲಾ. ಮಾಜಿ ಸಿಎಂ ಹೆಚ್ಡಿಕೆ ಮಾಜಿ ಸಿಎಂ ಪುತ್ರ ಪ್ರಕರಣದಲ್ಲಿದ್ದಾರೆ ಅವರ ಹೆಸರು ಹೇಳಿದರೆ ಸರ್ಕಾರ ಬೀಳುತ್ತದೆ ಎಂದಿದ್ದಾರೆ. ಕುಮಾರಸ್ವಾಮಿ ಅರ್ಧ ಮಾತ್ರ ಹೇಳುವ ಬದಲು ಯಾರು ಎಂಬುದನ್ನು ಹೇಳಲಿ ಎಂದು ಅವರು ಒತ್ತಾಯಿಸಿದ್ದಾರೆ.
ಡಿ.ಕೆ.ಶಿವಕುಮಾರ್ಗೆ ನನ್ನ ಕಂಡರೆ ಭಯ ಎಂದಿರುವ ಯತ್ನಾಳ್, ‘‘ನನ್ನ ಮೇಲೆ ₹ 200 ಕೋಟಿ ಮಾನಹಾನಿ ಕೇಸ್ ಹಾಕಿದ್ದಾರೆ. ಮಾನಹಾನಿ ಕೇಸ್ ಹಾಕಿದ್ದಾಗಿನಿಂದಲೂ ಡಿಕೆಶಿಗೆ ಭಯ ಹೆಚ್ಚಾಗಿದೆ. ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗುತ್ತೆ ಅದಕ್ಕೆ ಡಿಕೆಶಿಗೆ ಭಯ. ಯತ್ನಾಳ್ ಬಂದುಬಿಟ್ಟರೆ ನಮ್ಮ ಗತಿಯೇನು ಎಂಬ ಭಯವಿದೆ. ಅದಾಗ್ಯೂ ಡಿಕೆಶಿ ಏನೇ ಮಾಡಿದರೂ ಅಂಜುವ ಮಗ ನಾನಲ್ಲ’’ ಎಂದಿದ್ದಾರೆ.
ಸಚಿವ ಸ್ಥಾನಕ್ಕಿಂತ ಮೀಸಲಾತಿ ಮುಖ್ಯ:
ಯಡಿಯೂರಪ್ಪ ಸಿಎಂ ಇದ್ದಾಗ ಪಂಚಮಸಾಲಿ ಶಾಸಕರಿಗೆ ಸಚಿವ ಸ್ಥಾನ ಹೆಚ್ಚಾಗಿ ಸಿಕ್ಕಿರಲಿಲ್ಲ. ತಮ್ಮಿಂದ ಪಂಚಮಸಾಲಿ ಶಾಸಕರಿಗೆ ಸಚಿವರಾಗಲು ಅವಕಾಶ ಸಿಕ್ಕಿತು. ಅದರಲ್ಲಿ ಓರ್ವ ಕ್ಯಾಶ್ ಕ್ಯಾಂಡಿಡೇಟ್ಗೂ ಆವಕಾಶ ಸಿಕ್ಕಿತು ಎಂಬ ಹೇಳಿಕೆ ವಿಚಾರಕ್ಕೆ ಸ್ಪಷ್ಟನೆ ನೀಡಿದ ಯತ್ನಾಳ್, ‘‘ಆ ಕ್ಯಾಶ್ ಕ್ಯಾಂಡಿಡೇಟ್ ಯಾರು ಎಂಬುದು ಜಗತ್ತಿಗೆ ಗೊತ್ತಿದೆ. ಯಡಿಯೂರಪ್ಪ ಓರ್ವ ಪಂಚಮಸಾಲಿಗೆ ಅವಕಾಶ ನೀಡಿದ್ದರು. ನಂತರ ಬೊಮ್ಮಾಯಿ ಅವರು ಮೂವರು ಪಂಚಮಸಾಲಿ ಶಾಸಕರಿಗೆ ಅವಕಾಶ ನೀಡಿದರು. ನಮ್ಮ ಹಾಗೂ ಇತರೆ ಸಮಾಜಕ್ಕೆ ಮೀಸಲಾತಿ ಕೊಡೋದಾಗಿ ಹೇಳಿ ಕೈಕೊಟ್ಟರು. ಈಗ ಬೊಮ್ಮಾಯಿ ಅವರು ಕೊಡುತ್ತೇನೆ ಎಂದು ಹೇಳಿದ್ದಾರೆ. ಮೀಸಲಾತಿ ನೀಡಿದ್ದರೆ ನಾ ಹೋರಾಟ ಮಾಡುತ್ತೇನೆಂದು ಹೇಳಬೇಕಾಗುತ್ತದೆ. ಸಚಿವ ಸ್ಥಾನಕ್ಕಿಂತ ನನಗೆ ಮೀಸಲಾತಿಯೇ ಮುಖ್ಯ. ನಾನು ಸಚಿವನಾಗೋದಕ್ಕೆ ಎಲ್ಲಾ ಸಮುದಾಯಗಳನ್ನು ಬಲಿಕೊಡೋ ಅವಶ್ಯಕತೆಯಿಲ್ಲಾ’’ ಎಂದಿದ್ದಾರೆ.
ಈ ಹಿಂದೆ ಯತ್ನಾಳ್ ಸಿಎಂ ಕುರ್ಚಿಯ ಬಗ್ಗೆ ಮಾಡಿದ ಆರೋಪವೇನು?
ಬೆಳಗಾವಿಯ ರಾಮದುರ್ಗದಲ್ಲಿ ಮಾತನಾಡುತ್ತಾ ಯತ್ನಾಳ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಈ ವೇಳೆ ಅವರು, ‘‘ದೆಹಲಿಯಿಂದ ಬಂದ ಕೆಲವರು ಎರಡೂವರೆ ಸಾವಿರ ಕೋಟಿ ನೀಡಿ ಸಿಎಂ ಮಾಡ್ತೀವಿ ಅಂದಿದ್ರು. ರಾಜಕಾರಣದಲ್ಲಿ ಯಾರೂ ಅಲ್ಲಿ ಇಲ್ಲಿ ಹೋಗಿ ಹಾಳಾಗಬೇಡಿ. ನಿಮಗೆ ಟಿಕೆಟ್ ಕೊಡಿಸುತ್ತೇವೆ, ದೆಹಲಿ ಕರೆದುಕೊಂಡು ಹೋಗ್ತೀವಿ. ಸೋನಿಯಾ ಗಾಂಧಿ ಭೇಟಿ ಮಾಡಿಸ್ತೀವಿ, ಜೆ.ಪಿ.ನಡ್ಡಾರನ್ನ ಭೇಟಿ ಮಾಡಿಸ್ತೀವಿ ಅಂತಾರೆ. ದೆಹಲಿಯಿಂದ ಒಂದಿಷ್ಟು ಜನ ನನ್ನ ಬಳಿಯೂ ಬಂದಿದ್ದರು. ನಿಮ್ಮನ್ನು ಸಿಎಂ ಮಾಡ್ತೀವಿ 2500 ಕೋಟಿ ಸಜ್ಜ ಮಾಡಿ ಇಡ್ರಿ ಅಂದ್ರು’’ ಎಂದು ಹೇಳಿದ್ದರು. ಈ ವಿಚಾರ ಸದ್ಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬಿಜೆಪಿಯ ಅನೇಕ ನಾಯಕರು ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ಬ್ರೇಕಿಂಗ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Sat, 7 May 22