ಕಾರವಾರ, ಜ.20: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಮತ್ತೆ ಗುಡುಗಿದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde), ಮುರುಕುರಾಮಯ್ಯನ ಗ್ಯಾರಂಟಿಗಳು ಏನೂ ಉಳಿಯುವುದಿಲ್ಲ. ಕೊನೆಗೆ ಉಳಿಯೋದು ಮೋದಿ ಗ್ಯಾರಂಟಿನೇ ಎಂದು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಶೈಲಿಯಲ್ಲೇ ಮಿಮಿಕ್ರಿ ಮಾಡಿ ಹರಿಹಾಯ್ದ ಹೆಗಡೆ, ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಳು ಸುಳ್ಳು ಎಂದರು. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು ಕೇಳಿದ್ದೀರಾ? ಚುನಾವಣೆ ಸಂದರ್ಭದಲ್ಲಿ ಹೇಳ್ತಿವಪ್ಪ, ಹೇಳಿದ್ದೆಲ್ಲಾ ಮಾಡಕಾಯ್ತದಾ? ದುಡ್ಡು ಎಲ್ಲಿಂದ ತರೋದು? ಇದೇ ಭಾಷೆಲೀ ಹೇಳಿದ್ದು ನೆನಪಿದ್ಯಾ ಎಂದು ಕಾರ್ಯಕರ್ತರನ್ನು ಕೇಳಿದರು. ಅಲ್ಲದೆ, ಬುದ್ಧಿವಂತರು ಇದನ್ನು ಅರ್ಥಮಾಡಿಕೊಳ್ಳಬೇಕು. ಅವರ ನಾಟಕದ ಭಾಷಣಕ್ಕೆ ಮರುಳಾಗಬಾರದು ಎಂದರು.
ಲೋಕಸಭೆ ಚುನಾವಣೆ ಮುಗಿದರೆ ಹೊಸ ಅಧ್ಯಾಯ ಶುರುವಾಗುತ್ತದೆ. ಕಾಂಗ್ರೆಸ್ ಮುರಿದ ಮನೆ ಆಗುತ್ತದೆ ಎಂದ ಹೆಗಡೆ, ಸುಪ್ರೀಂಕೋರ್ಟ್ ತೀರ್ಪು ಬಂತು, ರಾಮಮಂದಿರ ನಿರ್ಮಾಣವಾಯ್ತು. ನಮಗೆ ಆಹ್ವಾನ ಬಂದಿಲ್ಲ, ಬಂದರೂ ನಾವು ಹೋಗಲ್ಲ ಅಂತ ಹೇಳುತ್ತಿದ್ದಾರೆ. ಆಮೇಲೆ ನಾವು ಹೋಗುತ್ತೇವೆ, ಇಷ್ಟ ಬಂದಾಗ ಹೋಗುತ್ತೇವೆ ಅಂದರು. ಜನರ ತಲೆ ಕೆಡಿಸುವುದೇ ಸಿದ್ದರಾಮಯ್ಯ ಅವರ ಅಜೆಂಡಾ, ಇದೇ ಅವರ ರಾಜಕಾರಣ ಎಂದರು.
ಕಳೆದ ನಾಲ್ಕು ವರ್ಷಗಳಲ್ಲಿ ಮನೆಯಲ್ಲೇ ಕುಳಿತಿದ್ದ ಅನಂತ್ ಕುಮಾರ್ ಹೆಗಡೆ ಈಗ ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗ ಟಿಕೆಟ್ಗಾಗಿ ಕಾರ್ಯಕರ್ತರೊಂದಿಗೆ ಬೆರೆಯುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಹೆಗಡೆ, ಕಳೆದ ನಾಲ್ಕೂವರೆ ವರ್ಷದಿಂದ ಸಂಸದರು ಎಲ್ಲೂ ಬಂದಿಲ್ಲ ಅಂತಾರೆ. ಮೂರು ವರ್ಷದ ಹಿಂದೆ PMJSY ಯೋಜನೆಗಳ ಆರಂಭಕ್ಕೆ ನಾನೇ ಬಂದಿದ್ದು. ಕಳೆದ 2 ವರ್ಷದಿಂದ ಆರೋಗ್ಯ, ವೈಯಕ್ತಿಕ ಸಮಸ್ಯೆಯಿಂದ ಬಂದಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಅಭಿವೃದ್ಧಿ ಕಾರ್ಯಕ್ರಮಗಳ ಸಭೆ ನಡೆಸುತ್ತಿದ್ದೇನೆ. ದಿಶಾ ಮೀಟಿಂಗ್ ನಡೆಸಿ ಅಭಿವೃದ್ಧಿ ಕಾರ್ಯ ಪರಿಶೀನೆ ನಡೆಸುತ್ತಿದ್ದೇನೆ. ಸಭೆ ನಡೆಸದಿದ್ದರೆ ಜಿಲ್ಲಾ ಪಂಚಾಯಿತಿಗೆ ಹಣ ಬರಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ