ಕಾರವಾರ, (ಡಿಸೆಂಬರ್ 26): ಇಷ್ಟು ದಿನ ರಾಜಕೀಯದಿಂದ ನಾಪತ್ತೆಯಾಗಿದ್ದ ಅನಂತ್ ಕುಮಾರ್ ಹೆಗಡೆ(ananth kumar hegde) ಅವರು ಇದೀಗ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದು, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇನ್ನು ಈ ಬಗ್ಗೆ ಶಿರಸಿಯಲ್ಲಿ ಮಾತನಾಡಿರುವ ಅವರು, ಇದು ರಾಜಕೀಯ ತೀರ್ಮಾನವಲ್ಲ, ಇದು ನನ್ನ ವಯಕ್ತಿಕ ತೀರ್ಮಾನ . ಈ ತೀರ್ಮಾನದ ಬಗ್ಗೆ ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಆದರೆ ಇವತ್ತು ಹೊಸ ತಿರುವು ಪಡೆದುಕೊಂಡು ಹೊರಟಿದೆ. ಇದಕ್ಕೆ ಹೇಗೆ ಒಮ್ಮೆಲೇ ಪ್ರತಿಕ್ರಿಯಿಸಬೇಕು ಅಂತಾನೂ ಅರ್ಥವಾಗ್ತಿಲ್ಲ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಬೇಕು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿ ಯಾರು ಯಾವೆಲ್ಲಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬಹುದು ಎನ್ನುವ ಚರ್ಚೆಗಳು ಈಗಾಗಲೇ ಶುರುವಾಗಿವೆ. ಅದರಲ್ಲೂ ಮುಖ್ಯವಾಗಿ ಈ ಬಾರಿ ಉತ್ತರಕನ್ನಡ (Uttara kannada) ಲೋಕಸಭಾ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆಗಳು ಜೋರಾಗಿದೆ. ಹಾಲಿ ಸಂಸದ ಹಿಂದೂ ಫೈರ್ ಬ್ರಾಂಡ್ ಅನಂತ್ ಕುಮಾರ್ ಹೆಗಡೆ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರ ಮಧ್ಯೆ ಇಷ್ಟು ದಿನ ತೆರೆಮರೆಯಲ್ಲಿದ್ದ ಅನಂತ್ ಕುಮಾರ್ ಹೆಗಡೆ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪ್ರತ್ಯಕ್ಷರಾಗಿದ್ದಾರೆ. ಈ ಮೂಲಕ ಅನಂತ್ ಕುಮಾರ್ ಹೆಗಡೆ ಮತ್ತೊಮ್ಮೆ ಲೋಕಸಭಾ ಚುನಾವಣೆ ಅಖಾಡಕ್ಕಿಳ್ಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಆರು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಕಟ್ಟರ್ ಹಿಂದುತ್ವವಾದಿ, ಅನಂತ್ ಕುಮಾರ್ ಹೆಗಡೆ ಅವರು ಯಾವುದೇ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಚುನಾವಣಾ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಂತೆ ತೆರೆಮರೆಗೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನಂತ್ ಕುಮಾರ್ ಹೆಗಡೆಗೆ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಇದರಿಂದ ಟಿಕೆಟ್ಗಾಗಿ ಹಿರಿಯ ಪತ್ರಕರ್ತರೊಬ್ಬರು ಕಸರತ್ತು ನಡೆಸಿದ್ದಾರೆ.
ಆದ್ರೆ, ಹೈಕಮಾಂಡ್ ಮತ್ತೊಮ್ಮೆ ಅನಂತ್ ಕುಮಾರ್ ಹೆಗಡೆ ಅವರಿಗೆ ಮಣೆ ಹಾಕುತ್ತಾ ಅಥವಾ ಹೊಸ ಮುಖಕ್ಕೆ ಟಿಕೆಟ್ ನೀಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ