Bengaluru: ಯಡಿಯೂರಪ್ಪರಿಂದ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭ; ಜೆಪಿ ನಡ್ಡಾ
ಬೆಂಗಳೂರಿನ ಕೆಆರ್ ಪುರಂನಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಾತನಾಡಿದರು. ಈ ವೇಳೆ ಅವರು ಮಾಜಿ ಸಿಎಂ ಬಿಎಸ್ವೈ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಶ್ಲಾಘಿಸಿದರು.
ಬೆಂಗಳೂರು: ರಾಜ್ಯದಲ್ಲಿ ಮೊದಲು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರಿಂದ ಅಭಿವೃದ್ಧಿ ಪರ್ವ ಆರಂಭವಾಯಿತು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಂದ ಅಭಿವೃದ್ಧಿ ಕಾರ್ಯ ಮುಂದುವರಿಕೆಯಾಯಿತು. ಬೈರತಿ ಬಸವರಾಜು ಕೂಡ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಹೇಳಿದರು. ನಗರದ ಕೆಆರ್ ಪುರಂನಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಜ್ಞಾನ, ವಿಜ್ಞಾನದ ನೆಲ. ಕರ್ನಾಟಕ ಆಧ್ಯಾತ್ಮಿಕ, ಸಾಂಸ್ಕೃತಿಕ, ಪ್ರತಿಭೆ, ತಂತ್ರಜ್ಞಾನಗಳ ನಾಡು. ದೇಶದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನ ಇದೆ. ವಿಶ್ವೇಶ್ವರಯ್ಯ, ಕೆಂಪೇಗೌಡರನ್ನು ಸ್ಮರಿಸಲೇಬೇಕು. ಬೆಂಗಳೂರು ನಂಬರ್ ವನ್ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಸ್ಟಾರ್ಟಪ್ನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಹೇಳಿದರು. ಜತೆಗೆ, ಸಭೆಯ ಮಧ್ಯದಲ್ಲೇ ಸಚಿವ ಬೈರತಿ ಬಸವರಾಜ್ ಕರೆದು ಹಸ್ತಲಾಘವ ಮಾಡಿ ಬೆನ್ನು ತಟ್ಟಿದರು.
2023 ರಲ್ಲಿ ಏಷ್ಯಾ ಪೆಸಿಫಿಕ್ನಲ್ಲಿ ಬೆಂಗಳೂರು ವೇಗವಾಗಿ ಅಭಿವೃದ್ಧಿ ಆಗುತ್ತಿರುವ ನಗರವಾಗಿ ಹೊರಹೊಮ್ಮುತ್ತಿದೆ. ಸದ್ಯ 70 ಸಾವಿರ ಕೋಟಿ ರೂ. ಮೌಲ್ಯದ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ದೇಶ ರಪ್ತು ಮಾಡುತ್ತಿದೆ. ಆಪಲ್ ಮೊಬೈಲ್ ಸಹ ಭಾರತದಲ್ಲಿ ತಯಾರಾಗುತ್ತಿದೆ. ಶೀಘ್ರದಲ್ಲೇ ಕರ್ನಾಟಕದಲ್ಲೂ ಆಪಲ್ ಮೊಬೈಲ್ ತಯಾರಾಗಲಿದೆ ಎಂದು ನಡ್ಡಾ ಹೇಳಿದರು.
9 ವರ್ಷದಲ್ಲಿ 74 ವಿಮಾನ ನಿಲ್ದಾಣಗಳನ್ನು ಕೇಂದ್ರ ಸರ್ಕಾರ ನಿರ್ಮಿಸಿದೆ. ರೈಲ್ವೇ ಬಜೆಟ್ನಲ್ಲಿ ಕರ್ನಾಟಕಕ್ಕೆ 7 ಸಾವಿರ ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ವೇಳೆ 4 ಸಾವಿರ ಕೋಟಿ ರೂ. ನೀಡಲಾಗಿತ್ತು. 2019-23 ರ ಅವಧಿಯಲ್ಲಿ ಕರ್ನಾಟಕದ ಹೆದ್ದಾರಿ ಬಜೆಟ್ 4,040 ಕೋಟಿ ರೂ.ಗೆ ಏರಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: MLC Puttanna: ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ
ಇತ್ತೀಚೆಗೆ ಮೋದಿ ಶಿವಮೊಗ್ಗದಲ್ಲಿ ಹೊಸ ವಿಮಾನ ನಿಲ್ದಾಣ ಉದ್ಘಾಟಿಸಿ, ಹೊಸ ರೈಲು ಯೋಜನೆಗಳಿಗೆ ಚಾಲನೆ ನೀಡಿದ್ದರು. ಫೆಬ್ರವರಿ 6ರಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಉದ್ಘಾಟಿಸಿದ್ದರು. ತುಮಕೂರಿನಲ್ಲಿ ಎಚ್ಎಎಲ್ ಹೆಲಿಕಾಪ್ಟರ್ ಘಟಕ ಉದ್ಘಾಟಿಸಿದ್ದರು. ಕೈಗಾರಿಕಾ ಟೌನ್ಶಿಪ್, ವಂದೇ ಭಾರತ್ ರೈಲುಗಳಿಗೂ ಮೋದಿ ಚಾಲನೆ ಕೊಟ್ಟಿದ್ದಾರೆ. ಕೆಂಪೇಗೌಡರ ಪ್ರತಿಮೆಯನ್ನೂ ಲೋಕಾರ್ಪಣೆ ಮಾಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರು ಮತ್ತು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ ಎಂದು ನಡ್ಡಾ ಹೇಳಿದರು.
‘ಕಾಂಗ್ರೆಸ್-ಜೆಡಿಎಸ್ ಭಾಯಿ ಭಾಯಿ’
ಜೆಡಿಎಸ್ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಈ ಎರಡೂ ಪಕ್ಷಗಳೂ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಜಾತಿವಾದ, ಕೋಮುವಾದ, ವಿಭಜನೆ ರಾಜಕಾರಣದ ಮೇಲೆ ನಂಬಿಕೆ ಇಟ್ಟಿವೆ. ಜೆಡಿಎಸ್ ಕುಟುಂಬಕ್ಕೆ ಆದ್ಯತೆ ಕೊಡುವ ಪಕ್ಷ. ಕಾಂಗ್ರೆಸ್ ಸಹ ಕುಟುಂಬ ರಾಜಕಾರಣದ ಪಕ್ಷ. ಕಾಂಗ್ರೆಸ್-ಜೆಡಿಎಸ್ ಭಾಯಿ ಭಾಯಿ. ಕಾಂಗ್ರೆಸ್ ನಾಯಕರು ಬೇಲ್ ಮೇಲಿದ್ದಾರೆ. ಜೆಡಿಎಸ್ಗೆ ಮತ ಕೊಟ್ಟರೆ ಕಾಂಗ್ರೆಸ್ಗೆ ಕೊಟ್ಟ ಹಾಗೆಯೇ ಸರಿ. ಪಿಎಫ್ಐ ಅನ್ನು ಕಾಂಗ್ರೆಸ್ ಜೆಡಿಎಸ್ ಬೆಂಬಲಿಸಿದ್ದವು. ಇಂಥ ಪಕ್ಷಗಳನ್ನು ಜನ ಬೆಂಬಲಿಸಬಾರದು. ದೇಶ ಮೋದಿಯವರ ಮೂಲಕ ಸುರಕ್ಷಿತವಾಗಿದೆ. ರಾಜ್ಯವು ಯಡಿಯೂರಪ್ಪ, ಬೊಮ್ಮಾಯಿ ಕೈಯಲ್ಲಿ ಸುರಕ್ಷಿತವಾಗಿದೆ ಎಂದು ನಡ್ಡಾ ಹೇಳಿದರು.
ದೇಶದಲ್ಲಿ ಯಾರೂ ರಾಹುಲ್ ಗಾಂಧಿ ಭಾಷಣ ಕೇಳುತ್ತಿಲ್ಲ. ಹೀಗಾಗಿ ಅವರು ವಿದೇಶದಲ್ಲಿ ಹೋಗಿ ಮಾತಾಡುತ್ತಿದ್ದಾರೆ. ಅಲ್ಲಿ ಹೋಗಿ ಮೋದಿ ವಿರುದ್ಧ ಮಾತನಾಡುತ್ತಾ ದೇಶಕ್ಕೇ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಡ್ಡಾ ಕಾಲು ಮುಟ್ಟಿ ನಮಸ್ಕರಿಸಿದ ಭಾಸ್ಕರ್ ರಾವ್
ಸಚಿವ ಡಾ. ಅಶ್ವತ್ಥ್ ನಾರಾಯಣ್ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಕೈ ಹಿಡಿದುಕೊಂಡು ಹೋಗಿ ಜೆಪಿ ನಡ್ಡಾಗೆ ಪರಿಚಯ ಮಾಡಿಸಿದರು. ಸಮಾವೇಶ ಮುಗಿದ ಬಳಿಕ ನಡ್ಡಾ ಕಾರಿನ ಬಳಿ ನಿಂತಿದ್ದ ಭಾಸ್ಕರ್ ರಾವ್ ಅವರನ್ನು ಅಶ್ವತ್ಥ್ ನಾರಾಯಣ್ ಪರಿಚಯ ಮಾಡಿಸಿದರು. ಇದೇ ವೇಳೆ ಭಾಸ್ಕರ್ ರಾವ್, ನಡ್ಡಾ ಕಾಲು ಮುಟ್ಟಿ ನಮಸ್ಕರಿಸಿದರು.
ಇಂದು ನಗರದಲ್ಲೇ ವಾಸ್ತವ್ಯ
ಇಂದು ನಗರದ ವಸಂತನಗರದ ಖಾಸಗಿ ಹೋಟೆಲ್ನಲ್ಲಿ ನಡ್ಡಾ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಬೆಳಗ್ಗೆ ತಮಿಳುನಾಡಿನ ಕೃಷ್ಣಗಿರಿಗೆ ತೆರಳಲಿದ್ದಾರೆ.
ನಡ್ಡಾಗೆ ತಟ್ಟಿದ ಟ್ರಾಫಿಕ್ ಬಿಸಿ
ಹೆಚ್‌ಎಎಲ್ ಏರ್‌ಪೋರ್ಟ್‌ನಿಂದ ಕೆಆರ್ ಪುರಕ್ಕೆ ತೆರಳುತ್ತಿದ್ದ ನಡ್ಡಾ ಸಂಚಾರ ದಟ್ಟಣೆಯಲ್ಲಿ ಸಿಲುಕಿದರು. ಹೀಗಾಗಿ ರೋಡ್‌ಶೋನಲ್ಲಿ ಭಾಗಿಯಾಗದೆ ಸಮಾವೇಶ ಸ್ಥಳಕ್ಕೆ ತೆರಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 pm, Thu, 9 March 23