ಅಲ್ಪಸಂಖ್ಯಾತರು, ಬಡವರನ್ನು ಗುರಿಯಾಗಿಸಿ ಬೃಹತ್ ಪ್ರಚಾರಾಂದೋಲನ ಆರಂಭಿಸಲಿದೆ ಬಿಜೆಪಿ

ಅಲ್ಪಸಂಖ್ಯಾತರು, ಬಡವರನ್ನು ಗುರಿಯಾಗಿಸಿ ಬೃಹತ್ ಪ್ರಚಾರಾಂದೋಲನ ಆರಂಭಿಸಲಿದೆ ಬಿಜೆಪಿ
ಬಿಜೆಪಿ ಚುನಾವಣೆ ಸಿದ್ಧತೆ

ಭಾರತದಲ್ಲಿ ನರೇಂದ್ರ ಮೋದಿ ಆಡಳಿತ ಆರಂಭವಾದ 8 ವರ್ಷಗಳ ಅವಧಿಯಲ್ಲಿ ಆಗಿರುವ ಬದಲಾವಣೆಗಳನ್ನು ಈ ವೇಳೆ ಸಾರಿ ಹೇಳಲಾಗುವುದು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 12, 2022 | 9:02 AM

ದೆಹಲಿ: ಸಮಾಜದ ಎಲ್ಲ ವರ್ಗಗಳನ್ನೂ ತಲುಪುವ ಉದ್ದೇಶದಿಂದ ಬಿಜೆಪಿ ಮೇ 30ರಿಂದ 15 ದಿನಗಳ ಅವಧಿಗೆ ಬೃಹತ್ ಪ್ರಚಾರಾಂದೋಲನ ನಡೆಸಲಿದೆ. ಅಲ್ಪಸಂಖ್ಯಾತರು, ದಲಿತರು ಮತ್ತು ಬುಡಕಟ್ಟು ಜನಾಂಗಗಳನ್ನು ಗುರಿಯಾಗಿಸಿ ಈ ಪ್ರಚಾರ ನಡೆಸಲಾಗುವುದು. ಭಾರತದಲ್ಲಿ ನರೇಂದ್ರ ಮೋದಿ ಆಡಳಿತ ಆರಂಭವಾದ 8 ವರ್ಷಗಳ ಅವಧಿಯಲ್ಲಿ ಆಗಿರುವ ಬದಲಾವಣೆಗಳನ್ನು ಈ ವೇಳೆ ಸಾರಿ ಹೇಳಲಾಗುವುದು. ಸಂಸದರು, ಶಾಸಕರು ಸೇರಿದಂತೆ ಪಕ್ಷದ ಎಲ್ಲ ಚುನಾಯಿತ ಪ್ರತಿನಿಧಿಗಳು ಈ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶದ ಎಲ್ಲ ಮತಗಟ್ಟೆಗಳ ಮಟ್ಟದಲ್ಲಿ ಪ್ರಭಾತ್ ಫೇರಿಗಳನ್ನು ಆಯೋಜಿಸಲಾಗಿದೆ. ಮೋದಿ ಸರ್ಕಾರದ ಸಾಧನೆಗಳ ರಿಪೋರ್ಟ್​ ಕಾರ್ಡ್​ಗಳನ್ನೂ ಈ ವೇಳೆ ಸಾರ್ವಜನಿಕರಿಗೆ ಹಂಚಲಾಗುವುದು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಬಿಜೆಪಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿ ಓದಲು ಲಿಂಕ್ ಕ್ಲಿಕ್ ಮಾಡಿ

ಪ್ರಚಾರಾಂದೋಲನಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಲಿದ್ದಾರೆ. ‘8 ವರ್ಷಗಳ ಉತ್ತಮ ಆಡಳಿತ, ಸೇವೆ ಮತ್ತು ಬಡವರ ಅಭಿವೃದ್ಧಿ’ (8 Years: Service, Good Governance and Welfare of the Poor) ಎಂದು ಪ್ರಚಾರಾಂದೋಲನಕ್ಕೆ ಹೆಸರು ಇಡಲಾಗಿದೆ. ಮೇ 30ರಂದು ಬಿಜೆಪಿ ‘ದೇಶಕ್ಕೆ ಮಾಹಿತಿ’ (A Report to the Nation) ಹೆಸರಿನ ಪುಸ್ತಕವನ್ನು ಬಿಜೆಪಿಯ ಉನ್ನತ ನಾಯಕರು ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಸಚಿವರು ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೇ 10ರಿಂದ 10 ದಿನಗಳ ಅವಧಿಗೆ ಮನೆಮನೆ ಸಂಪರ್ಕ ಮಾಡುತ್ತೇವೆ. ನಂತರದ ಐದು ದಿನಗಳ ಕಾಲ ವಿವಿಧೆಡೆ ಸಭೆ ಸಮಾರಂಭಗಳನ್ನು ನಡೆಸಲಾಗುವುದು. ರೈತರು, ಮಹಿಳೆಯರು, ಎಸ್​ಸಿ, ಎಸ್​ಟಿ, ಒಬಿಸಿ, ಹಿಂದುಳಿದ ವರ್ಗಗಳು, ನಗರ ಪ್ರದೇಶಗಳ ಬಡವರು ಮತ್ತಿತರರು ಸೇರಿದಂತೆ ಸಮಾಜದ ನಿರ್ದಿಷ್ಟ ವರ್ಗವನ್ನು ಗುರಿಯಾಗಿಸಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿಕೆಯು ತಿಳಿಸಿದೆ.

ಈ ಪ್ರಚಾರಾಂದೋಲನದಲ್ಲಿ ಬಿಜೆಪಿಯು ಮೂರು ದಿನಗಳನ್ನು ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಜನರಿಗೆ ನೀಡಿರುವ ಕಾರ್ಯಕ್ರಮಗಳನ್ನು ವಿವರಿಸಲು ಬಳಸಿಕೊಳ್ಳಲಿದೆ. ಜೂನ್ 6ರಿಂದ 8ರವರೆಗೆ ಪಕ್ಷವು ಈ ಕಾರ್ಯಕ್ರಮದಡಿ ಅಲ್ಪಸಂಖ್ಯಾತರೊಂದಿಗೆ ಸಂವಾದ ನಡೆಸಲಿದೆ. ಪಕ್ಷದ ಅಲ್ಪಸಂಖ್ಯಾತರ ಘಟಕದ ನಾಯಕರು ಅಲ್ಪಸಂಖ್ಯಾತ ಸಮುದಾಯಗಳ ಕುಟುಂಬಗಳೊಂದಿಗೆ ಸಂವಾದ ನಡೆಸಿ, ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ವಿವರಿಸಲಿದ್ದಾರೆ.

ಜೂನ್ 3ರಿಂದ 5ರವರೆಗೆ ಜಾರ್ಖಂಡ್​ನ ರಾಂಚಿಯಲ್ಲಿ ‘ಬಿರ್ಸಾ ಮುಂಡಾ ವಿಶ್ವಾಸ ಜಾಥಾ ಮತ್ತು ಬುಡಕಟ್ಟು ಮೇಳ’ ನಡೆಯಲಿದೆ. ಇದೇ ಮಾದರಿಯಲ್ಲಿ ಬುಡಕಟ್ಟು ಜನರು ಗಮನಾರ್ಹ ಪ್ರಮಾಣದಲ್ಲಿರುವ ಪ್ರದೇಶಗಳಲ್ಲಿ ಜಾಥಾ, ಸಮಾವೇಶಗಳು ನಡೆಯಲಿವೆ. ಮತಗಟ್ಟೆ ಮಟ್ಟದಲ್ಲಿ ಪ್ರಭಾತ್ ಫೇರಿಗಳನ್ನು ನಡೆಸುವ ಜವಾಬ್ದಾರಿಯನ್ನು ಬಿಜೆಪಿಯ ಯುವ ಘಟಕ ‘ಭಾರತೀಯ ಯುವ ಜನತಾ ಮೋರ್ಚಾ’ಗೆ ವಹಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ‘ವಿಕಾಸ್ ತೀರಥ್’ ಬೈಕ್ ಜಾಥಾಗಳನ್ನು ನಡೆಸಲಿದೆ. ವಿವಿಧ ರಾಜ್ಯಗಳ ಶಾಸಕರು ಮತ್ತು ಸಂಸದರು ಈ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಪ್ರದೇಶದ ಮೌ ನಗರಗಳಲ್ಲಿ ಪರಿಶಿಷ್ಟ ಜಾತಿಗಳ ವಿಶೇಷ ಜಾಥಾ ನಡೆಯಲಿದೆ. ಈ ಜಾಥಾದಲ್ಲಿ ಬಿಜೆಪಿಯ ಹಿರಿಯ ನಾಯಕರು, ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಬಿಜೆಪಿಯು ಬಡವರ ಅಭ್ಯುದಯಕ್ಕಾಗಿ ಜಾರಿಗೊಳಿಸಿರುವ ಕಾರ್ಯಕ್ರಮಗಳನ್ನು ವಿವರಿಸಲಿದ್ದಾರೆ. ಪ್ರಚಾರಾಂದೋಲನಕ್ಕಾಗಿ ವಿಶೇಷ ವೆಬ್​ಸೈಟ್ ಮತ್ತು ವಿಶಿಷ್ಟ ಹಾಡನ್ನು ಬಿಡುಗಡೆ ಮಾಡಲು ಬಿಜೆಪಿ ಉದ್ದೇಶಿಸಿದೆ.

Follow us on

Related Stories

Most Read Stories

Click on your DTH Provider to Add TV9 Kannada