ವಿಧಾನ ಪರಿಷತ್ 4 ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂನ್ 15ಕ್ಕೆ ಮತದಾನ

ವಿಧಾನ ಪರಿಷತ್ 4 ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂನ್ 15ಕ್ಕೆ ಮತದಾನ
ವಿಧಾನ ಪರಿಷತ್ ಚುನಾವಣೆ

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಮೇ 18ರಂದು ರಾಜೀನಾಮೆ ನೀಡುವ ಸಾಧ್ಯತೆಯಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 12, 2022 | 2:21 PM

ಬೆಂಗಳೂರು: ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಪದವೀಧರ ಕ್ಷೇತ್ರಗಳ ಎರಡು ಮತ್ತು ಶಿಕ್ಷಕರ ಕ್ಷೇತ್ರಗಳ ಎರಡು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರ, ವಾಯವ್ಯ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 19ರಂದು ಪರಿಷತ್​ ಚುನಾವಣೆಯ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಮೇ 26 ಕೊನೆಯ ದಿನ. ಜೂನ್ 13ರಂದು ಮತದಾನ ಮತ್ತು ಜೂನ್ 15ರಂದು ಮತ ಎಣಿಕೆ ನಡೆಯಲಿದೆ. ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಹನುಮಂತ ನಿರಾಣಿ, ಶ್ರೀಕಂಠೇಗೌಡ ಮತ್ತು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಸವರಾಜ ಹೊರಟ್ಟಿ, ಅರುಣ ಶಹಾಪುರ ಅವಧಿ ಜುಲೈ 7ಕ್ಕೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದೆ.

ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದ ಸುದ್ದಿಗೆ ಲಿಂಕ್

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಮೇ 18ರಂದು ರಾಜೀನಾಮೆ ನೀಡುವ ಸಾಧ್ಯತೆಯಿದೆ. ರಾಜೀನಾಮೆ ನೀಡಿದ ನಂತರ ಮೇ 19ರಂದು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿಯು ದಾವೋಸ್​ಗೆ ತೆರಳುವ ಮುನ್ನ ಹೊರಟ್ಟಿ ಬಿಜೆಪಿಗೆ ಸೇರಲು ತೀರ್ಮಾನಿಸಿದ್ದಾರೆ. ಹೊರಟ್ಟಿ ಅವರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯುವ ಸಾಧ್ಯತೆಯಿದೆ.

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧ

ರಾಜ್ಯದಲ್ಲಿ ಜೂನ್‌ ವೇಳೆಗೆ ವಿಧಾನ ಪರಿಷತ್ ಚುನಾವಣೆ (MLC Elections) ನಡೆಯಲಿದೆ. ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಪಕ್ಷಗಳು ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ನಿರತವಾಗಿವೆ. ಈ ಸಂಬಂಧ ಭಾರತೀಯ ಜನತಾ ಪಕ್ಷ- ಬಿಜೆಪಿ (BJP) ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಿದೆ. ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಅರುಣ್ ಶಹಾಪುರ್ ಬಿಜೆಪಿ ಟಿಕೆಟ್ ಪಡೆಯುವ ನಿರೀಕ್ಷೆ ಇದೆ. ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಮೋಹನ್ ಲಿಂಬಿಕಾಯಿ ಹೆಸರು ಘೋಷಿಸುವ ನಿರೀಕ್ಷೆ ಇದೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಗೋ.‌ಮಧುಸೂದನ್ ಹಾಗೂ ಕಳೆದ ಬಾರಿ ಸೋತಿದ್ದ ಮೈ.ವಿ.ರವಿಶಂಕರ ಹೆಸರುಗಳು ರೇಸ್​ನಲ್ಲಿದ್ದು, ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಬಸವರಾಜ ಹೊರಟ್ಟಿಗೆ ಹಿನ್ನೆಡೆ?

ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಮೋಹನ್ ಲಿಂಬಿಕಾಯಿ ಅಭ್ಯರ್ಥಿ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಬಸವರಾಜ ಹೊರಟ್ಟಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಬಿಜೆಪಿ ಬೆಂಬಲದೊಂದಿಗೆ ಹೊರಟ್ಟಿಯವರು ಸ್ಪರ್ಧೆಗೆ ಒಲವು ತೋರಿದ್ದರು. ಇದೀಗ ಹೊರಟ್ಟಿಗೆ ಬಿಜೆಪಿಯ ಬೆಂಬಲ ಅಥವಾ ಟಿಕೆಟ್ ಅನುಮಾನ ಎನ್ನಲಾಗಿದೆ. ಹೊರಟ್ಟಿ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸುವ ಅಥವಾ ಬೆಂಬಲಿಸುವ ಕುರಿತು ತೆರೆಮರೆಯ ಚಟುವಟಿಕೆಗಳು ನಡೆದಿದ್ದವು.

ಆದರೆ ಹೊರಟ್ಟಿಗೆ 75 ವರ್ಷ ತುಂಬಿದೆ. ಬಿಜೆಪಿ ಸೇರಲು ಅವರಿಗೆ ವಯಸ್ಸಿನ ಅಡ್ಡಿಯಾಗಿದೆ ಎನ್ನುವ ಮಾತು ಕೇಳಿಬಂದಿದೆ. ಈ ಕುರಿತು ಕೆಲ ಬಿಜೆಪಿಗರು ವರಿಷ್ಠರ ಗಮನಕ್ಕೆ ತಂದಿದ್ದರು ಎನ್ನಲಾಗಿದ್ದು, ಹೀಗಾಗಿ ಹೊರಟ್ಟಿ ಬಿಜೆಪಿ ಸೇರಿದರೂ ಟಿಕೆಟ್​ ನಿರಾಕರಿಸುವ ಸಾಧ್ಯತೆ ಇದೆ. ಜೂನ್ ವೇಳೆಗೆ ಹೊರಟ್ಟಿ ಅವರ ಸದಸ್ಯತ್ವ ಅವಧಿ ಮುಕ್ತಾಯವಾಗಲಿದೆ.

ಕಾಂಗ್ರೆಸ್​ನಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರು ಘೋಷಣೆ: ಡಿಕೆ ಶಿವಕುಮಾರ್

ಇತ್ತ ಕಾಂಗ್ರೆಸ್​ನಲ್ಲಿ ಪರಿಷತ್​ನ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಮಧುಮಾದೇಗೌಡರು ಹಾಗೂ ಧಾರವಾಡದ ಗುರಿಕಾರ್ ಅವರ ಹೆಸರನ್ನು ಎಐಸಿಸಿ ಅಂತಿಮಗೊಳಿಸಿದೆ. ಇನ್ನೆರಡು ಕ್ಷೇತ್ರಗಳಿಗೆ ನಾಯಕರ ಜತೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada