ಕೋಟ್ಯಂತರ ರೂ ‘ಕೈ’ಬದಲು! FIR ದಾಖಲು: ಬಳ್ಳಾರಿ ಪಾಲಿಕೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದರೂ ಮೇಯರ್ ಸ್ಥಾನ ಹರಾಜಿಗೆ, ಶಾಸಕ ನಾಗೇಂದ್ರ ಪಾತ್ರವೇನು?

ಕೋಟ್ಯಂತರ ರೂ ‘ಕೈ’ಬದಲು! FIR ದಾಖಲು: ಬಳ್ಳಾರಿ ಪಾಲಿಕೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದರೂ ಮೇಯರ್ ಸ್ಥಾನ ಹರಾಜಿಗೆ, ಶಾಸಕ ನಾಗೇಂದ್ರ ಪಾತ್ರವೇನು?
ಹಣ ಪಡೆದು ವಂಚಿಸಿದ ಶಾಸಕರ ಬಾಮೈದ ಎರಿಸ್ವಾಮಿ (ಬಿಳಿ ಟಿ ಶರ್ಟ್​), ದೂರುದಾರ ಕಾಂಗ್ರೆಸ್ ಸದಸ್ಯ ಎನ್ ಎಂಡಿ ಆಸೀಫ್

Bellari Mayor: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಸದಸ್ಯರು ಬಹುಮತ ಹೊಂದಿದ್ದರೂ ಮೇಯರ್ ಸ್ಥಾನಕ್ಕಾಗಿ ಮೊದಲಿನಿಂದಲೂ ಪೈಪೋಟಿ ನಡೆಯುತ್ತಲೇ ಬಂದಿದೆ. ಈ ಮೊದಲು ಸಾಮಾನ್ಯ ವರ್ಗಕ್ಕೆ ಮೀಸಲಾತಿ ಇದ್ದ ಪರಿಣಾಮ ಅಂದು ನಾಗೇಂದ್ರರ ಆಪ್ತ ಎನ್ ಎಂಡಿ ಆಸೀಫ್ ಮೇಯರ್ ಸ್ಥಾನದ ಆಕ್ಷಾಂಕಿಯಾಗಿದ್ರು.

TV9kannada Web Team

| Edited By: sadhu srinath

May 11, 2022 | 10:11 PM

ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನ (Bellari City Corporation Mayor) ಕೊಡಿಸುವುದಾಗಿ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ (MLA Nagendra) ಬಾಮೈದ, ಕಾಂಗ್ರೆಸ್ ಮುಖಂಡ ಟಿ.ಜಿ. ಎರಿಸ್ವಾಮಿ ಪಾಲಿಕೆಯ ಸದಸ್ಯನಿಂದ ಕೋಟಿ ಕೋಟಿ ಹಣ ಪಡೆದು ಜೀವ ಬೆದರಿಕೆ ಹಾಕಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಮೇಯರ್ ಸ್ಥಾನ ಕೊಡಿಸುವುದಾಗಿ 3.5 ಕೋಟಿ ರೂಪಾಯಿ ಪಡೆದು ಮೇಯರ್ ಸ್ಥಾನ ಕೊಡಿಸದೇ ವಂಚನೆ ಮಾಡಿದ್ದಲ್ಲದೇ ಈಗ ಹಣ ಮರಳಿ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆಂದು ಪಾಲಿಕೆ ವಾರ್ಡ್ ನಂಬರ್ 30 ರ ಕಾಂಗ್ರೆಸ್ ಪಕ್ಷದ (Congress) ಪಾಲಿಕೆ ಸದಸ್ಯ ಎನ್.ಎಂ.ಡಿ ಆಸೀಫ್ ಬಾಷಾ ಅವರು ಕೌಲ್ ಬಜಾರ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಎನ್.ಎಂ.ಡಿ ಆಸೀಫ್ ಬಾಷಾ ಅವರು ತನ್ನ ಕಡೆಯಿಂದ 3.5 (ಮೂರುವರೆ) ಕೋಟಿ ರೂ ಪಡೆದು ಮೇಯರ್ ಸ್ಥಾನ ಕೊಡಿಸುವುದಾಗಿ ನಂಬಿಸಿ ನಗದು ಹಣವನ್ನು ಪಡೆದುಕೊಂಡಿದ್ದರು ಎಂದು ದೂರಲಾಗಿದೆ. ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ನಿನಗೆ ಕೊಡಿಸುವುದಾಗಿ ಹೇಳಿ ಹಣ ಪಡೆದಿದ್ದರು. ಆದರೆ ಈಗ ಮೀಸಲಾತಿ ಬದಲಾವಣೆ ಪರಿಣಾಮ ಮೇಯರ್ ಸ್ಥಾನ ಕೊಡಿಸಲಿಲ್ಲ. ಜೊತೆಗೆ ಎರಿಸ್ವಾಮಿ ಅವರಿಗೆ ನೀಡಿದ ಹಣವನ್ನು ವಾಪಸ್ ಕೇಳಿದಾಗಲೆಲ್ಲಾ ತನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಹಣ ಕೇಳಿದಾಗಲೆಲ್ಲಾ ಇಂದಲ್ಲ, ನಾಳೆ ಕೊಡುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಮೋಸ ಮಾಡಿರುತ್ತಾರೆಂದು ಪ್ರಕರಣ ದಾಖಲು ಮಾಡಿದ್ದಾರೆ.

ಸಚಿವ ಹಾಗೂ ಶಾಸಕರ ಬಾಮೈದನ ವಿರುದ್ಧ ಕೇಸ್! ಮೇಯರ್ ಸ್ಥಾನ ಕೊಡಿಸುವುದಾಗಿ ಹಣ ಪಡೆದಿರುವ ಕಾಂಗ್ರೆಸ್ ಮುಖಂಡ ಟಿ.ಜಿ. ಎರಿಸ್ವಾಮಿ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರರ ಬಾಮೈದನಾಗಿದ್ದಾನೆ. ಅಲ್ಲದೇ ಸದ್ಯ ಆಂಧ್ರ ಪ್ರದೇಶದ ಸರ್ಕಾರದಲ್ಲಿ ಸಚಿವರಾಗಿರುವ ಗುಮ್ಮನೂರು ಜಯರಾಂರವರ ಸಹೋದರಿಯ ಪತಿಯಾಗಿರುವ ಎರಿಸ್ವಾಮಿ ಬಳ್ಳಾರಿಯಲ್ಲಿ ಶಾಸಕ ನಾಗೇಂದ್ರರ ಹಣಕಾಸು ವ್ಯವಹಾರಗಳನ್ನ ನಿಭಾಯಿಸುತ್ತಾರೆ.

ಶಾಸಕರ ಬಲಗೈ ಬಂಟನೇ ಬಾಮೈದನ ವಿರುದ್ದ ದೂರು ನೀಡಿದ ಗ್ರಾಮೀಣ ಶಾಸಕ ನಾಗೇಂದ್ರ ಅವರ ಬಾಮೈನಾಗಿರುವ ಎರಿಸ್ವಾಮಿ ಶಾಸಕರ ಅನೇಕ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು. ಪ್ರಕರಣ ಎರಿಸ್ವಾಮಿ ಅವರ ಮೇಲೆ ದಾಖಲಾಗಿದ್ದರೂ, ಇದರ ಆರೋಪ ಕೇಳಿ ಬರುತ್ತಿರುವುದು ಶಾಸಕ ನಾಗೇಂದ್ರ ಅವರ ಮೇಲೆ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ನಾಗೇಂದ್ರ ಅವರೇ ಪ್ರತಿಕ್ರಿಯೆ ನೀಡಬೇಕಿದೆ. ಅಲ್ಲದೇ ಕಾಂಗ್ರೆಸ್ ಪಕ್ಷದ ಪಾಲಿಕೆಯ ಸದಸ್ಯನಾಗಿರುವ ಎನ್ ಎಂಡಿ ಆಸೀಫ್ ಕೂಡಾ ಶಾಸಕ ನಾಗೇಂದ್ರರ ಬಲಗೈ ಬಂಟನಾಗಿದ್ದ. ಶಾಸಕರ ಜೊತೆ ಜೊತೆಯಲ್ಲೆ ಓಡಾಡುತ್ತಿದ್ದ ಆಸೀಫ್ ಈಗ ಶಾಸಕರ ಬಾಮೈದನ ವಿರುದ್ಧ ದೂರು ನೀಡಿರುವುದು ವಿಶೇಷವಾಗಿದೆ.

ಮೇಯರ್ ಸ್ಥಾನ ಹರಾಜು ಹಾಕಿದ್ರಾ..? ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಸದಸ್ಯರು ಬಹುಮತ ಹೊಂದಿದ್ದರೂ ಮೇಯರ್ ಸ್ಥಾನಕ್ಕಾಗಿ ಮೊದಲಿನಿಂದಲೂ ಪೈಪೋಟಿ ನಡೆಯುತ್ತಲೇ ಬಂದಿದೆ. ಈ ಮೊದಲು ಸಾಮಾನ್ಯ ವರ್ಗಕ್ಕೆ ಮೀಸಲಾತಿ ಇದ್ದ ಪರಿಣಾಮ ಅಂದು ನಾಗೇಂದ್ರರ ಆಪ್ತ ಎನ್ ಎಂಡಿ ಆಸೀಫ್ ಮೇಯರ್ ಸ್ಥಾನದ ಆಕ್ಷಾಂಕಿಯಾಗಿದ್ರು. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಆಗಲೂ ಸಹ ಶಾಸಕ ನಾಗೇಂದ್ರ ತಮ್ಮ ಗುಂಪಿನ ಮಹಿಳಾ ಸದಸ್ಯೆಯಾದ ರಾಜೇಶ್ವರಿ ಸುಬ್ಬರಾಯಡುರನ್ನ ಮೇಯರ್ ಆಗಿ ಆಯ್ಕೆ ಮಾಡಿದ್ರು. ಮೇಯರ್ ಆಗಿ ರಾಜೇಶ್ವರಿ ಸುಬ್ಬರಾಯಡು ಆಯ್ಕೆಯಾದ ನಂತರವೂ ಪಾಲಿಕೆಯ ಕಾಂಗ್ರೆಸ್ ಸದಸ್ಯರ ಇನ್ನೊಂದು ಗುಂಪಿನಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಈಗ ಸ್ವತಃ ಶಾಸಕರ ಬಲಗೈ ಬಂಟನೇ ಮೇಯರ್ ಸ್ಥಾನಕ್ಕೆ ಶಾಸಕರ ಬಾಮೈದನಿಗೆ ಹಣ ಕೊಟ್ಟಿರುವುದಾಗಿ ದೂರು ದಾಖಲಿಸಿರುವುದರಿಂದ ಮೇಯರ್ ಸ್ಥಾನ ಮಾರಾಟವಾಗಿದೆಯಾ? ಅನ್ನೋ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

Follow us on

Most Read Stories

Click on your DTH Provider to Add TV9 Kannada