ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ (BJP) ಸೋಲಿನಿಂದ ಪಕ್ಷದ ಕಾರ್ಯಕರ್ತರಲ್ಲಿ ನಾಯಕತ್ವದ ಮೇಲೆ ಉಂಟಾಗಿರುವ ಆಕ್ರೋಶ ಇನ್ನೂ ತಣ್ಣಗಾಗಿಲ್ಲ. ಚಾಮರಾಜನಗರ (Chamarajanagar) ಮತ್ತು ದಾವಣಗೆರೆಯಲ್ಲಿ (Davanagere) ನಡೆದ ಎರಡು ಪ್ರತ್ಯೇಕ ಸಭೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಡಿವಿ ಸದಾನಂದ ಗೌಡರ ಸಮ್ಮುಖದಲ್ಲಿಯೂ ಕಾರ್ಯಕರ್ತರು ಅಸಮಾಧಾನ ತೋಡಿಕೊಂಡಿದ್ದಾರೆ. ಮಾಜಿ ಸಚಿವ ವಿ ಸೋಮಣ್ಣ ಬೆಂಬಲಿಗರಂತೂ ಪಕ್ಷದ ಸೋಲಿಗೆ ಬಿಜೆಪಿಯ ಒಳಗಿನವರೇ ಕಾರಣ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಗುರುವಾರ ಬಿಜೆಪಿ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಡಿವಿ ಸದಾನಂದ ಗೌಡ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧವೇ ವಿ ಸೋಮಣ್ಣ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ನ ಗ್ಯಾರಂಟಿ ಕಾರ್ಡ್ನಿಂದ ಸೋಲಾಗಿಲ್ಲ, ನಮ್ಮವರಿಂದಲೇ ಸೋಲಾಗಿದೆ ಎಂದಿದ್ದಾರೆ.
ನಮ್ಮ ನಾಯಕರಿಂದಲೇ ಚುನಾವಣೆಯಲ್ಲಿ ನಮಗೆ ಸೋಲಾಗಿದೆ. ಮೊದಲು ಕಾರ್ಯಕರ್ತರಿಗೆ ಮಾತನಾಡಲು ಅವಕಾಶ ನೀಡಿ. ಚುನಾವಣೆಯಲ್ಲಿ ಯಾಕೆ ಹಿನ್ನಡೆಯಾಗಿದೆ ಎಂಬುದನ್ನು ಹೇಳ್ತೇವೆ. ಅದನ್ನು ಬಿಟ್ಟು ನೀವು ಹೇಳೋದು ಏನಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ದಾವಣಗೆರೆಯ ರೇಣುಕ ಮಂದಿರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ, ಚುನಾವಣೆಯಲ್ಲಿ ನಾವು ಸೋತಿಲ್ಲ, ನಮ್ಮವರೇ ನಮ್ಮನ್ನು ಸೋಲಿಸಿದರು ಎಂದು ಮಾಜಿ ಶಾಸಕ ರಾಮಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದರೂ ಸೋಲಾಗಿದೆ. ಇಷ್ಟಾಗಿಯೂ ಸೋಲುತ್ತೇವೆ ಅಂದ್ರೆ ನಮ್ಮವರೇ ನಮ್ಮನ್ನು ಸೋಲಿಸಿದರು ಎಂದು ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಕೊನೆಗೂ ವಿರೋಧ ಪಕ್ಷ ನಾಯಕನ ಆಯ್ಕೆಗೆ ಕೂಡಿಬಂತು ಮುಹೂರ್ತ, ಬಿಜೆಪಿಯಲ್ಲಿ ಯಾರಾಗ್ತಾರೆ ಪ್ರತಿಪಕ್ಷದ ನಾಯಕ?
874 ಮತಗಳಿಂದ ನಾನು ಸೋತೆ, 1 ಮತದಿಂದ ಸೋತರೂ ಅದು ಸೋಲೇ. ಅಭಿವೃದ್ಧಿ ಕೆಲಸ ಮಾಡುವವರು ಜನರಿಗೆ ಬೇಡವಾಗಿದ್ದಾರೆ ಎಂದು ಸ್ವಪಕ್ಷದವರ ವಿರುದ್ಧವೇ ರಾಮಚಂದ್ರ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುತದೊಂದಿಗೆ ಗೆದ್ದು ಅಧಿಕಾರಕ್ಕೇರಿದ್ದರೆ ಬಿಜೆಪಿ ಕೇವಲ 65 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿತ್ತು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ