ಒಟ್ಟೊಟ್ಟಿಗೇ ಸುತ್ತಾಡಿ ಪಕ್ಷ ಕಟ್ಟಿ, ಜತೆಯಾಗಿಯೇ ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಯಡಿಯೂರಪ್ಪ, ಈಶ್ವರಪ್ಪ

|

Updated on: Apr 11, 2023 | 4:40 PM

ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಬಗ್ಗೆ ಸೋಮವಾರ ರಾತ್ರಿಯೇ ಯಡಿಯೂರಪ್ಪ ಜತೆ ಈಶ್ವರಪ್ಪ ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಯಡಿಯೂರಪ್ಪ ದೆಹಲಿಯಿಂದ ವಾಪಸಾದ ಬೆನ್ನಲ್ಲೇ ಅವರ ಜತೆ ದೂರವಾಣಿ ಮೂಲಕ ಚರ್ಚೆ ಮಾಡಿದ್ದ ಈಶ್ವರಪ್ಪ ನಂತರ ನಿವೃತ್ತಿ ತೀರ್ಮಾನ ಕೈಗೊಂಡಿದ್ದರು. ಇದರೊಂದಿಗೆ, ಒಟ್ಟೊಟ್ಟಿಗೆ ರಾಜಕೀಯ ಬುನಾದಿ ಹಾಕಿಕೊಂಡಿದ್ದ ಇಬ್ಬರು ನಾಯಕರು ಜತೆಯಾಗಿಯೇ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಂತಾಗಿದೆ.

ಒಟ್ಟೊಟ್ಟಿಗೇ ಸುತ್ತಾಡಿ ಪಕ್ಷ ಕಟ್ಟಿ, ಜತೆಯಾಗಿಯೇ ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಯಡಿಯೂರಪ್ಪ, ಈಶ್ವರಪ್ಪ
ಕೆಎಸ್ ಈಶ್ವರಪ್ಪ ಮತ್ತು ಬಿಎಸ್ ಯಡಿಯೂರಪ್ಪ
Follow us on

ಬಿಎಸ್​ ಯಡಿಯೂರಪ್ಪ (BS Yediyurappa) ಹಾಗೂ ಕೆಎಸ್ ಈಶ್ವರಪ್ಪ (KS Eshwarappa) ಎಂಬ ಎರಡು ಹೆಸರು ಕರ್ನಾಟಕ ರಾಜಕಾರಣದಲ್ಲಿ, ಅದರಲ್ಲಿಯೂ ಬಿಜೆಪಿ ಮಟ್ಟಿಗೆ ಬಹಳ ಮುಖ್ಯವಾದದ್ದು. ಬೇರೆ ಬೇರೆ ಊರುಗಳಿಂದ ಶಿವಮೊಗ್ಗಕ್ಕೆ ಬಂದು ನೆಲೆಸಿ, ಒಟ್ಟೊಟ್ಟಿಗೇ ಸುತ್ತಾಡಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದ ಈ ನಾಯಕರೀಗ ಜತೆಯಾಗಿಯೇ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಇದರೊಂದಿಗೆ ರಾಜ್ಯ ಬಿಜೆಪಿಯಲ್ಲಿ ಇಬ್ಬರು ದೊಡ್ಡ ನಾಯಕರು ಬಹುತೇಕ ತೆರೆಗೆ ಸರಿದಂತಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದು ಬಿಟ್ಟರೆ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಶ್ರಮಿಸಲಿದ್ದೇವೆ. ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದೇವೆ ಎಂಬುದಾಗಿ ಈ ಇಬ್ಬರೂ ನಾಯಕರು ಹೇಳುತ್ತಿದ್ದರೂ ರಾಜ್ಯ ರಾಜಕೀಯದಲ್ಲಿ ಈ ನಾಯಕರ ಪಾತ್ರ ಬಹುತೇಕ ತೆರೆಯ ಮರೆಗೆ ಸರಿದಂತೆಯೇ ಎಂದು ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಿಸಲಾಗುತ್ತಿದೆ.

ಎತ್ತಣಿಂದೆತ್ತಣ ಸಂಬಂಧ…

ಬಿಎಸ್ ಯಡಿಯೂರಪ್ಪ ಮೂಲತಃ ಮಂಡ್ಯ ಜಿಲ್ಲೆಯ ಬೂಕನಕೆರೆಯವರಾದರೆ, ಕೆಎಸ್ ಈಶ್ವರಪ್ಪ ಬಳ್ಳಾರಿ ಮೂಲದವರು. ಇಬ್ಬರೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್​​ಎಸ್​​ಎಸ್​ ಹಿನ್ನೆಲೆಯುಳ್ಳವರು. ಶಿವಮೊಗ್ಗಕ್ಕೆ ಬಂದು ನೆಲೆ ಕಂಡುಕೊಂಡ ಯಡಿಯೂರಪ್ಪ ರೈತರ, ಸಾಮಾನ್ಯ ಜನರ ಸಮಸ್ಯೆಗಳ ವಿಚಾರವನ್ನು ಮುಂದಿಟ್ಟುಕೊಂಡು ಶಿವಮೊಗ್ಗದಿಂದ ಪಕ್ಷವನ್ನು ಕಟ್ಟಿ ಬೆಳೆಸಲು ಮುಂದಾದರೆ ಈಶ್ವರಪ್ಪ ಅವರು ಹಿಂದುತ್ವದ ಹಾದಿಯನ್ನು ಆಯ್ಕೆ ಮಾಡಿಕೊಂಡರು. ಬಡತನದ ಹಿನ್ನೆಲೆಯಿಂದ ಬಂದ ಈ ನಾಯಕರು ಅದೆಷ್ಟೋ ಬಾರಿ ಜತೆಯಾಗಿ ಸ್ಕೂಟರ್​ನಲ್ಲಿ ಸುತ್ತಾಡಿ ಪಕ್ಷದ ಪರ ಕಾರ್ಯನಿರ್ವಹಿಸಿದ್ದೂ ಇದೆ ಎಂದು ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ. ವ್ಯಾಪಾರ ವಹಿವಾಟಿನಲ್ಲಿಯೂ ಬಿಎಸ್​ವೈ, ಈಶ್ವರಪ್ಪ ಪಾಲುದಾರರಾಗಿದ್ದರು. ಕ್ರಮೇಣ ರಾಜಕೀಯದಲ್ಲಿ ಔನ್ನತ್ಯಕ್ಕೇರಿದಂತೆ, ಅಧಿಕಾರ – ಸ್ಥಾನಮಾನಗಳು ದೊರೆಯುತ್ತಿದ್ದಂತೆಯೇ ಉಭಯರ ನಡುವಣ ಅಂತರ ಹೆಚ್ಚಾಗತೊಡಗಿತು.

ಅಧಿಕಾರ ಸಿಕ್ಕಿತು, ಅಂತರ ಹೆಚ್ಚಾಯ್ತು

2008ರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಈಶ್ವರಪ್ಪ ಇಂಧನ ಸಚಿವರಾದರು. ಈ ಮಧ್ಯೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರು ಪುತ್ರ ರಾಘವೇಂದ್ರ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದು ಈಶ್ವರಪ್ಪ ಮುನಿಸಿಗೆ ಕಾರಣವಾಗಿತ್ತು. ನಂತರ ಸಚಿವ ಸ್ಥಾನ ತೊರೆದಿದ್ದ ಅವರು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ನಂತರ ಬಿಜೆಪಿ ಜತೆ ಸಂಘರ್ಷಕ್ಕಿಳಿದ ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದರು. ಈ ಸಂದರ್ಭದಲ್ಲಂತೂ ಈಶ್ವರಪ್ಪ – ಯಡಿಯೂರಪ್ಪ ನಡುವೆ ಬಹಿರಂಗ ವಾಕ್ಸಮರ ನಡೆದಿತ್ತು. ನಂತರದ ವಿಧಾನಸಭೆ ಚುನಾವಣೆ ವೇಳೆಗೆ ಮತ್ತೆ ಬಿಜೆಪಿ ಸೇರಿದ ಯಡಿಯೂರಪ್ಪ ಪಕ್ಷಕ್ಕೆ ಬಲ ತುಂಬಿದರು.

ರಾಯಣ್ಣ ಬ್ರಿಗೇಡ್ ಮೂಲಕ ಈಶ್ವರಪ್ಪ ಸೆಡ್ಡು

2016ರ ಡಿಸೆಂಬರ್​​​ನಲ್ಲಿ, ಈಶ್ವರಪ್ಪ ಅವರು ಅಂದಿನ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಎದುರಿಸಲು ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಸಜ್ಜುಗೊಳಿಸಲು ರಾಯಣ್ಣ ಬ್ರಿಗೇಡ್ ಅನ್ನು ಪ್ರಾರಂಭಿಸಿದರು. ಸಿದ್ದರಾಮಯ್ಯ ಅವರಂತೆ ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದವರು ಈಶ್ವರಪ್ಪ. ಆಗ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪ ಅವರನ್ನು ಬ್ರಿಗೇಡ್ ಕೆರಳಿಸಿತು. ಇಬ್ಬರ ನಡುವಣ ಸಂಘರ್ಷ ಶಮನಗೊಳಿಸಲು ಪಕ್ಷದ ಕೇಂದ್ರ ನಾಯಕತ್ವ ಮಧ್ಯಸ್ಥಿಕೆ ವಹಿಸಬೇಕಾಗಿ ಬಂದಿತು.

ಪುತ್ರ ವಾತ್ಸಲ್ಯಕ್ಕಾಗಿ ರಾಜಕೀಯ ಪೈಪೋಟಿ

ಸಂಘರ್ಷವು ಭೂತಕಾಲದಲ್ಲಿ ಬೇರೂರಿಲ್ಲ, ಆದರೆ ಭವಿಷ್ಯದಲ್ಲಿ ಬೇರೂರಿದೆ ಎಂಬ ಹಿರಿಯರ ಮಾತು ಈಶ್ವರಪ್ಪ ಹಾಗೂ ಯಡಿಯೂರಪ್ಪ ವಿಚಾರದಲ್ಲಿ ಬಹುತೇಕ ನಿಜವಾಯಿತು. ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್‌ ಅವರನ್ನು ಬೆಳೆಸುತ್ತಿದ್ದರೆ, ಯಡಿಯೂರಪ್ಪ ಕೂಡ ತಮ್ಮ ಪುತ್ರರಿಗೆ ಅಧಿಕಾರ ಹಸ್ತಾಂತರಿಸಲು ಮುಂದಾಗಿದ್ದರು. ಇದುವೇ ಇಬ್ಬರ ನಡುವಣ ಪೈಪೋಟಿ ಹೆಚ್ಚಲು ಕಾರಣವಾಯಿತು.

ಇದನ್ನೂ ಓದಿ: KS Eshwarappa: ಕೆಎಸ್ ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ; ಬಿಜೆಪಿ ಹೈಕಮಾಂಡ್​ಗೆ ಟಿಕೆಟ್ ನೀಡಬೇಡಿ ಎಂದು ಮನವಿ

2018ರಲ್ಲಿ ಮತ್ತೆ ಒಂದು ದಿನದ ಮುಖ್ಯಮಂತ್ರಿಯಾದ ಯಡಿಯೂರಪ್ಪ ರಾಜೀನಾಮೆ ನೀಡಬಾಕಾಗಿ ಬಂತು. ನಂತರ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು. ಆ ಬಳಿಕ ಆಪರೇಷನ್ ಕಮಲದ ಮೂಲಕ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಇದರ ನಂತರವೂ ಬಿಎಸ್​ವೈ, ಈಶ್ವರಪ್ಪ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿತು.

ಮುಖ್ಯಮಂತ್ರಿ ವಿರುದ್ಧವೇ ದೂರು ನೀಡಿದ್ದ ಈಶ್ವರಪ್ಪ

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಎಂಬಂತೆ 2021ರಲ್ಲಿ ಮುಖ್ಯಮಂತ್ರಿಗಳ ವಿರುದ್ಧವೇ ಕೆ.ಎಸ್ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು. ತಮ್ಮ ವ್ಯಾಪ್ತಿಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಕೆಲಸಗಳಲ್ಲಿ ಮುಖ್ಯಮಂತ್ರಿಗಳ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಅವರು ದೂರಿದ್ದರು. ಇದರೊಂದಿಗೆ ಇಬ್ಬರು ನಾಯಕರ ನಡುವಣ ಭಿನ್ನಾಭಿಪ್ರಾಯ ಮತ್ತೆ ಹೆಚ್ಚಾಗಿತ್ತು.

ಮಕ್ಕಳಿಗಾಗಿಯೇ ಚುನಾವಣಾ ಕಣದಿಂದ ಹಿಂದೆ ಸರಿದರು…

ಒಂದು ಕಾಲದಲ್ಲಿ ಸ್ನೇಹಿತರಾಗಿದ್ದು, ಮಕ್ಕಳಿಗಾಗಿಯೇ ಪೈಪೋಟಿಗಿಳಿದ ಯಡಿಯೂರಪ್ಪ, ಈಶ್ವರಪ್ಪ ಈಗ ಮಕ್ಕಳಿಗಾಗಿಯೇ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಬೇಕಾಗಿ ಬಂದದ್ದು ವಿಪರ್ಯಾಸ. ಮಗ ವಿಜಯೇಂದ್ರ ಅವರಿಗೆ ರಾಜ್ಯ ರಾಜಕೀಯದಲ್ಲಿ ಭದ್ರ ಬುನಾದಿ ಹಾಕುವುದಕ್ಕಾಗಿಯೇ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಮಗ ಕಾಂತೇಶ್​ಗೊಂದು ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಈಶ್ವರಪ್ಪ ನಿವೃತ್ತಿಯ ನಿರ್ಧಾರ ಕೈಗೊಂಡಿದ್ದಾರೆ.

ಕೊನೇ ಕ್ಷಣದಲ್ಲಿ ಹಳೆಯ ಮಿತ್ರನ ಜತೆ ಚರ್ಚಿಸಿದ್ದ ಈಶ್ವರಪ್ಪ

ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಬಗ್ಗೆ ಸೋಮವಾರ ರಾತ್ರಿಯೇ ಯಡಿಯೂರಪ್ಪ ಜತೆ ಈಶ್ವರಪ್ಪ ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಯಡಿಯೂರಪ್ಪ ದೆಹಲಿಯಿಂದ ವಾಪಸಾದ ಬೆನ್ನಲ್ಲೇ ಅವರ ಜತೆ ದೂರವಾಣಿ ಮೂಲಕ ಚರ್ಚೆ ಮಾಡಿದ್ದ ಈಶ್ವರಪ್ಪ ನಂತರ ನಿವೃತ್ತಿ ತೀರ್ಮಾನ ಕೈಗೊಂಡಿದ್ದರು. ಇದರೊಂದಿಗೆ, ಒಟ್ಟೊಟ್ಟಿಗೆ ರಾಜಕೀಯ ಬುನಾದಿ ಹಾಕಿಕೊಂಡಿದ್ದ ಇಬ್ಬರು ನಾಯಕರು ಜತೆಯಾಗಿಯೇ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಂತಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ