ಬಿಜೆಪಿಯ ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ ವಿರುದ್ಧ ಸಭಾಪತಿಗೆ ಕಾಂಗ್ರೆಸ್ ದೂರು
ಬಿಜೆಪಿ ಎಂಎಲ್ಸಿಗಳಾದ ಎನ್. ರವಿಕುಮಾರ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ನ ಎಂಎಲ್ಸಿಗಳು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ನೀಡಿದ್ದಾರೆ. ರವಿಕುಮಾರ್ ಅವರು ಸರ್ಕಾರಿ ಅಧಿಕಾರಿಯನ್ನು ಪಾಕಿಸ್ತಾನಿ ಎಂದು ಕರೆದರೆ, ನಾರಾಯಣಸ್ವಾಮಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಿಂದಿಸಿದ್ದಾರೆ ಎಂದು ದೂರಿದ್ದಾರೆ. ಹೀಗಾಗಿ, ಬಿಜೆಪಿಯ ಈ ಇಬ್ಬರು ಪರಿಷತ್ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರು, ಜೂನ್ 02: ಬಿಜೆಪಿ ಎಂಎಲ್ಸಿ ಎನ್. ರವಿಕುಮಾರ್ (N Ravikumar) ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರ ವಿರುದ್ಧ ಕಾಂಗ್ರೆಸ್ ನಾಯಕರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ಎಂಎಲ್ಸಿಗಳಾದ ಪುಟ್ಟಣ್ಣ, ಸಲೀಂ ಅಹಮ್ಮದ್, ಗೋವಿಂದರಾಜು, ಸುಧಾಮ್ ದಾಸ್, ಶ್ರೀನಿವಾಸ್ ಅವರ ನಿಯೋಗ ದೂರು ನೀಡಿದೆ. ಎನ್. ರವಿಕುಮಾರ್ ಅವರು ಸರ್ಕಾರಿ ಅಧಿಕಾರಿಗೆ ಪಾಕಿಸ್ತಾನಿ ಎಂದಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನಿಂದಿಸಿದ್ದಾರೆ. ಕೂಡಲೇ ಇಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ರೀತಿಯ ಪದ ಬಳಕೆ ಸರಿಯಲ್ಲ: ಸಲೀಂ ಅಹ್ಮದ್
ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ರವಿಕುಮಾರ್ ಅವರ ಮಾತುಗಳು ಅಸಂಬದ್ಧವಾಗಿವೆ. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಲಬುರ್ಗಿ ಜಿಲ್ಲಾಧಿಕಾರಿಗಳ ವಿರುದ್ಧ ಆಡಿದ ಮಾತಿನ ಬಗ್ಗೆ ಕ್ರಮ ಜರುಗಿಸಬೇಕು. ಈ ರೀತಿಯ ಪದ ಬಳಕೆ ಸರಿಯಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಧಾನಸೌಧದಲ್ಲಿ ಪರಿಷತ್ ಸದಸ್ಯ ಸಲೀಂ ಅಹ್ಮದ್ ಆಗ್ರಹಿಸಿದರು.
ನಿಯಮಗಳನ್ನ ಪರಿಶೀಲಿಸಿ ಮುಂದಿನ ಕ್ರಮ: ಹೊರಟ್ಟಿ
ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ. ಅದನ್ನು ಸ್ವೀಕರಿಸಿದ್ದೇನೆ. ಸದನದ ನಿಯಮಗಳನ್ನ ಪರಿಶೀಲಿಸಿ ಮುಂದುವರೆಯುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಪ್ರಿಯಾಂಕ್ ಖರ್ಗೆ ವಿರುದ್ಧ ನಾರಾಯಣಸ್ವಾಮಿ ವಾಗ್ದಾಳಿ
ನನ್ನ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಏನೇನೋ ಮತನಾಡಿದ್ದಾರೆ. ನನ್ನ ಚಡ್ಡಿ ಹೊರುವ ಗಿರಾಕಿ ಎಂದಿದ್ದರು. ನಾನು ಒಂದು ಸಲ ನಾಯಿ ಪದ ಬಳಸಿದ್ದೆ. ಪ್ರಿಯಾಂಕ್ ಅವರೇ ಈಗ ಲಕ್ಷಾಂತರ ಸಲ ನಾಯಿ ಅಂತ ಹೇಳಿಕೊಳ್ಳುತ್ತಿದ್ದಾರೆ. ಇವರ ಕಾಂಗ್ರೆಸ್ ಕೋಟೆ ಬಿದ್ದಿದೆ. ಹಾಗಾಗಿ ಈ ರೀತಿ ಮಾತಾಡುತ್ತಿದ್ದಾರೆ. ಅಟ್ರಾಸಿಟಿ ಕೇಸ್ ಹಾಕಿಸುತ್ತಿದ್ದಾರೆ. ನನ್ನ ಹಾಗೂ ರವಿಕುಮಾರ್ ಅವರನ್ನು ಎಮ್ಎಲ್ಸಿ ಸ್ಥಾನದಿಂದ ತೆಗೆಯಿರಿ ಎಂದು ಸಭಾಪತಿಗೆ ದೂರು ಕೊಟ್ಟಿದ್ದಾರೆ. ಹಾಗೆಲ್ಲ ಮಾಡಲು ಆಗುತ್ತಾ? ನಿಮ್ಮ ತಂತ್ರ ಎಲ್ಲ ನನಗೆ ಗೊತ್ತು. ನಿಮ್ಮಿಂದ ಏನೂ ಮಾಡಲು ಆಗಲ್ಲ. ನಾವು ಕಾನೂನು ಬಾಹಿರ ಕೆಲಸ ಮಾಡಿಲ್ಲ. ಅವರ ಗರ್ವಭಂಗ ಮಾಡಲು ಹೊರಟಾಗ ಕಾಂಗ್ರೆಸ್ ನಾಯಕರೇ ನಮಗೆ ಮೆಚ್ಚುಗೆ ಸೂಚಿಸಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಬಂಧನದ ಭೀತಿಯಲ್ಲಿದ್ದ ಬಿಜೆಪಿ MLC ರವಿಕುಮಾರ್ ಗೆ ಕೊಂಚ ರಿಲೀಫ್ ನೀಡಿದ ಕೋರ್ಟ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೆಟ್ಟ ವಾತಾವರಣ ಸೃಷ್ಟಿ ಮಾಡುತ್ತಿದೆ. ಕಾನೂನು ಸುವ್ಯವಸ್ಥೆವನ್ನು ಸಂಪೂರ್ಣವಾಗಿ ಹದಗೆಡಿಸಿದೆ. ಬಿಜೆಪಿಯ ಹಾಗೂ ಹಿಂದೂ ಪರ ಸಂಘಟನೆಗಳ ನಾಯಕರನ್ನು ಟಾರ್ಗೆಟ್ ಮಾಡಿ ತೊಂದರೆ ಕೊಡುವ ಕೆಲಸಕ್ಕೆ ಕೈ ಹಾಕಿದೆ. ಮಂಗಳೂರಿನ ಕೆಲ ಮುಸ್ಲಿಂ ಸಂಘಟನೆಗಳು ಬ್ಲ್ಯಾಕ್ಮೇಲ್ ಮಾಡಿವೆ. ಈ ಬ್ಲ್ಯಾಕ್ಮೇಲ್ಗೆ ಹೆದರಿ ಗಡಿಪಾರು ಮಾಡುವ ಕೆಲಸ ಮಾಡಿದೆ. ಹಿಂದುತ್ವವಾದಿಗಳ ವಿರುದ್ಧವಾಗಿ ಕೆಲಸ ಮಾಡುವುದು ಆರಂಭವಾಗಿದೆ. ಹಿಂದುತ್ವವಾದಿಗಳನ್ನು ಮುಟ್ಟಿದರೆ ನಾವು ಸರ್ಕಾರವನ್ನು ಮುಟ್ಟಬೇಕಾಗುತ್ತದೆ. ಸರ್ಕಾರ ಎಚ್ಚರಿಕೆಯಿಂದ ಮುಂದೆ ಹೋಗಬೇಕು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:22 pm, Mon, 2 June 25







