ಅಟ್ರಾಸಿಟಿ ಕೇಸ್ ಬೆನ್ನಲ್ಲೇ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಡಿಸಿದ ಬಿಜೆಪಿ MLC ರವಿಕುಮಾರ್
ಕಲಬುರಗಿಯಲ್ಲಿ ಬಿಜೆಪಿ ಆಯೋಜಿಸಿದ್ದ “ಕಲಬುರಗಿ ಚಲೋ” ಪ್ರತಿಭಟನೆಯಲ್ಲಿ ಎಂಎಲ್‌ಸಿ ಎನ್. ರವಿಕುಮಾರ್ ಮಾತಿನ ಭರದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ ಅವರನ್ನು “ಪಾಕಿಸ್ತಾನಿ” ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.ಇನ್ನು ಇದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿಕೆಗೆ ಕರ್ನಾಟಕ ಐಎಎಸ್ ಅಧಿಕಾರಿಗಳ ಸಂಘ ಖಂಡಿಸಿದೆ. ಅಲ್ಲದೇ ರವಿ ಕುಮಾರ್ ವಿರುದ್ಧ ದೂರು ದಾಖಲಾಗಿದೆ.

ಕಲಬುರಗಿ, (ಮೇ 26): “ಕಲಬುರಗಿ ಜಿಲ್ಲಾಧಿಕಾರಿ ಪಾಕಿಸ್ತಾನದಿಂದ (Pakistan) ಬಂದಿರುವಂತೆ ಕಾಣಿಸುತ್ತಿದೆ” ಎಂದು ಬಿಜೆಪಿ ನಾಯಕ ಎನ್.ರವಿಕುಮಾರ್ (BJP MLC N Ravikumar) ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದೀಗ ಈ ಹೇಳಿಕೆಯನ್ನು ಕರ್ನಾಟಕ ಐಎಎಸ್ ಅಧಿಕಾರಿಗಳ ಸಂಘ ಖಂಡಿಸಿದೆ. ಮೇ 24 ರಂದು ಬಿಜೆಪಿಯ ”ಕಲಬುರಗಿ ಚಲೋ” (BJP Kalaburagi Chalo) ಪ್ರತಿಭಟನೆ ವೇಳೆ ಆಯೋಜಿಸಲಾದ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರವಿಕುಮಾರ್, ಜಿಲ್ಲಾಡಳಿತವು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಪ್ರಭಾವದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದರು.ಈ ವೇಳೆ “ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದಿದ್ದಾರೆಯೆ” ಎಂದು ಹೇಳಿದ್ದರು. ಈ ಸಂಬಂಧ ರವಿಕುಮಾರ್ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ರವಿಕುಮಾರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ತಮ್ಮ ಅಜಾಗರೂಕ ಟೀಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ರವಿಕುಮಾರ್ ಹೇಳಿಕೆ ಖಂಡಿಸಿದ ರಾಜ್ಯ IAS ಸಂಘ
ಬಿಜೆಪಿ MLC ರವಿಕುಮಾರ್ ಮೇ 24ರಂದು ಪ್ರಿಯಾಂಕ್ ಖರ್ಗೆ ವಿರುದ್ಧದ ಪ್ರತಿಭಟನೆ ವೇಳೆ ಕಲಬುರಗಿ ಡಿಸಿ ಫೌಜಿಯಾ ತರನ್ನುಮ್ ಪಾಕಿಸ್ತಾನದಿಂದ ಬಂದಿದ್ದಾರೆಯೇ ಎಂದಿದ್ದರು. ಇದಕ್ಕೆ ಇದೀಗ ಕರ್ನಾಟಕ ಐಎಎಸ್ ಅಧಿಕಾರಿಗಳ ಸಂಘ ಖಂಡಿಸಿದೆ. ಮಾಧ್ಯಮ ಪ್ರಕಟಣೆ ಬಿಡುಗಡೆ ಮೂಲಕ ರವಿಕುಮಾರ್ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಕಲಬುರಗಿ ದಂಡಯಾತ್ರೆ: ಕೇಸರಿ ಪಡೆ ಏಟಿಗೆ ಸಚಿವ ತಿರುಗೇಟು
ರವಿಕುಮಾರ್ ವಿರುದ್ಧ ಅಟ್ರಾಸಿಟಿ ಕೇಸ್
ಮೇ 24ರಂದು ಬಿಜೆಪಿ ಪ್ರತಿಭಟನಾಯಲ್ಲಿ ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ಅವರು ಅಬ್ಬರದ ಭಾಷಣ ಮಾಡಿದ್ದರು. ಈ ಸಂಬಂಧ ಖಾಸಗಿ ವ್ಯಕ್ತಿ ನೀಡಿದ ದೂರಿನ ಅನ್ವಯ ನ್.ರವಿಕುಮಾರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಸರ್ಕಾರಿ ಅಧಿಕಾರಿಗಳ ನಿಂದನೆ, ಎಸ್ಸಿ ಸಮುದಾಯ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಲಬುರಗಿ ಡಿಸಿ ಫೌಜಿಯಾ ತರನ್ನುಮ್ ಪಾಕಿಸ್ತಾನದಿಂದ ಬಂದಿರಬೇಕೆಂದಿದ್ದರು. ಅಲ್ಲದೇ ಎಎಸ್ಪಿ ಮಹೇಶ್ ಮೇಘಣ್ಣವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ್ ಅವರಿಗೆ ನಿಂದನೆ ಮಾಡಿದ್ದಾರೆಂದು ದೂರು ನೀಡಿದ್ದರು. ಈ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ.
ವಿಷಾದ ವ್ಯಕ್ತಪಡಿಸಿದ ರವಿಕುಮಾರ್
ಕರ್ನಾಟಕ ಐಎಎಸ್ ಸಂಘ ಖಂಡನೆ, ಅಟ್ರಾಸಿಟಿ ಕೇಸ್ ದಾಖಲಾದ ಬೆನ್ನಲ್ಲೇ ರವಿ ಕುಮಾರ್ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ರವಿಕುಮಾರ್, ನನ್ನ ಅಜಾಗರೂಕ ಟೀಕೆಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಆ ಹೇಳಿಕೆಯನ್ನು ಕೂಡಲೇ ಹಿಂದಕ್ಕೆ ಪಡೆದಿದ್ದೇನೆ.ಜಿಲ್ಲಾಧಿಕಾರಿ ಅತ್ಯಂತ ಗೌರವಪಾತ್ರರು. ಅದು ನಾನು ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆ ಅಲ್ಲ. ಅದು ಬಾಯಿ ತಪ್ಪಿನಿಂದ ಬಂದ ಹೇಳಿಕೆ. ಅಂದು ನಾನು ಆಡಿದ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:32 pm, Mon, 26 May 25