ಬಂಧನದ ಭೀತಿಯಲ್ಲಿದ್ದ ಬಿಜೆಪಿ MLC ರವಿಕುಮಾರ್ ಗೆ ಕೊಂಚ ರಿಲೀಫ್ ನೀಡಿದ ಕೋರ್ಟ್
ಕಲಬುರಗಿ (Kalaburagi) ಜಿಲ್ಲಾಧಿಕಾರಿ ಹಾಗೂ ಇತರೆ ಸರ್ಕಾರಿ ಅಧಿಕಾರಿಗಳು ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ (N Ravikumar) ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈ ಸಂಬಂಧ ಅವರಿಗೆ ಬಂಧನ ಭೀತಿಯಲ್ಲಿದ್ದರು. ಆದ್ರೆ, ಕೋರ್ಟ್ ಸದ್ಯ ರವಿಕುಮಾರ್ ಕೊಂಚ ರಿಲೀಫ್ ನೀಡಿದೆ. ಅಲ್ಲದೇ ವಿಚಾರಣೆ ಸಹಕರಿಸಲು ರವಿಕುಮಾರ್ ಗೆ ಕೋರ್ಟ್ ಖಡಕ್ ಸೂಚನೆ ನೀಡಿದೆ.

ಬೆಂಗಳೂರು, (ಮೇ 29): ಕಲಬುರಗಿ ಸರ್ಕಾರಿ ಅಧಿಕಾರಿಗಳನ್ನು ನಿಂದಿಸಿದ ಮತ್ತು ಪರಿಶಿಷ್ಟ ಜಾತಿ ಅವಹೇಳನ ಮಾಡಿದ ಆರೋಪದ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಗೆ (N Ravikumar) ಕೋರ್ಟ್ ಕೊಂಚ ರಿಲೀಫ್ ನೀಡಿದೆ. ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಕೋರಿ ರವಿಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ (Karnataka High Court), ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಿದೆ. ಅಲ್ಲದೇ ವಿಚಾರಣೆಗೆ ಸಹಕರಿಸಯವಂತೆ ರವಿಕುಮಾರ್ ಅವರಿಗೂ ಸಹ ಕೋರ್ಟ್ ಸೂಚಿಸಿದೆ.
ಎಂಎಲ್‌ಸಿ ಎನ್.ರವಿಕುಮಾರ್ ತಮ್ಮ ಹೇಳಿಕೆ ವಿಷಾಧಿಸಿದ್ದಾರೆ. ಆದರೆ ಪೊಲೀಸರು ಅವರ ಮನೆ ಮುಂದೆ ಕಾಯುತ್ತಿದ್ದಾರೆ. ಹೀಗಾಗಿ FIRಗೆ ತಡೆ ನೀಡಬೇಕೆಂದು ಅರ್ಜಿದಾರರ ಪರ ವಕೀಲ ವಿನೋದ್ ಕುಮಾರ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಪೀಠ, ಎನ್.ರವಿಕುಮಾರ್ ನೀಡಿರುವ ಹೇಳಿಕೆ ಅನಗತ್ಯವಾಗಿತ್ತು. ಕರ್ನಲ್ ಸೋಫಿಯಾ ಖುರೇಷಿ ಬಗೆಗಿನ ಹೇಳಿಕೆ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್ ಆದೇಶ ತಿಳಿದಿಲ್ಲವೇ ಎಂದು ಕ್ಲಾಸ್ ತೆಗೆದುಕೊಂಡಿದೆ. ಪೊಲೀಸರು ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೇಳಿ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ಹೊರಡಿಸಿ ಮುಂದಿನ ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಅಟ್ರಾಸಿಟಿ ಕೇಸ್ ಬೆನ್ನಲ್ಲೇ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಡಿಸಿದ ಬಿಜೆಪಿ MLC ರವಿಕುಮಾರ್
ವಿಚಾರಣೆಗೆ ರವಿಕುಮಾರ್ ಗೈರು
ಮೇ 24 ರಂದು ಬಿಜೆಪಿಯ ʻಕಲಬುರಗಿ ಚಲೋʼ (Kalaburagi Chalo) ಪ್ರತಿಭಟನಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ರವಿಕುಮಾರ್, ಡಿಸಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಗೆ ದೂರು ನೀಡಲಾಗಿತ್ತು. ಈ ಸಂಬಂಧ ಅಟ್ರಾಸಿಟಿ ಕಾಯ್ದೆಯಡಿ ಎಫ್‌ಐಆರ್ (FIR) ಸಹ ದಾಖಲಿಸಿಕೊಂಡ ಪೊಲೀಸರು ರವಿಕುಮಾರ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ನೋಟಿಸ್ ನಂತೆ ರವಿಕುಮಾರ್ ಇಂದು (ಮೇ 29) ಕಲಬುರಗಿ ಎ ವಿಭಾಗದ ಎಸಿಪಿ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದ್ರೆ, ರವಿಕುಮಾರ್ ವಿಚಾರಣೆ ಗೈರಾಗಿದ್ದಾರೆ.
ಏನಿದು ಪ್ರಕರಣ?
ಮೇ 24 ರಂದು ಬಿಜೆಪಿಯ ”ಕಲಬುರಗಿ ಚಲೋ” (BJP Kalaburagi Chalo) ಪ್ರತಿಭಟನೆ ವೇಳೆ ಆಯೋಜಿಸಲಾದ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರವಿಕುಮಾರ್, ʻʻಜಿಲ್ಲಾಡಳಿತವು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಪ್ರಭಾವದಿಂದ ಕಾರ್ಯನಿರ್ವಹಿಸುತ್ತಿದೆ. ಕಲಬುರಗಿ ಡಿಸಿ ಕಚೇರಿಯೂ ತನ್ನ ಸ್ವಾತಂತ್ರ್ಯ ಕಳೆದುಕೊಂಡಿದೆ. ಡಿಸಿ ಮೇಡಂ ಅವರು (ಕಾಂಗ್ರೆಸ್) ಹೇಳುವುದನ್ನು ಸಹ ಕೇಳುತ್ತಿದ್ದಾರೆ. ಡಿಸಿ ಪಾಕಿಸ್ತಾನದಿಂದ ಬಂದಿದ್ದಾರೋ ಅಥವಾ ಇಲ್ಲಿ ಐಎಎಸ್ ಅಧಿಕಾರಿಯೋ ನನಗೆ ತಿಳಿದಿಲ್ಲʼʼ ಎಂದು ಹೇಳಿದ್ದರು. ಈ ವೇಳೆ ಜನರ ಚಪ್ಪಾಳೆಗೆ ಪ್ರತಿಕ್ರಿಯಿಸಿ, ನಿಮ್ಮ ಚಪ್ಪಾಳೆ ನೋಡಿದರೆ, ʻಡಿಸಿ ಬಹುಶಃ ಪಾಕಿಸ್ತಾನದಿಂದ ಬಂದಿದ್ದಾರೆʼ ಎಂದೂ ಅವಹೇಳನ ಮಾಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ರವಿಕುಮಾರ್ ಅವರ ಹೇಳಿಕೆ ವಿರುದ್ಧ ರಾಜ್ಯ ಸರ್ಕಾರ ಕೂಡ ಕ್ರಮ ಕೈಗೊಳ್ಳಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದರು.
ಈ ಸಂಬಂಧ ಖಾಸಗಿ ವ್ಯಕ್ತಿ ನೀಡಿದ ದೂರಿನ ಅನ್ವಯ ನ್.ರವಿಕುಮಾರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿತ್ತು. ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಸರ್ಕಾರಿ ಅಧಿಕಾರಿಗಳ ನಿಂದನೆ, ಎಸ್ಸಿ ಸಮುದಾಯ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಲಬುರಗಿ ಡಿಸಿ ಫೌಜಿಯಾ ತರನ್ನುಮ್ ಪಾಕಿಸ್ತಾನದಿಂದ ಬಂದಿರಬೇಕೆಂದಿದ್ದರು. ಅಲ್ಲದೇ ಎಎಸ್ಪಿ ಮಹೇಶ್ ಮೇಘಣ್ಣವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ್ ಅವರಿಗೆ ನಿಂದನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ರವಿಕುಮಾರ್ ಹೇಳಿಕೆ ಖಂಡಿಸಿದ ರಾಜ್ಯ IAS ಸಂಘ
ಬಿಜೆಪಿ MLC ರವಿಕುಮಾರ್ ಮೇ 24ರಂದು ಪ್ರಿಯಾಂಕ್ ಖರ್ಗೆ ವಿರುದ್ಧದ ಪ್ರತಿಭಟನೆ ವೇಳೆ ಕಲಬುರಗಿ ಡಿಸಿ ಫೌಜಿಯಾ ತರನ್ನುಮ್ ಪಾಕಿಸ್ತಾನದಿಂದ ಬಂದಿದ್ದಾರೆಯೇ ಎಂದಿದ್ದರು. ಇದಕ್ಕೆ ಇದೀಗ ಕರ್ನಾಟಕ ಐಎಎಸ್ ಅಧಿಕಾರಿಗಳ ಸಂಘ ಖಂಡಿಸಿದೆ. ಮಾಧ್ಯಮ ಪ್ರಕಟಣೆ ಬಿಡುಗಡೆ ಮೂಲಕ ರವಿಕುಮಾರ್ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ರವಿಕುಮಾರ್ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Thu, 29 May 25



