ವೇಣುಗೋಪಾಲ್ ಒಂದು ಸಂದೇಶಕ್ಕೆ ಕೇರಳದವರಿಗೆ 180 ಮನೆ ಕಟ್ಟಿ ಕೊಡ್ತೀರಾ, ನಮ್ಮವರಿಗೆ ಯಾರು ಮನೆ ಕೊಡ್ತಾರೆ? ರವಿಕುಮಾರ್ ಪ್ರಶ್ನೆ
ಕೋಗಿಲು ಬಡಾವಣೆಯಲ್ಲಿ ಅಕ್ರಮ ಶೆಡ್ಗಳ ತೆರವು ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಎಂಎಲ್ಸಿ ಎನ್. ರವಿಕುಮಾರ್ ಕಿಡಿಕಾರಿದ್ದಾರೆ. ಕೆಸಿ ವೇಣುಗೋಪಾಲ್ ಅವರ ಒಂದು ಎಕ್ಸ್ ಪೋಸ್ಟ್ಗೆ ಕೇರಳದವರಿಗೆ 180 ಮನೆ ಕಟ್ಟಿಕೊಡಲು ಸರ್ಕಾರ ಮುಂದಾಗಿದೆ. ಆದರೆ, ಉತ್ತರ ಕರ್ನಾಟಕದಂತಹ ಪ್ರದೇಶಗಳಲ್ಲಿ ಮನೆ ಇಲ್ಲದ ಕನ್ನಡಿಗರಿಗೆ ನೆರವಾಗದಿರುವುದು ಏಕೆ ಎಂದು ರವಿಕುಮಾರ್ ಪ್ರಶ್ನಿಸಿದ್ದಾರೆ.

ಬೆಂಗಳೂರು, ಡಿಸೆಂಬರ್ 29: ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ (ಹಿಂದೆ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದರು) ಲೋಕಸಭಾ ಕ್ಷೇತ್ರ ವಯನಾಡ್ನಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಕರ್ನಾಟಕ ಸರ್ಕಾರ ಪರಿಹಾರ ಘೋಷಿಸಿದ್ದ ವಿಚಾರ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಶೆಡ್ಗಳ ತೆರವು ವಿಚಾರ ಕೂಡ ಅದೇ ರೀತಿಯ ರಾಜಕೀಯ ಆಯಾಮ ಪಡೆದುಕೊಂಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರ ಒಂದು ಎಕ್ಸ್ ಸಂದೇಶಕ್ಕೆ ಕೇರಳದವರಿಗೆ 180 ರಿಂದ 200 ಮನೆಗಳನ್ನು ಕಟ್ಟಿಕೊಡಲು ಕಾಂಗ್ರೆಸ್ ಸರ್ಕಾರ ಸಿದ್ಧವಾಗಿದೆಯೇ? ಹಾಗಾದರೆ, ಉತ್ತರ ಕರ್ನಾಟಕ ಸೇರಿದಂತೆ ನಮ್ಮದ ರಾಜ್ಯದ ನಿರಾಶ್ರಿತರಿಗೆ ಯಾರು ಮನೆ ಕಟ್ಟಿಕೊಡುತ್ತಾರೆ ಎಂದು ಬಿಜೆಪಿ (BJP) ಎಂಎಲ್ಸಿ ರವಿಕುಮಾರ್ (Ravikumar) ಪ್ರಶ್ನಿಸಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರವಿಕುಮಾರ್, ರಾಜ್ಯ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೆಸಿ ವೇಣುಗೋಪಾಲ್ ಅವರ ಒಂದು ಟ್ವೀಟ್‌ಗೆ ಅಕ್ರಮ ಮನೆಗಳನ್ನು ಸಕ್ರಮಗೊಳಿಸುವ ಸರ್ಕಾರದ ಉದ್ದೇಶವನ್ನು ರವಿಕುಮಾರ್ ಪ್ರಶ್ನಿಸಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇಂದಿಗೂ ಮನೆ ಇಲ್ಲದ ಸಾವಿರಾರು ಕನ್ನಡಿಗರಿಗೆ ನೆರವಾಗದಿರುವುದು ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.
ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಜೆಸಿಬಿ ಬಳಸಿ ತೆರವು ಮಾಡಲಾಗಿತ್ತು. ಈ ಕುರಿತು ಆರಂಭದಲ್ಲಿ, ತೆರವುಗೊಳಿಸಿದ ಕಟ್ಟಡಗಳು ಕೇರಳದವರು ಅಕ್ರಮವಾಗಿ ನಿರ್ಮಿಸಿದವು ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು. ಆದರೆ, ಕೇರಳ ಸಿಎಂ ಎಕ್ಸ್ ಸಂದೇಶದೊಂದಿಗೆ ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿತು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕರ್ನಾಟಕ ಸರ್ಕಾರವನ್ನು ಪ್ರಜಾಪ್ರಭುತ್ವ ವಿರೋಧಿ ಮತ್ತು ಜೆಸಿಬಿ ಸರ್ಕಾರ ಎಂದು ತೀವ್ರವಾಗಿ ಟೀಕಿಸಿದ್ದರು. ಇದಕ್ಕೆ ಕರ್ನಾಟಕದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿ, ಕೇರಳ ಮುಖ್ಯಮಂತ್ರಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಖಂಡಿಸಿದ್ದರು. ಆದರೆ, ಈ ಘಟನೆಗಳ ನಂತರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಎಕ್ಸ್ ಸಂದೇಶ ಪ್ರಕಟಿಸಿದ ತಕ್ಷಣವೇ ರಾಜ್ಯ ಸರ್ಕಾರ, ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಭರವಸೆ ನೀಡಿದೆ.
ಇದನ್ನೂ ಓದಿ: ಯೋಗಿ ಬುಲ್ಡೋಜರ್ ರಾಜ್ ಜತೆ ಹೋಲಿಕೆ ಬೇಡ: ಕೋಗಿಲು ಶೆಡ್ಗಳ ತೆರವು ವಿಚಾರದಲ್ಲಿ ಕಾಂಗ್ರೆಸ್ ಬೆಂಬಲಕ್ಕೆ ನಿಂತ ಮುಸ್ಲಿಂ ಲೀಗ್
ಈ ಬಗ್ಗೆ ವಾಗ್ದಾಳಿ ನಡೆಸಿದ ರವಿ ಕುಮಾರ್, ‘ನಮ್ಮ ಎಐಸಿಸಿ ಜನರಲ್ ಸೆಕ್ರೆಟರಿ ಒಂದು ಎಕ್ಸ್ ಪೋಸ್ಟ್ ಮಾಡಿದ್ದಕ್ಕೆ ಕೇರಳದವರಿಗೆ ಮನೆ ಕಟ್ಟಿಕೊಡುತ್ತೇವೆ ಎಂದು ಹೇಳುತ್ತಿದ್ದೀರಾ? ಕನ್ನಡಿಗರು ಕಣ್ಣೀರು ಸುರಿಸುತ್ತಿದ್ದಾರೆ. ಹಗಲು ರಾತ್ರಿ ಹೋರಾಟ ಮಾಡುತ್ತಿದ್ದಾರೆ. ಅವರ ನೋವು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ? ವೇಣುಗೋಪಾಲ್ ಸಂದೇಶಕ್ಕೆ ಅವರಿಗೆ 180, 200 ಮನೆ ಕಟ್ಟಿಕೊಡುತ್ತೀರೆಂದರೆ, ಉತ್ತರ ಕರ್ನಾಟಕದಲ್ಲಿ ಮನೆ ಇಲ್ಲದವರು ಎಷ್ಟು ಜನ ಇದ್ದಾರೆ? ಇಡೀ ಕರ್ನಾಟಕ ರಾಜ್ಯದಲ್ಲಿ ಮನೆ ಇಲ್ಲದವರು ಎಷ್ಟು ಜನ ಇದ್ದಾರೆ, ಅವರಿಗೆ ಕಟ್ಟಿಕೊಟ್ಟಿದ್ದೀರಾ? ಇದಾ ನಿಮ್ಮ ಧೋರಣೆ?’ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.




