ಹೊಸ ವರ್ಷಾಚರಣೆಗೆ ಬೆಂಗಳೂರಿನ ಈ ಫ್ಲೈಓವರ್ಗಳು, ಮಟ್ರೋ ಸ್ಟೇಷನ್ ಕ್ಲೋಸ್: ಯಾವ್ಯಾವ ಚಟುವಟಿಕೆ ಬ್ಯಾನ್? ಇಲ್ಲಿದೆ ಮಾಹಿತಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಭಾರಿ ಭದ್ರತೆ ಒದಗಿಸಲಾಗಿದೆ. ಡಿಸೆಂಬರ್ 31 ರಂದು ರಾತ್ರಿ 10 ಗಂಟೆಯ ನಂತರ 50 ಫ್ಲೈಓವರ್‌ಗಳನ್ನು ಬಂದ್ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಡ್ರಂಕ್ ಅಂಡ್ ಡ್ರೈವ್ ತಪಾಸಣೆ, ಅಕ್ರಮ ಚಟುವಟಿಕೆಗಳ ನಿಗಾವಹಿಸಲು 20,000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತದೆ.

ಬೆಂಗಳೂರು, ಡಿಸೆಂಬರ್ 29: ಹೊಸ ವರ್ಷದ (New Year) ಸಂಭ್ರಮಾಚರಣೆಗೆ ಬೆಂಗಳೂರಿನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಬೆಂಗಳೂರು (Bangalore) ನಗರಾದ್ಯಂತ ಪೊಲೀಸ್ ಹೈಅಲರ್ಟ್ ಘೋಷಿಸಲಾಗಿದೆ. ಡಿಸೆಂಬರ್ 31ರಂದು ರಾತ್ರಿ 10 ಗಂಟೆಯ ನಂತರ ನಗರದ ಪ್ರಮುಖ 50 ಫ್ಲೈಓವರ್‌ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಎಲ್ಲೆಡೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ
ಹೊಸ ವರ್ಷದ ಸಂಭ್ರಮದ ವೇಳೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಗರದಲ್ಲಿ 166 ಕಡೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಲಾಗುತ್ತದೆ. ವ್ಹೀಲಿಂಗ್ ಹಾಗೂ ಅಪಾಯಕಾರಿ ಸ್ಟಂಟ್ ಮಾಡುವವರ ಮೇಲೆ ಕಠಿಣ ನಿಗಾ ವಹಿಸಲಾಗಿದ್ದು, ಇಂತಹ ಕೃತ್ಯಗಳು ನಡೆಯುವ 92 ಸ್ಥಳಗಳನ್ನು ಗುರುತಿಸಿ ಅಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದು ಅವರು ಹೇಳಿದರು.
ಎಂಜಿ ರಸ್ತೆ ಮೆಟ್ರೋ ನಿಲ್ದಾಣ ಬಂದ್
ಡಿಸೆಂಬರ್ 31ರಂದು ರಾತ್ರಿ 10 ಗಂಟೆಯ ನಂತರ ಎಂಜಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗುತ್ತದೆ. ನಿಗದಿತ ಸಮಯಕ್ಕೆ ಮೆಟ್ರೋ ಸೇವೆಗಳನ್ನು ನಿಯಂತ್ರಿಸುವಂತೆ ಸೂಚನೆ ನೀಡಲಾಗಿದೆ. ಮದ್ಯಪಾನ ಮಾಡಿ ಸಾರ್ವಜನಿಕವಾಗಿ ಕಿರಿಕಿರಿ ಮಾಡುವುದು, ಗಲಾಟೆ ಅಥವಾ ಅಶಾಂತಿ ಸೃಷ್ಟಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ನಗರದ ಪಬ್, ರೆಸ್ಟೋರೆಂಟ್, ಕ್ಲಬ್ ಹಾಗೂ ರೆಸಾರ್ಟ್‌ಗಳಿಗೆ ಸಮಯ ಮಿತಿ ಕಡ್ಡಾಯಗೊಳಿಸಲಾಗಿದ್ದು, ಡಿಜೆ ಹಾಗೂ ಲೌಡ್‌ಸ್ಪೀಕರ್ ಬಳಕೆಗೆ ಅನುಮತಿ ಮತ್ತು ಸಮಯ ಮಿತಿ ವಿಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ವರ್ತನೆ, ಶಬ್ದ ಮಾಲಿನ್ಯ, ಅಕ್ರಮ ಪಾರ್ಟಿಗಳು ಹಾಗೂ ಅಪಾಯಕಾರಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಬೆಂಗಳೂರಿನಾದ್ಯಂತ 20 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ
ಹೊಸ ವರ್ಷಾಚರಣೆ ವೇಳೆ ಭದ್ರತೆಗಾಗಿ ನಗರಾದ್ಯಂತ ಸುಮಾರು 20 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ, ಡ್ರೋನ್ ಹಾಗೂ ತಾಂತ್ರಿಕ ಸಾಧನಗಳ ಮೂಲಕ ನಿಗಾವಹಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಪ್ರವಾಸಿ ಪ್ರಿಯರಿಗೆ ಶಾಕ್: ಹೊಸ ವರ್ಷದ ಹಿನ್ನೆಲೆ ಈ ಸ್ಥಳಗಳಿಗೆ ಇರಲಿದೆ ನಿರ್ಬಂಧ
ಭದ್ರತೆಗಾಗಿ ಬೆಂಗಳೂರು ನಗರದ ಹಲವೆಡೆ ವಾಚ್ ಟವರ್‌ಗಳ ನಿಯೋಜನೆ ಮಾಡಲಾಗಿದೆ. ಸುರಕ್ಷಿತ ವಲಯಗಳ ಗುರುತಿಸುವಿಕೆ ಹಾಗೂ ಹೀಟ್ ಮ್ಯಾಪ್ ವ್ಯವಸ್ಥೆ ಮಾಡಲಾಗಿದೆ. ಸಹಾಯ, ದೂರುಗಳಿಗಾಗಿ ಮಹಿಳಾ ಸಹಾಯ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತಿದೆ. ಜನಸಂದಣಿ ನಿಯಂತ್ರಣಕ್ಕೆ ಮೆಟ್ರೋ ರೈಲುಗಳ ಸಮಯಾವಧಿ ವಿಸ್ತರಣೆ, ಸಂಚಾರ ಸುಗಮಗೊಳಿಸಲು ಬಸ್ ಸೇವೆಗಳ ಸಮಯಾವಧಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹೋಟೆಲ್‌ಗಳು, ಲಾಡ್ಜ್‌ಗಳಲ್ಲಿ ನಿಯಮ ಪಾಲನೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಸಮಾಜ ವಿರೋಧಿ ಅಂಶಗಳನ್ನು ತಡೆಗಟ್ಟಲು ಎಐ ಕ್ಯಾಮರಾಗಳ ಬಳಕೆ ಮಾಡಲಾಗುವುದು. ಕ್ಯೂಆರ್‌ಟಿ, ಚೆನ್ನಮ್ಮ ಪಡೆ ಸೇರಿ ವಿಶೇಷ ಪೊಲೀಸ್ ಪಡೆ ನಿಯೋಜನೆ ಮಾಡಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.



