ಸಿಟಿ ರವಿ, ರವಿ ಕುಮಾರ್​ಗೆ ಶಾಕ್: ವಿಪಕ್ಷ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿ ನೇಮಕ

ಕೊನೆಗೂ ಬಿಜೆಪಿ, ವಿಧಾನಪರಿಷತ್ ವಿರೋಧ ಪಕ್ಷ ನಾಯಕನ್ನು ನೇಮಕ ಮಾಡಿದೆ. ಪರಿಷತ್ ವಿಪಕ್ಷ ನಾಯನಾಗಿದ್ದ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರಿನಿಂದ ಸಂಸತ್ತಿಗೆ ಆಯ್ಕೆಯಾದ ನಂತರ ಈ ಸ್ಥಾನ ತೆರವಾಗಿದ್ದು, ಇದೀಗ ಪರಿಷತ್ ವಿಪಕ್ಷ ನಾಯಕನನ್ನಾಗಿ ಛಲವಾದಿ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಇದರಿಂದ ಸಿಟಿ ರವಿ, ಎನ್​ ರವಿ ಕುಮಾರ್​ಗೆ ಹಿನ್ನಡೆಯಾಗಿದೆ.

ಸಿಟಿ ರವಿ, ರವಿ ಕುಮಾರ್​ಗೆ ಶಾಕ್: ವಿಪಕ್ಷ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿ ನೇಮಕ
ಛಲವಾದಿ ನಾರಾಯಣಸ್ವಾಮಿ
Follow us
|

Updated on:Jul 22, 2024 | 10:18 PM

ಬೆಂಗಳೂರು, (ಜುಲೈ 22): ಕರ್ನಾಟಕ ವಿಧಾನಪರಿಷತ್ ವಿಪಕ್ಷ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿ ನೇಮಕಗೊಂಡಿದ್ದಾರೆ. ವಿಧಾನ ಪರಿಷತ್ ವಿಪಕ್ಷ ನಾಯನಾಗಿದ್ದ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರಿನಿಂದ ಸಂಸತ್ತಿಗೆ ಆಯ್ಕೆಯಾದ ನಂತರ ಈ ಸ್ಥಾನ ತೆರವಾಗಿತ್ತು. ಮೇಲ್ಮನೆಯಲ್ಲಿ ಪ್ರಬಲ ನಾಯಕನ ಅಗತ್ಯವನ್ನು ಮನಗಂಡ ಬಿಜೆಪಿ, ಚಿಕ್ಕಮಗಳೂರಿನಿಂದ ಪರಾಭವಗೊಂಡಿದ್ದ ಮಾಜಿ ಶಾಸಕ ಸಿ.ಟಿ.ರವಿ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಿತ್ತು. ಆದರೆ ಇಲ್ಲಿಯವರೆಗೆ, ಪಕ್ಷವು ವಿಪಕ್ಷ ನಾಯಕನ ಸ್ಥಾನವನ್ನು ಅಧಿಕೃತಗೊಳಿಸಿಲ್ಲ. ಇದೀಗ ಮುಂಗಾರು ಅಧಿವೇಶನ ನಡೆಯುತ್ತಿರುವ ಮಧ್ಯ ಬಿಜೆಪಿ ಅಂತಿಮವಾಗಿ ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ವಿಪಕ್ಷ ನಾಯಕನನ್ನಾಗಿ ನೇಮಕ ಮಾಡಿದೆ. ಇನ್ನು ವಿಪಕ್ಷ ನಾಯಕನ ಹುದ್ದೆ ರೇಸ್​ನಲ್ಲಿದ್ದ ಸಿಟಿ ರವಿ ಮತ್ತು ರವಿ ಕುಮಾರ್ ಅವರಿಗೆ ನಿರಾಸೆಯಾಗಿದೆ.

ಕೋಟಾ ಶ್ರೀನಿವಾಸ್ ಪೂಜಾರಿ ರಾಜೀನಾಮೆಯಿಂದ ತೆರವಾದ ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ನಡೆದಿತ್ತು. ಸಿಟಿ ರವಿ, ಎನ್​ ರವಿ ಕುಮಾರ್ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರ ನಡುವೆ ಭಾರೀ ಪೈಪೋಟಿ ನಡೆದಿತ್ತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್​ಗೆ ಸಿಟಿ ರವಿ ಅಥವಾ ರವಿ ಕುಮಾರ್​ ಅವರನ್ನ ವಿಪಕ್ಷ ನಾಯಕನ್ನಾಗಿ ಮಾಡಬೇಕೆನ್ನುವುದು ಇತ್ತು. ಆದ್ರೆ ಇತ್ತ ಬಿಎಸ್ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಛಲವಾದಿ ನಾರಾಯಣಸ್ವಾಮಿ ಅವರನ್ನೇ ಮಾಡಬೇಕೆಂದು ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ಅಪ್ಪ-ಮಗನ ಬೇಡಿಕೆ ಹೈಕಮಾಂಡ್​ ಗ್ರೀನ್​ ಸಿಗ್ನಲ್ ನೀಡಿದೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಎನ್. ರವಿ ಕುಮಾರ್ ಅವರನ್ನು ಮರುಆಯ್ಕೆ ಮಾಡಿತ್ತು. ಇದರ ಜೊತೆಗೆ, ಅಸೆಂಬ್ಲಿ ಚುನಾವಣೆಯಲ್ಲಿ ಸೋಲುಂಡಿದ್ದ ಸಿ.ಟಿ.ರವಿ ಅವರನ್ನು ಮೇಲ್ಮನೆಗೆ ಕಳುಹಿಸಿತ್ತು.  ಹಿಂದುತ್ವ ಫೈರ್ ಬ್ಯಾಂಡ್ ಎಂದೇ ಗುರುತಿಸಲ್ಪಟ್ಟಿರುವ ಸಿಟಿ ರವಿ ಹಾಗೂ ಎನ್‌ ರವಿಕುಮಾರ್ ನಡುವೆ ಈ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು.  ಛಲವಾದಿ ನಾರಾಯಣ ಸ್ವಾಮಿ ಹೆಸರು ಅಷ್ಟಾಗಿ ಕೇಳಿಬಂದಿರಲಿಲ್ಲ.

ಸಿಟಿ ರವಿ ತಮ್ಮ ಆಕ್ರಮಣಕಾರಿ ಮಾತುಗಾರಿಕೆಯ ಮೂಲಕ ಗುರುತಿಸಿಕೊಂಡವರು. ವಿಧಾನಸಭೆಯಲ್ಲೂ ಇದ್ದಾಗಲೂ ಸಿಕ್ಕ ಅವಕಾಶವನ್ನು ಬಳಸಿಕೊಂಡು ಎದುರಾಳಿಯ ವಿರುದ್ಧ ದಾಳಿ ಮಾಡುವಲ್ಲಿ ನಿಸ್ಸೀಮರು. ಅದೇ ರೀತಿಯಲ್ಲಿ ಎನ್‌ ರವಿಕುಮಾರ್‌ ಕೂಡಾ ಚತುರ ಮಾತುಗಾರರು. ಆಡಳಿತ ಪಕ್ಷ ಕಾಂಗ್ರೆಸ್‌ಗೂ ವಿರೋಧ ಪಕ್ಷವನ್ನು ಎದುರಿಸುವುದು ಸವಾಲಾಗಿದೆ. ಈ ನಿಟ್ಟಿನಲ್ಲಿ ಇವರಿಬ್ಬರಲ್ಲಿ ಒಬ್ಬರನ್ನು ವಿಪಕ್ಷ ನಾಯಕನನ್ನು ಮಾಡಿದರೆ ಆಡಳಿತ ಪಕ್ಷವನ್ನು ಇನ್ನಷ್ಟು ಕಟ್ಟಿಹಾಕಬಹುದು ಎನ್ನುವ ಲೆಕ್ಕಾಚಾರ ಕೆಲ ನಾಯಕರಲ್ಲಿ ಇತ್ತು. ಈ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲೂ ಚರ್ಚೆಗಳು ನಡೆದಿದ್ದವು. ಹೀಗಾಗಿ ವಿಧಾನ ಪರಿಷತ್ತಿನಲ್ಲಿ ವಿಪಕ್ಷದ ನಾಯಕರಾಗಿ ಒಂದೋ ಎನ್. ರವಿ ಕುಮಾರ್ ಇಲ್ಲವೇ, ಸಿ.ಟಿ.ರವಿ ಆಯ್ಕೆಯಾಗಬಹುದು ಎಂದೇ ಲೆಕ್ಕಾಚಾರವಾಗಿತ್ತು.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಶೋಕ್  ಅವರು ವಿಧಾನಸಭೆ ವಿಪಕ್ಷ ನಾಯಕರಾಗಿದ್ದಾರೆ. ಈಗ ಮತ್ತೆ ಪರಿಷತ್​ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಅದೇ ಒಕ್ಕಲಿಗೆ ಸಮುದಾಯಕ್ಕೆ ಸೇರಿದ ಸಿಟಿ ರವಿ ಅವರಿಗೆ ನಿಡಿದರೆ ಹೇಗೆ ಎನ್ನುವ ಪ್ರಶ್ನೆಗಳು ಶುರುವಾಗಿದ್ದವು. ಹೀಗಾಗಿ ಕೊನೆ ಕ್ಷಣದಲ್ಲಿ  ರೇಸ್​ನಲ್ಲಿ ಛಲವಾದಿ ನಾರಾಯಣಸ್ವಾಮಿ ಹೆಸರು ಸಹ ಮುನ್ನೆಲೆಗೆ ಬಂತು. ಆಗ ಕೋಲಿ ಸಮುದಾಯದ ರವಿ ಕುಮಾರ್ ಹಾಗೂ ಛಲವಾದಿ ನಾರಾಯಣಸ್ವಾಮಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಆದ್ರೆ, ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಮಾತ್ರ ಛಲವಾದಿ ನಾರಾಯಣಸ್ವಾಮಿ ಅವರನ್ನೇ ವಿಪಕ್ಷ ನಾಯಕನ್ನಾಗಿ ನೇಮಿಕ ಮಾಡಬೇಕೆಂದು ಹೈಕಮಾಂಡ್​ ಬಳಿ ಲಾಬಿ ಮಾಡಿದ್ದರು ಎನ್ನಲಾಗಿದೆ. ಅದರಂತೆ ಇದೀಗ ಹೈಕಮಾಂಡ್​ ಅಪ್ಪ ಮಗನ ಮಾತಿಗೆ ತಲೆದೂಗಿ ಅಂತಿಮವಾಗಿ ಛಲವಾದಿ ನಾರಾಯಣಸ್ವಾಮಿ ಅವರನ್ನೇ ಪರಿಷತ್​ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:50 pm, Mon, 22 July 24