ಬೆಂಗಳೂರು: ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಹಂಗಾಮಿ ಸಿಎಂ ಆಗಿ ಮುಂದುವರೆದಿರುವ ಬಿ.ಎಸ್.ಯಡಿಯೂರಪ್ಪ (BS Yediyurappa) ಇಂದು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲೇ ಉಳಿದುಕೊಂಡಿದ್ದಾರೆ. ಯಾವುದೇ ಸಭೆ, ಸಮಾರಂಭ, ಆಡಳಿತ ಸಂಬಂಧ ಕಾರ್ಯಕ್ರಮಗಳನ್ನು ನಿಗದಿಪಡಿಸಿಕೊಳ್ಳದ ಯಡಿಯೂರಪ್ಪ ರಾಜೀನಾಮೆ (Resign) ಬೆನ್ನಲ್ಲೇ ಮೌನವಾಗಿ ನಿವಾಸದಲ್ಲೇ ಉಳಿದಿದ್ದಾರೆ. ಏತನ್ಮಧ್ಯೆ, ಸಿಎಂ ಅಧಿಕೃತ ನಿವಾಸ ಕಾವೇರಿಗೆ ಗುಪ್ತಚರ ಇಲಾಖೆಯ ಮುಖ್ಯಸ್ಥ ದಯಾನಂದ್ ಭೇಟಿ ನೀಡಿ ಕೆಲಕಾಲ ಇದ್ದು ವಾಪಾಸ್ಸಾಗಿದ್ದಾರೆ.
ಹಂಗಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಗೆ ಒಬ್ಬೊಬ್ಬರೇ ನಾಯಕರು ಆಗಮಿಸುತ್ತಿದ್ದು, ಎಂ.ಪಿ.ರೇಣುಕಾಚಾರ್ಯ, ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಅನೇಕರು ಬರುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಮುರುಗೇಶ್ ನಿರಾಣಿ ಕೂಡಾ ಯಡಿಯೂರಪ್ಪ ಭೇಟಿಗೆ ಕಾಲಾವಕಾಶ ಕೇಳಿದ್ದು ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ್ದಾರೆ.
ಇನ್ನು ಸಂಪುಟ ರಚನೆಯ ಬಗ್ಗೆ ಮಾತನಾಡಿರುವ ಯಡಿಯೂರಪ್ಪ ಆಪ್ತ ರೇಣುಕಾಚಾರ್ಯ, ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹೈಕಮಾಂಡ್ ಏನು ನಿರ್ಧರಿಸುತ್ತೆ ನೋಡಬೇಕು ಎಂದು ಹೇಳಿದ್ದಾರೆ. ಬಿಎಸ್‌ವೈ ಹೈಕಮಾಂಡ್ ಸೂಚನೆಯನ್ನು ಪಾಲಿಸಿದ್ದಾರೆ. ಹೀಗಾಗಿ ನಾವೂ ಹೈಕಮಾಂಡ್ ಸೂಚನೆ ಪಾಲಿಸಬೇಕು. ಹೈಕಮಾಂಡ್ ಏನು ನಿರ್ಧರಿಸುತ್ತೋ ನೋಡಬೇಕಾಗಿದೆ. ಮುಂದಿನ ಸಿಎಂಗೆ ಸಂಪೂರ್ಣ ಬೆಂಬಲ ನೀಡಲು ಸೂಚನೆ ಸಿಕ್ಕಿದೆ. ಯಡಿಯೂರಪ್ಪ ಹೇಳಿದಂತೆ ನಾವು ಬೆಂಬಲ ನೀಡುತ್ತೇವೆ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಸದೃಢವಾಗಿದೆ. ಮುಂದೆಯೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಮುಂದಿನ ಚುನಾವಣೆಗಳಿಗೆ ನಾವು ಒಟ್ಟಾಗಿ ಹೋಗುತ್ತೇವೆ. ಕಾಂಗ್ರೆಸ್ ನಾಯಕರು ಹಗಲುಗನಸು ಕಾಣುತ್ತಿದ್ದಾರಷ್ಟೇ. ನನಗೆ ಎಲ್ಲಾ ಸಮುದಾಯದವರು ಬೆಂಬಲ ನೀಡಿದ್ದಾರೆ. ಹೀಗಾಗಿ ನಾನು ಜಾತಿಯ ಬಗ್ಗೆ ಮಾತನಾಡುವುದಿಲ್ಲ. ನಾನು ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡಿಲ್ಲ. ನಮ್ಮ ನಾಯಕರು ಅವಕಾಶ ಕೊಟ್ಟರೆ ನಿಭಾಯಿಸುತ್ತೇನೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
ಇದನ್ನೂ ಓದಿ:
ಬಿ ಎಸ್ ಯಡಿಯೂರಪ್ಪ ಬಾಯಿಂದಲೇ ಮುಂದಿನ ಸಿಎಂ ಹೆಸರು ಘೋಷಿಸಲು ಯೋಚಿಸುತ್ತಿದೆ ಬಿಜೆಪಿ ಹೈಕಮಾಂಡ್
(BS Yediyurappa to attend no program today)
Published On - 9:45 am, Tue, 27 July 21