ಶಿವಮೊಗ್ಗ ಜಿಲ್ಲೆಯಿಂದ ಬಂದ 4 ಮುಖ್ಯಮಂತ್ರಿಗಳೂ ದುರಂತ ನಾಯಕರು; ಯಾರಿಗೂ ಪೂರ್ಣಾವಧಿ ಭಾಗ್ಯವಿಲ್ಲ
Karnataka Chief Minister: ಶಿವಮೊಗ್ಗ ಜಿಲ್ಲೆಯಿಂದ ಮುಖ್ಯಮಂತ್ರಿ ಗಾದಿಗೆರಿದ ನಾಲ್ವರು ನಾಯಕರು ಕೂಡಾ ಅಧಿಕಾರಾವಧಿ ಪೂರ್ಣಗೊಳ್ಳುವ ಮೊದಲೇ ನಿರ್ಗಮಿಸಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ.
ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ (Resign) ನೀಡುವುದರೊಂದಿಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಕರ್ನಾಟಕ ರಾಜಕಾರಣದಲ್ಲಿ (Karnataka Politics) ಓರ್ವ ಪ್ರಮುಖ ನಾಯಕನಾಗಿ ಗುರುತಿಸಿಕೊಂಡರೂ, ನಾಲ್ಕು ಬಾರಿ ಮುಖ್ಯಮಂತ್ರಿ ಪದವಿಗೇರಿದರೂ ಪೂರ್ಣಾವಧಿಯ ನಾಯಕತ್ವ ಭಾಗ್ಯ ಬಿಎಸ್ವೈ (BSY) ಅವರಿಗೆ ಒದಗಿ ಬರಲಿಲ್ಲ. ಹೀಗಾಗಿಯೇ ಅವರನ್ನು ದುರಂತ ನಾಯಕ ಎಂದು ಕರೆಯಲಾಗುತ್ತಿದೆ. ಆದರೆ, ಈ ದುರಂತ ನಾಯಕ ಎಂಬ ಹಣೆಪಟ್ಟಿಗೂ ಯಡಿಯೂರಪ್ಪ ಅವರ ಮಾತೃ ಜಿಲ್ಲೆ ಶಿವಮೊಗ್ಗಕ್ಕೂ ಬಹಳ ನಂಟು ಇರುವಂತೆ ಕಾಣುತ್ತಿದ್ದು, ಶಿವಮೊಗ್ಗ ಜಿಲ್ಲೆಯಿಂದ ಮುಖ್ಯಮಂತ್ರಿ (Chief Minister) ಗಾದಿಗೆರಿದ ನಾಲ್ವರು ನಾಯಕರು ಕೂಡಾ ಅಧಿಕಾರಾವಧಿ ಪೂರ್ಣಗೊಳ್ಳುವ ಮೊದಲೇ ನಿರ್ಗಮಿಸಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ.
ಯಡಿಯೂರಪ್ಪ ಅವರಿಗೂ ಮೊದಲು ಶಿವಮೊಗ್ಗ ಜಿಲ್ಲೆಯಿಂದ ಬಂದು ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದ್ದ ಕಡಿದಾಳ್ ಮಂಜಪ್ಪ, ಜೆ.ಹೆಚ್.ಪಟೇಟ್ ಹಾಗೂ ಎಸ್.ಬಂಗಾರಪ್ಪ ಐದು ವರ್ಷದ ಅಧಿಕಾರಾವಧಿಯನ್ನು ಪೂರ್ಣಗೊಳಿಸಿರಲಿಲ್ಲ. ಅವರ ಸಾಲಿಗೆ ಯಡಿಯೂರಪ್ಪ ಕೂಡಾ ಸೇರಿದ್ದು ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಅವಧಿಗೂ ಮುನ್ನವೇ ಪದತ್ಯಾಗ ಮಾಡುವ ಸನ್ನಿವೇಶ ಎದುರಾಗಿದೆ.
ಹಾಗೆ ನೋಡಲು ಹೋದರೆ ನಾಲ್ವರ ಪೈಕಿ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಗುರುತಿಸಿಕೊಂಡು ಚುನಾವಣೆ ಎದುರಿಸಿ ಗೆದ್ದು ಅಧಿಕಾರ ಹಿಡಿಯುವ ಅವಕಾಶ ಸಿಕ್ಕಿದ್ದು ಯಡಿಯೂರಪ್ಪ ಅವರಿಗೆ ಮಾತ್ರ. ಕಡಿದಾಳ್ ಮಂಜಪ್ಪ, ಜೆ.ಹೆಚ್.ಪಟೇಟ್ ಹಾಗೂ ಎಸ್.ಬಂಗಾರಪ್ಪ ಈ ಮೂವರು ಮುಖ್ಯಮಂತ್ರಿ ಪದವಿಗೇರಿದರೂ ಆ ಅವಕಾಶ ಲಭಿಸಿದ್ದು ರಾಜಕೀಯದ ಚದುರಂಗದಾಟದಿಂದ ಮತ್ತು ಅವೆರಲ್ಲರೂ ಪದತ್ಯಾಗ ಮಾಡಿದ್ದು ಕೂಡಾ ರಾಜಕೀಯ ಬದಲಾವಣೆಗಳಿಂದಲೇ.
ಶಿವಮೊಗ್ಗ ಜಿಲ್ಲೆಯಿಂದ ಮುಖ್ಯಮಂತ್ರಿಯಾದ ಮೊದಲಿಗ ಎಂದೆನಿಸಿಕೊಂಡ ಕಡಿದಾಳ್ ಮಂಜಪ್ಪ 1956ನೇ ಇಸವಿಯ ಆಗಸ್ಟ್ 19ರಂದು ಅಧಿಕಾರದ ಚುಕ್ಕಾಣಿ ಹಿಡಿದರಾದರೂ ಅವರು ಮುಖ್ಯಮಂತ್ರಿಯಾಗಿ ಉಳಿದಿದ್ದು ಬರೀ 73 ದಿನಗಳ ಕಾಲ. ಆ ನಂತರ ಬೀಸಿದ ಬದಲಾವಣೆಯ ಗಾಳಿ ಅವರನ್ನು ಪದತ್ಯಾಗಗೊಳಿಸಿತು. 1990ನೇ ಇಸವಿಯಲ್ಲಿ ಅಧಿಕಾರಕ್ಕೇರಿದ ಎಸ್.ಬಂಗಾರಪ್ಪ 2 ವರ್ಷ 35ದಿನಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ನಂತರ 1996ರಲ್ಲಿ ಕರ್ನಾಟಕ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ್ದ ಜೆ.ಹೆಚ್.ಪಟೇಲ್ 3 ವರ್ಷ 129ದಿನಗಳ ಕಾಲ ಆಡಳಿತ ನಡೆಸಿ ನಿರ್ಗಮಿಸಿದ್ದರು.
ಇದೀಗ ನಾಲ್ಕನೇ ಬಾರಿ ಅಧಿಕಾರಕ್ಕೇರಿ ರಾಜೀನಾಮೆ ನೀಡಿರುವ ಬಿ.ಎಸ್.ಯಡಿಯೂರಪ್ಪ, 2007ನೇ ಇಸವಿಯಲ್ಲಿ 7 ದಿನ, 2008ರಲ್ಲಿ ಅಧಿಕಾರಕ್ಕೇರಿದಾಗ 3 ವರ್ಷ, ನಂತರ 2018ರಲ್ಲಿ ಕೇವಲ 2 ದಿನ ಹಾಗೂ ಮತ್ತೆ 2019ರಲ್ಲಿ ಅಧಿಕಾರ ಸ್ವೀಕರಿಸಿ 2 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಆದರೆ, ಈ ನಾಲ್ಕು ಸಂದರ್ಭದಲ್ಲೂ ಅವರು ಶಿವಮೊಗ್ಗ ಜಿಲ್ಲೆಯ ಉಳಿದ ದುರಂತ ನಾಯಕರಂತೆಯೇ ಅಲ್ಪಾವಧಿಯ ಅಧಿಕಾರಕ್ಕೆ ಸೀಮಿತರಾಗಿದ್ದು ವಿಪರ್ಯಾಸ.
ಬ್ರಾಹ್ಮಣ ಮುಖ್ಯಮಂತ್ರಿ, ಲಿಂಗಾಯತ, ಒಕ್ಕಲಿಗ, ವಾಲ್ಮೀಕಿ, ದಲಿತ ಸಮುದಾಯದಿಂದ 4 ಉಪಮುಖ್ಯಮಂತ್ರಿ; ಏನಿದು ಲೆಕ್ಕಾಚಾರ?
(All four CMs of Karnataka from Shivamogga districts have failed to complete 5 years as Chief Minister)