ಬ್ರಾಹ್ಮಣ ಮುಖ್ಯಮಂತ್ರಿ, ಲಿಂಗಾಯತ, ಒಕ್ಕಲಿಗ, ವಾಲ್ಮೀಕಿ, ದಲಿತ ಸಮುದಾಯದಿಂದ 4 ಉಪಮುಖ್ಯಮಂತ್ರಿ; ಏನಿದು ಲೆಕ್ಕಾಚಾರ?

ಲಿಂಗಾಯತ ಸಮುದಾಯದ ಮಠಾಧೀಶರ ಒತ್ತಡದ ನಡುವೆಯೂ ಲಿಂಗಾಯತ ಹೊರತುಪಡಿಸಿ ಒಕ್ಕಲಿಗ ಮತ್ತು ಬ್ರಾಹ್ಮಣ ಸಮುದಾಯದ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬ್ರಾಹ್ಮಣ ಮುಖ್ಯಮಂತ್ರಿ, ಲಿಂಗಾಯತ, ಒಕ್ಕಲಿಗ, ವಾಲ್ಮೀಕಿ, ದಲಿತ ಸಮುದಾಯದಿಂದ 4 ಉಪಮುಖ್ಯಮಂತ್ರಿ; ಏನಿದು ಲೆಕ್ಕಾಚಾರ?
ಬಿ.ಎಸ್​.ಯಡಿಯೂರಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯದಲ್ಲಿ (Karnataka Politics) ಮಹತ್ತರ ಬದಲಾವಣೆ ಘಟಿಸುವುದಕ್ಕೆ ಕಾಲ ಸನ್ನಿಹಿತವಾಗಿದ್ದು ಮುಖ್ಯಮಂತ್ರಿ ಹುದ್ದೆಗೆ ಬಿ.ಎಸ್.ಯಡಿಯೂರಪ್ಪ (B.S Yediyurappa) ವಿದಾಯ ಸಲ್ಲಿಸುವುದು ಬಹುತೇಕ ಖಚಿತ ಎನ್ನುವ ಮಾತುಗಳು ರಾಜಕೀಯ ವಲಯದಿಂದಲೇ ಕೇಳಿಬರುತ್ತಿದೆ. ಆದರೆ, ಯಡಿಯೂರಪ್ಪ ರಾಜೀನಾಮೆ (BSY Resignation) ನಂತರ ಮುಖ್ಯಮಂತ್ರಿ ಹುದ್ದೆಗೆ ಯಾರನ್ನು ನೇಮಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಪಾಳಯ ಎರಡು ಸೂತ್ರಗಳನ್ನು ಸಿದ್ಧಪಡಿಸಿಕೊಂಡಿದ್ದು, ಮುಖ್ಯಮಂತ್ರಿ ಬದಲಾವಣೆಯ ಜತೆಯಲ್ಲೇ ನಾಲ್ವರು ಉಪಮುಖ್ಯಮಂತ್ರಿಗಳನ್ನು (DCM) ನೇಮಕ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ. ಲಿಂಗಾಯತ ಸಮುದಾಯದ ಮಠಾಧೀಶರ ಒತ್ತಡದ ನಡುವೆಯೂ ಲಿಂಗಾಯತ ಹೊರತುಪಡಿಸಿ ಒಕ್ಕಲಿಗ ಮತ್ತು ಬ್ರಾಹ್ಮಣ ಸಮುದಾಯದ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದರೆ ಹೊಸ ಸಿಎಂ ಆಯ್ಕೆ ಮಾಡುವ ವಿಚಾರದಲ್ಲಿ ಎರಡು ಸೂತ್ರಗಳನ್ನು ಬಿಜೆಪಿ ಸಿದ್ಧಪಡಿಸಿಕೊಂಡಿದೆ. ಬ್ರಾಹ್ಮಣ ಸಮುದಾಯಕ್ಕೆ ಮಣೆ ಹಾಕಿದರೆ ಪ್ರಲ್ಹಾದ್ ಜೋಷಿ ಅಥವಾ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದ್ದು, ಬ್ರಾಹ್ಮಣ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿದ್ದೇ ಆದಲ್ಲಿ ಉಪಮುಖ್ಯಮಂತ್ರಿ ಹುದ್ದೆಗೆ ಲಿಂಗಾಯತ, ಒಕ್ಕಲಿಗ, ವಾಲ್ಮೀಕಿ, ದಲಿತ ಸಮುದಾಯದ ಸಮೀಕರಣ ಸೂತ್ರ ಅನ್ವಯಿಸುವ ಸಾಧ್ಯತೆ ಇದೆ. ಆ ಪ್ರಕಾರವಾಗಿ ಬ್ರಾಹ್ಮಣ ಸಮುದಾಯದವರು ಮುಖ್ಯಮಂತ್ರಿಯಾದರೆ ಡಿಸಿಎಂ ಸ್ಥಾನಕ್ಕೆ ಅರವಿಂದ ಬೆಲ್ಲದ, ಶ್ರೀರಾಮುಲು,‌ ಸಿ.ಟಿ. ರವಿ, ಅರವಿಂದ ಲಿಂಬಾವಳಿ ‌ನೇಮಕವಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ನಡೆದಿವೆ.

ಒಂದುವೇಳೆ ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕಿ ಮುಖ್ಯಮಂತ್ರಿ ಸ್ಥಾನ ನೀಡುವುದಾದರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೆಸರು ಬಹುಮುಖ್ಯವಾಗಿ ಕೇಳಿಬರುತ್ತಿದೆ. ಒಕ್ಕಲಿಗ ಸಮುದಾಯದವರು ಮುಖ್ಯಮಂತ್ರಿಯಾದಲ್ಲಿ ಡಿಸಿಎಂಗಳಾಗಿ ವಾಲ್ಮೀಕಿ, ದಲಿತ, ಓಬಿಸಿ ಮತ್ತು ಲಿಂಗಾಯತ ಸಮುದಾಯದ ಸಮೀಕರಣ ಆಗುವ ಸಾಧ್ಯತೆ ಇದೆ. ಅದರಂತೆ ಡಿಸಿಎಂ ಸ್ಥಾನಕ್ಕೆ ಶ್ರೀರಾಮುಲು, ಅರವಿಂದ ಲಿಂಬಾವಳಿ, ಕೆ.ಎಸ್‌. ಈಶ್ವರಪ್ಪ ಅಥವಾ ಸುನಿಲ್ ಕುಮಾರ್ ಹಾಗೂ ಅರವಿಂದ ಬೆಲ್ಲದ್ ಅಥವಾ ಮುರುಗೇಶ್ ನಿರಾಣಿ ಹೆಸರು ಪರಿಗಣಿಸುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಸದ್ಯದ ಚರ್ಚೆ ಪ್ರಕಾರ ಹಾಲಿ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆಯಿಂದ ಮುಕ್ತಗೊಳಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವ ಸಾಧ್ಯತೆ ಬಗ್ಗೆ ಕೂಡಾ ಚರ್ಚೆಯಾಗಿದೆ ಎಂಬ ಮಾತು ಕೇಳಿಬಂದಿದೆ. ಪ್ರಸ್ತುತ ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿರುವ ಬಿ.ಎಸ್​.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಇದೇ ಕೊನೆ ಪ್ರವಾಸ ಆಗುತ್ತಾ ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ. 2019ರಲ್ಲಿ ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಂಡು ಕೇಳರಿಯದ ಪ್ರವಾಹ ಸೃಷ್ಟಿಯಾಗಿತ್ತು. ಆಗ, ಮಂತ್ರಿ ಮಂಡಲ ಕೂಡ ರಚನೆಯಾಗದ ಸಂದರ್ಭದಲ್ಲಿ ಏಕಾಂಗಿಯಾಗಿಯೇ ಹೊರಟಿದ್ದ ಯಡಿಯೂರಪ್ಪ ಬೆಳಗಾವಿಯಿಂದಲೇ ತಮ್ಮ ಜಿಲ್ಲಾ ಪ್ರವಾಸ ಆರಂಭಿಸಿದ್ದರು. ಇದೀಗ ಅದೇ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಪ್ರಯಾಣ ಅಂತ್ಯವಾಗುವುದಾ ಎಂಬ ಲೆಕ್ಕಾಚಾರಗಳೂ ಗರಿಗೆದರಿವೆ.

ಬೆಳಗಾವಿಯಿಂದ ಆರಂಭವಾದ ಪಯಣ ಬೆಳಗಾವಿಯಲ್ಲೇ ಅಂತ್ಯ?
ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿರುವಾಗಲೇ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಕರೆ ಬರಬಹುದು ಎಂಬ ಗುಮಾನಿ ವ್ಯಕ್ತವಾಗುತ್ತಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ಬೆನ್ನು ಹಾಕುವ ಸಮಯ ಬಂದಿದೆ ಎಂದು ರಾಜಕೀಯ ಪಂಡಿತರು ಮಾತನಾಡುತ್ತಿದ್ದಾರೆ. ಆದರೆ, ಈ ಎಲ್ಲಾ ಲೆಕ್ಕಾಚಾರಗಳಾಚೆಗೂ ಬಿಜೆಪಿ ಹೈಕಮಾಂಡ್ ಅನಿರೀಕ್ಷಿತ ಹಾಗೂ ಅಚ್ಚರಿಯ ನಿಲುವು ತಳೆದು ಯಾರೂ ಊಹಿಸಿರದ ವ್ಯಕ್ತಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದು ಕೂರಿಸಬಹುದಾ ಎಂಬ ಅನುಮಾನವೂ ಚಾಲ್ತಿಯಲ್ಲಿರುವುದು ಸತ್ಯ.

ಇದನ್ನೂ ಓದಿ:
Karnataka Politics: ಯಡಿಯೂರಪ್ಪ ಬಳಿಕ ಯಾರಾಗ್ತಾರೆ ಹೊಸ ಮುಖ್ಯಮಂತ್ರಿ?; ಈ 8 ನಾಯಕರತ್ತ ಹೈಕಮಾಂಡ್ ಒಲವು 

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಖಚಿತ; ರಾಜಕೀಯ ಉತ್ತರಾಧಿಕಾರಿ ಯಾರು ಎಂಬುದಷ್ಟೇ ಪ್ರಶ್ನೆ, ಚರ್ಚೆ!

(Karnataka Chief Minister Who will be the new CM after BS Yediyurappa Resignation here is the Insight of Political game)

Click on your DTH Provider to Add TV9 Kannada