ಯಡಿಯೂರಪ್ಪ ಕೈ ಸೇರಲಿದೆ ’ಸಂಧ್ಯಾ ಕಾಲ‘ದ ಸಂದೇಶ; ಹೈಕಮಾಂಡ್​ ಅಂತಿಮ ನಿರ್ಧಾರಕ್ಕೆ ಕ್ಷಣಗಣನೆ

ಇಂದು ರಾತ್ರಿಯ ವೇಳೆ ಹೈಕಮಾಂಡ್​ನಿಂದ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂದೇಶ ಬರಲಿದ್ದು ರಾಜೀನಾಮೆ ವಿಚಾರವನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಲಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಕೈ ಸೇರಲಿದೆ ’ಸಂಧ್ಯಾ ಕಾಲ‘ದ ಸಂದೇಶ; ಹೈಕಮಾಂಡ್​ ಅಂತಿಮ ನಿರ್ಧಾರಕ್ಕೆ ಕ್ಷಣಗಣನೆ
ಬಿ.ಎಸ್​.ಯಡಿಯೂರಪ್ಪ
Follow us
TV9 Web
| Updated By: Skanda

Updated on:Jul 25, 2021 | 12:13 PM

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳಿಗೆ ಇಂದು ರಾತ್ರಿಯ ಒಳಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದ್ದು, ಬಿ.ಎಸ್.ಯಡಿಯೂರಪ್ಪ (B.S Yediyurappa) ಮುಖ್ಯಮಂತ್ರಿ (Karnataka Chief Minister) ಸ್ಥಾನದಲ್ಲಿ ಮುಂದುವರೆಯಬೇಕೋ? ಬೇಡವೋ? ಎನ್ನುವ ವಿಚಾರವಾಗಿ ಹೈಕಮಾಂಡ್ ನಾಯಕರು (BJP High Command) ಸೂಚನೆ ನೀಡಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ರಾತ್ರಿಯ ವೇಳೆ ಹೈಕಮಾಂಡ್​ನಿಂದ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂದೇಶ (Message) ಬರಲಿದ್ದು ರಾಜೀನಾಮೆ (Resignation) ವಿಚಾರವನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಲಿದ್ದಾರೆ ಎನ್ನಲಾಗಿದೆ.

ಸದ್ಯ ಗೋವಾ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಇಂದು ಸಂಜೆ 5 ಗಂಟೆ ಸುಮಾರಿಗೆ ದೆಹಲಿಗೆ ವಾಪಾಸ್ಸಾಗಲಿದ್ದಾರೆ. ಅತ್ತ ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ ರಾತ್ರಿ ವೇಳೆಗೆ ದೆಹಲಿಗೆ ಆಗಮಿಸಲಿದ್ದಾರೆ. ಮೂರು ದಿನಗಳ ಜಮ್ಮು ಪ್ರವಾಸಕ್ಕೆ ತೆರಳಿದ್ದ ಬಿ.ಎಲ್ ಸಂತೋಷ್ ಕೂಡಾ ಜಮ್ಮು ಪ್ರವಾಸ ಮುಗಿಸಿ ದೆಹಲಿಗೆ ಮರಳಿದ್ದು ಈ ಮೂವರು ನಾಯಕರು ರಾತ್ರಿ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪ ರಾಜೀನಾಮೆಗೆ ಸೂಚನೆ ನೀಡುವುದು ಬಹುತೇಕ ಖಚಿತವಾಗಿದೆಯಾದರೂ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವುದರಿಂದ ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ಮಹತ್ತರ ಬದಲಾವಣೆ ಮಾಡುವುದು ಸಾಧ್ಯವೇ? ಎನ್ನುವ ಕುರಿತಾಗಿಯೂ ಅನುಮಾನ ಮೂಡಿವೆ. ಹೀಗಾಗಿ ಇಂದು ಸಂಜೆ ನಡೆಯಲಿರುವ ಸಭೆ ಸಹಜವಾಗಿಯೇ ಕುತೂಹಲ ಕೆರಳಿಸಿದ್ದು, ಒಂದುವೇಳೆ ರಾಜೀನಾಮೆ ಕೊಡಲು ಸೂಚಿಸಿದ್ದೇ ಆದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಅಂತಿಮ ತೀರ್ಮಾನವನ್ನೂ ಅದೇ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಬದಲಾವಣೆ ಬಗ್ಗೆ ಯಡಿಯೂರಪ್ಪ ಕೊಟ್ಟ ಸುಳಿವೇನು? ಇದೇ ವಿಚಾರವಾಗಿ ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಹೈಕಮಾಂಡ್‌ನಿಂದ ಸಂಜೆ ವೇಳೆಗೆ ಸಂದೇಶ ಬರುತ್ತದೆ. ಹೈಕಮಾಂಡ್‌ನಿಂದ ಸಂದೇಶ ಬಂದರೆ ನಿಮಗೂ ಗೊತ್ತಾಗುತ್ತದೆ. ಆ ಸಂದೇಶ ನೋಡಿಕೊಂಡು ಸೂಕ್ತ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ. ದಲಿತ ಮುಖ್ಯಮಂತ್ರಿ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ನಿರ್ಧರಿಸುವುದು ನಾನಲ್ಲ, ಅದು ಹೈಕಮಾಂಡ್ ನಿರ್ಧಾರ ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮೇಲೆ ನನಗೆ ವಿಶ್ವಾಸವಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿಕೆ ನೀಡುವ ಮೂಲಕ. ಇಂದು ಸಂಜೆಯ ವೇಳೆಗೆ ಮುಖ್ಯಮಂತ್ರಿ ಬದಲಾವಣೆ ಕುರಿತು ಮಾಹಿತಿ ಹೊರಬೀಳಬಹುದೆಂಬ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ದಲಿತ ಮುಖ್ಯಮಂತ್ರಿ ಬಗ್ಗೆ ನಿರ್ಧರಿಸುವುದು ನಾನಲ್ಲ, ಹೈಕಮಾಂಡ್: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 

ಬ್ರಾಹ್ಮಣ ಮುಖ್ಯಮಂತ್ರಿ, ಲಿಂಗಾಯತ, ಒಕ್ಕಲಿಗ, ವಾಲ್ಮೀಕಿ, ದಲಿತ ಸಮುದಾಯದಿಂದ 4 ಉಪಮುಖ್ಯಮಂತ್ರಿ; ಏನಿದು ಲೆಕ್ಕಾಚಾರ?

(BS Yediyurappa will get final message from BJP High Command during sundown time)

Published On - 11:59 am, Sun, 25 July 21