Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಮುಸ್ಲಿಂ, ದಲಿತರ ಕಡೆಗಣನೆ: ಕಾಂಗ್ರೆಸ್ ವಿರುದ್ಧ ಗುಡುಗಿದ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ

ಕರ್ನಾಟಕ ನೂತನ ಸರ್ಕಾರ ರಚನೆ ವೇಳೆ ದಲಿತರು ಹಾಗೂ ಮುಸ್ಲಿಮರನ್ನು ಕಡೆಗಣಿಸಿದ ಕಾಂಗ್ರೆಸ್ ವಿರುದ್ಧ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದಲ್ಲಿ ಮುಸ್ಲಿಂ, ದಲಿತರ ಕಡೆಗಣನೆ: ಕಾಂಗ್ರೆಸ್ ವಿರುದ್ಧ ಗುಡುಗಿದ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ
ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ
Follow us
Rakesh Nayak Manchi
|

Updated on: May 20, 2023 | 5:25 PM

ಲಕ್ನೋ: ಕರ್ನಾಟಕ ನೂತನ ಸರ್ಕಾರ ರಚನೆ ವೇಳೆ ದಲಿತರು ಹಾಗೂ ಮುಸ್ಲಿಮರನ್ನು ಕಡೆಗಣಿಸಿದ ಕಾಂಗ್ರೆಸ್ (Congress) ವಿರುದ್ಧ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ (Mayawati) ಆಕ್ರೋಶ ಹೊರಹಾಕಿದ್ದಾರೆ. ಕರ್ನಾಟಕದ ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಯ್ಕೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ದಲಿತರು ಮತ್ತು ಮುಸ್ಲಿಂ ಸಮುದಾಯದವರನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.

“ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ, ಕಾಂಗ್ರೆಸ್ ತನ್ನ ಆಂತರಿಕ ಕಲಹವನ್ನು ಹತ್ತಿಕ್ಕಲು ಡಿಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಮಾಡಲಾಯಿತು. ಆದರೆ ಕಾಂಗ್ರೆಸ್ ಗೆಲುವಿಗೆ ಒಗ್ಗಟ್ಟಿನಿಂದ ಮತ ಹಾಕಿದ ದಲಿತ ಮತ್ತು ಮುಸ್ಲಿಂ ಸಮುದಾಯಗಳನ್ನು ಯಾಕೆ ನಿರ್ಲಕ್ಷ್ಯ ಮಾಡಿತು” ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ತನ್ನ ನಾಯಕರೊಬ್ಬರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಬಯಸಿದ ದಲಿತ ಸಮುದಾಯವನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಹೇಳಿದ ಮಾಯಾವತಿ, ಕಾಂಗ್ರೆಸ್ ಯಾವುದೇ ದಲಿತ ಅಥವಾ ಮುಸ್ಲಿಮರನ್ನು ಉಪಮುಖ್ಯಮಂತ್ರಿ ಮಾಡಿಲ್ಲ. ಇದು ಕಾಂಗ್ರೆಸ್ ಪಕ್ಷದ ಜಾತಿವಾದಿ ಮನಸ್ಥಿತಿಯನ್ನು ಮಾತ್ರ ತೋರಿಸುತ್ತದೆ. ಕಾಂಗ್ರೆಸ್ ತನ್ನ ಕೆಟ್ಟ ದಿನಗಳಲ್ಲಿ ಮಾತ್ರ ಈ ವರ್ಗಗಳನ್ನು ನೆನಪಿಸಿಕೊಳ್ಳುತ್ತದೆ ಎಂದು ಗುಡುಗಿದ್ದಾರೆ.

ಇದನ್ನೂ ಓದಿ:ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸಿದ ಜೋಡೆತ್ತು: ಸಿದ್ದರಾಮಯ್ಯ 2.O

ಮೇ 10ರಂದು ನಡೆದಿದ್ದ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಮೇ 13ರಂದು ಪ್ರಕಟವಾಗಿತ್ತು. ಕಾಂಗ್ರೆಸ್ ಪಕ್ಷವು 135 ಸ್ಥಾನ ಪಡೆದು ಭರ್ಜರಿ ಬಹುಮತ ಗಳಿಸಿತ್ತು. ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಈ ನಡುವೆ ಡಿಸಿಎಂ ಪಟ್ಟ ಮುಸ್ಲಿಂ ಮತ್ತು ದಲಿತ ಸಮುದಾಯಕ್ಕೆ ನೀಡಬೇಕು ಎಂಬ ಆಗ್ರಹಗಳು ಕೇಳಿಬಂದಿದ್ದವು. ಅದಾಗ್ಯೂ, ಸಿಎಂ ಸ್ಥಾನ ಸಿದ್ದರಾಮಯ್ಯ ಪಾಲಾಗಿ ಡಿಸಿಎಂ ಸ್ಥಾನ ಡಿಕೆ ಶಿವಕುಮಾರ್ ಪಾಲಾಯಿತು. ಇಂದು ಪ್ರಮಾಣವಚನ ಸ್ವೀಕಾರವೂ ನಡೆಯಿತು.

ಸಮಾರಂಭದ ವೇಳೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಆಹ್ವಾನ ನೀಡಲಾಗಿತ್ತದಾದರೂ ಗೈರಾಗಿದ್ದರು. ಇವರ ಹೊರತಾಗಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್, ಬಿಹಾರ ಸಿಎಂ ನಿತೀಶ್, ಹಿಮಾಚಲಪ್ರದೇಶದ ಸಿಎಂ ಸುಖ್‌ವಿಂದರ್ ಸಿಂಗ್ ಸುಖು, ಪುದುಚೆರಿ ಸಿಎಂ ರಂಗಸ್ವಾಮಿ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಹಾಗೂ ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ