ಅಕ್ರಮ ಕುಕ್ಕರ್​​ ಸಂಗ್ರಹಿಸಿಟ್ಟ ಆರೋಪ: ಬಿಟಿಎಂ ಲೇಔಟ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ವಿರುದ್ಧ FIR

ಅಕ್ರಮವಾಗಿ ಕುಕ್ಕರ್​​​ಗಳನ್ನು ಸಂಗ್ರಹಿಸಿಟ್ಟಿದ್ದ ಆರೋಪದಡಿ ಬಿಟಿಎಂ ಲೇಔಟ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ವಿರುದ್ಧ ನಗರದ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್​ಆರ್​ಐ ದಾಖಲು ಮಾಡಲಾಗಿದೆ.

ಅಕ್ರಮ ಕುಕ್ಕರ್​​ ಸಂಗ್ರಹಿಸಿಟ್ಟ ಆರೋಪ: ಬಿಟಿಎಂ ಲೇಔಟ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ವಿರುದ್ಧ FIR
ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ Image Credit source: oneindia.com
Follow us
ಗಂಗಾಧರ​ ಬ. ಸಾಬೋಜಿ
|

Updated on: Mar 31, 2023 | 6:52 PM

ಬೆಂಗಳೂರು: ಅಕ್ರಮವಾಗಿ ಕುಕ್ಕರ್​​​ಗಳನ್ನು ಸಂಗ್ರಹಿಸಿಟ್ಟಿದ್ದ ಆರೋಪದಡಿ ಬಿಟಿಎಂ ಲೇಔಟ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ (Anil Shetty) ವಿರುದ್ಧ ನಗರದ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್​ಆರ್​ಐ ದಾಖಲು ಮಾಡಲಾಗಿದೆ. ಮಾ.28ರಂದು ಅನಿಲ್ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ 504 ಕುಕ್ಕರ್​​​ಗಳನ್ನು ಜಪ್ತಿ ಮಾಡಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿ ವರಲಕ್ಷ್ಮಮ್ಮ ದೂರು ನೀಡಿದ್ದರು. ನ್ಯಾಯಾಲಯದ ಅನುಮತಿ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ವಾಹನ ತಪಾಸಣೆ ವೇಳೆ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2.5 ಲಕ್ಷ ರೂ. ಹಣ ಕಾರಿನಲ್ಲಿ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ. ಧರ್ಮಸ್ಥಳ, ಕಟೀಲು ದೇವಾಲಯ ಹುಂಡಿಗೆ ಹಾಕಲು ಹಣ ತಂದಿರುವುದಾಗಿ ಪಾವಗಡ ಮೂಲದ ವೈದ್ಯ ಹೇಳಿದ್ದಾರೆನ್ನಲಾಗುತ್ತಿದೆ.

₹40 ಲಕ್ಷ ಮೌಲ್ಯದ ವಿವಿಧ ಬಗೆಯ ವಸ್ತುಗಳು ಪತ್ತೆ

ವಿಜಯಪುರ: ವಿಧಾನಸಭಾ ಚುನಾವಣೆ ಹಿನ್ನಲೆ ಮತದಾರರಿಗೆ ಗಿಫ್ಟ್ ಹಂಚಿಕೆ ವಿಚಾರವಾಗಿ ಮಾರ್ಚ್ 27 ರಂದು ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ ಪೊಲೀಸರು ಹಾಗೂ ಕಂದಾಯ ಇಲಾಖೆ ಆಧಿಕಾರಿಗಳ ದಾಳಿ ಮಾಡಿದ್ದರು. ಇಂದು ಮತ್ತೆ ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್ ಬಳಿಯ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ವಿವಿಧ ಬಾಕ್ಸ್​ಗಳಲ್ಲಿ ಪ್ಯಾಕ್ ಮಾಡಿರುವ ರೀತಿಯಲ್ಲಿ ಗಡಿಯಾರ ಹಾಗೂ ಟೀ ಶರ್ಟ್ ಸಿಕ್ಕಿವೆ.

ಇದನ್ನೂ ಓದಿ: ಚುನಾವಣೆ ದಿನಾಂಕ ಘೋಷಣೆ ಮೊದಲೇ ಕರ್ನಾಟಕದಲ್ಲಿ 15 ಕೋಟಿ ರೂ. ನಗದು, 57.72 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ, 1,985 FIR

ಎಸ್ಆರ್​ಪಿ ಗುರುತಿರುವ ಟೀ ಶರ್ಟ್ ಪತ್ತೆಯಾಗಿದ್ದವು. ಒಟ್ಟು 2.50 ಕೋಟಿ ಮೌಲ್ಯದ ಗೋಡೆ ಗಡಿಯಾರ ಹಾಗೂ ಟೀ ಶರ್ಟ್ ಪತ್ತೆಯಾಗಿವೆ. 40 ಲಕ್ಷ ರೂಪಾಯಿ ಮೌಲ್ಯದ ಗಿಫ್ಟ್ ಐಟಂ ಪತ್ತೆಯಾಗಿರುವ ಮಾಹಿತಿ ಇದೆ. ಸ್ಥಳಕ್ಕೆ ಎಸ್ಪಿ ಆನಂದಕುಮಾರ ಹಾಗೂ ಇತರ ಆಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕಲಬುರಗಿ ತಾಲೂಕಿನಲ್ಲಿ ದಾಖಲೆ ಇಲ್ಲದ 1 ಕೋಟಿ ಹಣ ಜಪ್ತಿ

ಕಲಬುರಗಿ: ಕಾರು ತಪಾಸಣೆ ವೇಳೆ 1 ಕೋಟಿ ರೂ. ನಗದು ಜಪ್ತಿಯಾಗಿರುವಂತಹ ಘಟನೆ ತಾಲೂಕಿನ ಫರಹತಾಬಾದ್ ಚೆಕ್ ಪೋಸ್ಟ್​ನಲ್ಲಿ ಪತ್ತೆಯಾಗಿದೆ. ಯಾವುದೇ ದಾಖಲೆಯಿಲ್ಲದೆ ರವಿ ಎನ್ನುವವರು ಕಾರಿನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದರು. ಹಣದ ಮೂಲದ ಬಗ್ಗೆ ಪೊಲೀಸರು ಮತ್ತು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ತಾನು ಹತ್ತಿ ಮಿಲ್ ಮಾಲೀಕನಿದ್ದೇನೆ. ಕಾರ್ಮಿಕರ ವೇತನ ನೀಡಲು ಹಣ ತಗೆದುಕೊಂಡು ಹೋಗುತ್ತಿರುವುದಾಗಿ ರವಿ ಹೇಳಿದ್ದಾರೆ. ಈ ಬಗ್ಗೆ ಇನ್ನು ಯಾವುದೇ ದೂರು ದಾಖಲಾಗಿಲ್ಲ.

ಇದನ್ನೂ ಓದಿ: ನಮ್ಮ ಮನೆಯೇ ನಿಮ್ಮ ಮನೆ: ರಾಜ್ಯ ಕಾಂಗ್ರೆಸ್​ ನಾಯಕರಿಂದ ರಾಹುಲ್​ ಗಾಂಧಿಗೆ ಆಹ್ವಾನ

ಶಾಸಕ ಶಾಮನೂರು ಶಿವಶಂಕರಪ್ಪ, ಪುತ್ರ ಮಲ್ಲಿಕಾರ್ಜುನ್ ವಿರುದ್ಧ FIR

ದಾವಣಗೆರೆ: ವಿಧಾನಸಭೆ ಚುನಾವಣೆ ದಿನಾಂಕ ನಿನ್ನೆ(ಮಾ.29) ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಾಗಿದೆ. ಹೀಗಿದ್ದರೂ ಕೂಡ ಮತದಾರರಿಗೆ ಆಮಿಷವೊಡ್ಡಿ ಗಿಫ್ಟ್ ಹಂಚುತ್ತಿದ್ದ ಆರೋಪದಡಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ದಾವಣಗೆರೆ ಉತ್ತರ ಕ್ಷೇತ್ರದ ಮಾಜಿ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ದ FIR ದಾಖಲಾಗಿದೆ. ಹೌದು ಎಸ್​.ಎಸ್ ಮತ್ತು SSM ಅಭಿಮಾನಿ ಬಳಗದ ಹೆಸರಿನಲ್ಲಿ ಜನರಿಗೆ ಗಿಫ್ಟ್​ ಹಂಚುತ್ತಿದ್ದರು. ಈ ವೇಳೆ ಪೊಲೀಸರು ದಾಳಿ ಮಾಡಿದ್ದು, ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ದಾವಣಗೆರೆಯ ಕೆಟಿಜೆ ನಗರದ ಠಾಣೆಯಲ್ಲಿ FIR​​​ ದಾಖಲಾಗಿದೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.