ಅರುಣ್ ಕುಮಾರ್ ಪುತ್ತಿಲ ಭೇಟಿಯಾಗಿದ್ದು ನಿಜ: ಹಿಂದೂ ಮುಖಂಡನ ಪಕ್ಷ ಸೇರ್ಪಡೆ ಬಗ್ಗೆ ವಿಜಯೇಂದ್ರ ಹೇಳಿದ್ದಿಷ್ಟು

| Updated By: Ganapathi Sharma

Updated on: Feb 22, 2024 | 12:16 PM

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ವಿಚಾರವಾಗಿ ತಮ್ಮ ಬಳಿ ಚರ್ಚಿಸಿರುವುದು ನಿಜ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮೈಸೂರಿನಲ್ಲಿ ಒಪ್ಪಿಕೊಂಡಿದ್ದಾರೆ. ಪಕ್ಷ ಸೇರ್ಪಡೆ ಬಗ್ಗೆ ಪುತ್ತಿಲ ಜತೆ ಏನು ಮಾತುಕತೆ ಆಗಿದೆ ಎಂಬುದನ್ನೂ ಅವರು ತಿಳಿಸಿದ್ದಾರೆ. ಆ ಮಾಹಿತಿ ಇಲ್ಲಿದೆ.

ಅರುಣ್ ಕುಮಾರ್ ಪುತ್ತಿಲ ಭೇಟಿಯಾಗಿದ್ದು ನಿಜ: ಹಿಂದೂ ಮುಖಂಡನ ಪಕ್ಷ ಸೇರ್ಪಡೆ ಬಗ್ಗೆ ವಿಜಯೇಂದ್ರ ಹೇಳಿದ್ದಿಷ್ಟು
ಅರುಣ್ ಕುಮಾರ್ ಪುತ್ತಿಲ & ವಿಜಯೇಂದ್ರ
Follow us on

ಮೈಸೂರು, ಫೆಬ್ರವರಿ 22: ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಮುಖಂಡ, ಪುತ್ತಿಲ ಪರಿವಾರದ (Puthila Parivara) ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ (Arun Kumar Puthila) ಅವರು ಭೇಟಿಯಾಗಿರುವುದು ನಿಜ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪುತ್ತಿಲ ನನ್ನನ್ನು ಭೇಟಿ ಮಾಡಿದ್ದು ಸತ್ಯ. ಬೆಷರತ್ ಆಗಿ ಬಿಜೆಪಿ (BJP) ಸೇರ್ಪಡೆಯಾಗಿ ಎಂದು ಅವರಿಗೆ ಸೂಚಿಸಿದ್ದೇನೆ. ಯಾವುದೇ ಷರತ್ತುಗಳು ಬೇಡ. ಪ್ರಧಾನಿ ಮೋದಿ ನಾಯಕತ್ವಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಪುತ್ತಿಲ ವಿಚಾರವಾಗಿ ದಕ್ಷಿಣ ಕನ್ನಡದ ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡುತ್ತೇನೆ. ಎಲ್ಲಾ ಕ್ಷೇತ್ರಕ್ಕೂ ನಮಗೆ ಬಿಜೆಪಿ, ಕಮಲ ಚಿಹ್ನೆಯಷ್ಟೇ ಅಭ್ಯರ್ಥಿ. ಬೇರೆ ಯಾವ ಭಿನ್ನಾಭಿಪ್ರಾಯಗಳೂ ನಮ್ಮ ನಡುವೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿಗೇ ಗಡುವು ನೀಡಿದ್ದ ಪುತ್ತಿಲ ಪರಿವಾರ

ಪುತ್ತಿಲ ಪರಿವಾರವನ್ನು ಬಿಜೆಪಿ ಜತೆ ವಿಲೀನಗೊಳಿಸಿ ಪಕ್ಷ ಸೇರ್ಪಡೆಯಾಗುವುದಾದರೆ ಸ್ವಾಗತ ಎಂದು ಬಿಜೆಪಿ ನಾಯಕರು ಹೇಳಿದ್ದರು. ಇದರ ಬೆನ್ನಲ್ಲೇ ಪುತ್ತೂರಿನಲ್ಲಿ ಪರಿವಾರದ ಕಾರ್ಯಕರ್ತರ ಸಮಾಲೋಚನಾ ಸಭೆ ನಡೆಸಿದ್ದ ಪುತ್ತಿಲ, ಲೋಕಸಭಾ ಚುನಾವಣೆಗೂ ಮುನ್ನ ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸ್ಥಾನ ನೀಡಿದರೆ ಮಾತ್ರ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಹೇಳಿದ್ದರು. ಅಲ್ಲದೆ, ಈ ವಿಚಾರವಾಗಿ 3 ದಿನಗಳ ಒಳಗಾಗಿ ನಿರ್ಧಾರ ತಿಳಿಸಬೇಕು ಎಂದೂ ಬಿಜೆಪಿಗೆ ಗಡುವು ನೀಡಿದ್ದರು. ಇದಾಗಿ ಹಲವು ದಿನಗಳೂ ಕಳೆದೂ ಈ ವಿಚಾರವಾಗಿ ಯಾವುದೇ ಬೆಳವಣಿಗೆ ಆಗಿಲ್ಲ ಎಂಬುದು ಗಮನಾರ್ಹ. ಇದೀಗ ಪುತ್ತಿಲ ಮಾತುಕತೆ ನಡೆಸಿರುವ ಬಗ್ಗೆ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ಬಿಜೆಪಿ, ಜೆಡಿಎಸ್ ಸೀಟು ಹಂಚಿಕೆ ಗೊಂದಲ ಇಲ್ಲ: ವಿಜಯೇಂದ್ರ

ಜೆಡಿಎಸ್ ಮತ್ತು ಬಿಜೆಪಿ ನಡುವೆ ಸೀಟ್ ಹಂಚಿಕೆಗೆ ಯಾವ ಗೊಂದಲಗಳೂ ಇಲ್ಲ. ಮುಂದೆಯೂ ಕೂಡ ಅದು ಉದ್ಭವ ಆಗುವುದಿಲ್ಲ. ಅಮಿತ್ ಶಾ ಅಅರನ್ನು ಕುಮಾರಸ್ವಾಮಿ ಯಾಕೆ ಭೇಟಿಯಾಗಿದ್ದಾರೆ ಎಂಬುದು ತಿಳಿದಿಲ್ಲ. ಮಾರ್ಚ್ ಮೊದಲ ವಾರದಲ್ಲಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ವಿಜಯೇಂದ್ರ ಹೇಳಿದರು.

ಇದನ್ನೂ ಓದಿ: ಬಿಜೆಪಿ ಜೊತೆ ಕೈಜೋಡಿಸಲು ಹಲವು ಷರತ್ತು ಹಾಕಿದ ಪುತ್ತಿಲ ಪರಿವಾರ: ಏನೇನು? ಇಲ್ಲಿದೆ ವಿವರ

ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಮುಂದಿನ ದಿಕ್ಸೂಚಿಯಲ್ಲ. ನಂಜನಗೂಡು ಉಪ ಚುನಾವಣೆ ನಡೆದ ಮೇಲೆ ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರ ಹೇಗೆ ಸೋತಿದೆ ಎಂಬುದು ಜನರಿಗೆ ಗೊತ್ತಿದೆ. ಸರ್ಕಾರ ಇದ್ದಾಗ ಉಪ ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬುದೂ ಜನರಿಗೆ ಗೊತ್ತಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ