ಕಾಂಗ್ರೆಸ್ ಚಿಂತನ ಶಿಬಿರ: ಕಾರ್ಯಕಾರಿ ಸಮಿತಿಯಲ್ಲಿ ಯುವಜನರಿಗೆ ಆದ್ಯತೆ, ಟಿಕೆಟ್​ ಕೊಡಲು ವಯೋಮಿತಿ ನಿರ್ಬಂಧ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 15, 2022 | 2:34 PM

70 ವರ್ಷಕ್ಕೆ ಮೇಲ್ಪಟ್ಟವರಿಗೆ ಚುನಾವಣೆ ಟಿಕೆಟ್ ನೀಡದಿರುವ ಬಗ್ಗೆ ಚಿಂತನ ಶಿಬಿರದಲ್ಲಿ ಗಂಭೀರ ಚರ್ಚೆ ನಡೆಯಿತು.

ಕಾಂಗ್ರೆಸ್ ಚಿಂತನ ಶಿಬಿರ: ಕಾರ್ಯಕಾರಿ ಸಮಿತಿಯಲ್ಲಿ ಯುವಜನರಿಗೆ ಆದ್ಯತೆ, ಟಿಕೆಟ್​ ಕೊಡಲು ವಯೋಮಿತಿ ನಿರ್ಬಂಧ
ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಸೋನಿಯಾಂಧಿಯೊಂದಿಗೆ ಹಿರಿಯ ನಾಯಕರು
Follow us on

ಉದಯ್​ಪುರ್: ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಮೂರುದಿನಗಳ ಕಾಂಗ್ರೆಸ್ ಚಿಂತನ ಶಿಬಿರ ಭಾನುವಾರ ಮುಕ್ತಾಯವಾಗಲಿದೆ. ಕಾಂಗ್ರೆಸ್​ನಲ್ಲಿ ಸಂಘಟನಾತ್ಮಕ ಬದಲಾವಣೆಗೆ ಕಾರಣವಾಗುವ ‘ನವ ಸಂಕಲ್ಪ’ ಘೋಷಣೆಗಳಿಗೆ​ ಕಾರ್ಯಕಾರಿ ಸಮಿತಿಯು (Congress Working Committee – CWC) ಅನುಮೋದನೆ ನೀಡಬಹುದು ಎಂದು ಮೂಲಗಳು ಹೇಳಿವೆ. ಅಂತಿಮ ಹಂತದ ಚರ್ಚೆಗಳು ಭಾನುವಾರ ಆರಂಭವಾದವು. ವಿವಿಧ ಸಮಿತಿಗಳು ತಮ್ಮ ವರದಿಗಳನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿದವು. ಈ ವರದಿಗಳನ್ನು ಕಾರ್ಯಕಾರಿ ಸಮಿತಿಯಲ್ಲಿ ಸಮಗ್ರವಾಗಿ ಚರ್ಚಿಸಿದ ನಂತರ ಪಕ್ಷವು ಅಂತಿಮ ನಿರ್ಣಯಕ್ಕೆ ಬರಲಿದೆ.

ರಾಷ್ಟ್ರ ರಾಜಕಾರಣದ ಬಗ್ಗೆ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಕಾಂಗ್ರೆಸ್ ಸಂಘಟನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಪಿ.ಚಿದಂಬರಂ ಮತ್ತು ಪ್ರಿಯಾಂಕಾ ಗಾಂಧಿ ವದ್ರಾ ಪಾಲ್ಗೊಳ್ಳಲಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಅನುಭವಿಸಿದ ನಂತರ ಕಾಂಗ್ರೆಸ್ ಪಕ್ಷವು ದೇಶದ ವಿವಿಧೆಡೆಯ ನಾಯಕರನ್ನು ಒಂದೆಡೆ ಸೇರಿಸಿ, ಚಿಂತನಮಂಥನ ನಡೆಸುತ್ತಿದೆ. ಪಕ್ಷದ ಮರುಸಂಘಟನೆ ಮತ್ತು ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಚಿಂತನ ಶಿಬಿರದಲ್ಲಿ ಚರ್ಚೆ ನಡೆಯಿತು.

70 ವರ್ಷಕ್ಕೆ ಮೇಲ್ಪಟ್ಟವರಿಗೆ ಚುನಾವಣೆ ಟಿಕೆಟ್ ನೀಡದಿರುವ ಬಗ್ಗೆ ಚಿಂತನ ಶಿಬಿರದಲ್ಲಿ ಗಂಭೀರ ಚರ್ಚೆ ನಡೆಯಿತು. ಪಕ್ಷದ ಕಾರ್ಯಕಾರಿ ಸಮಿತಿಗಳಲ್ಲಿ ಪದಾಧಿಕಾರಿ ಹುದ್ದೆ ಪಡೆದುಕೊಳ್ಳಲು ಸಹ 70 ವರ್ಷ ಮೇಲ್ಪಟ್ಟವರಿಗೆ ಕೊಕ್ ನೀಡುವ ಜೊತೆಗೆ, ಅಂಥವರಿಗೆ ಪದಾಧಿಕಾರಿ ಸ್ಥಾನದಿಂದ ರಾಜೀನಾಮೆ ಕೇಳಬೇಕು ಎನ್ನುವ ಒತ್ತಾಯವೂ ಕೇಳಿಬಂತು. ಪ್ರಭಾವಿಗಳು, ಸಂಪನ್ಮೂಲ ವ್ಯಕ್ತಿಗಳು, ಮತ ಕ್ರೋಢೀಕರಣ ಮಾಡುವ ಸಾಮರ್ಥ್ಯವಿರುವವರಿಗೆ ವಿನಾಯಿತಿ ಕೊಡಬೇಕು. ಎಲ್ಲ ಹಂತಗಳಲ್ಲಿ 35 ವರ್ಷ ವಯೋಮಾನದವರಿಗೆ ಆದ್ಯತೆ ನೀಡಬೇಕು ಎಂದು ಮುಕುಲ್ ವಾಸ್ನಿಕ್ ನೇತೃತ್ವದ ಸಂಘಟನಾ ಸಮಿತಿ ಸಲಹೆ ನೀಡಿದೆ. ಸೋನಿಯಾ ಗಾಂಧಿಗೆ ಸಲ್ಲಿಸಿರುವ ವರದಿಯಲ್ಲಿ ಹಲವು ಸೂತ್ರಗಳು ಸೇರ್ಪಡೆಯಾಗಿವೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಈ ಸಲಹೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಿದೆ.

ಚಿಂತನ ಶಿಬಿರದ ಮೊದಲ ದಿನ ಮಾತನಾಡಿದ್ದ ಸೋನಿಯಾ ಗಾಂಧಿ, ಇದು ಪಕ್ಷವು ಆತ್ಮವಿಮರ್ಶೆ ಮಾಡಿಕೊಳ್ಳಲು ಸಕಾಲ. ಹಿಂದೆಂದೂ ಕಂಡುಕೇಳರಿಯದ ಅನೂಹ್ಯ ಪರಿಸ್ಥಿತಿಯನ್ನು ಪಕ್ಷವು ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ವಿಶಿಷ್ಟ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ಹೇಳಿದರು.

ಕಾರ್ಯಕಾರಿ ಸಮಿತಿಗಳಲ್ಲಿ ಅಧಿಕಾರ ಹೊಂದಲು ಮತ್ತು ಚುನಾವಣೆಗಳಲ್ಲಿ ಸ್ಪರ್ಧಿಸಲು ವಯೋಮಿತಿ ವಿಧಿಸಬೇಕು. ರಾಜ್ಯಸಭೆಯಲ್ಲಿ ನಿರ್ದಿಷ್ಟವಾಗಿ ಇಂತಿಷ್ಟೇ ಅವಧಿಗೆ ಸ್ಪರ್ಧಿಸಬೇಕು. ಒಂದು ಕುಟುಂಬಕ್ಕೆ ಒಂದು ಚುನಾವಣೆಯಲ್ಲಿ ಒಂದೇ ಟಿಕೆಟ್ ಕೊಡಬೇಕು. ಪಕ್ಷದಲ್ಲಿ ಐದುವರ್ಷಗಳ ಅಧಿಕಾರ ಅವಧಿ ಪೂರ್ಣಗೊಳಿಸಿದ ನಾಯಕರು ಮೂರು ವರ್ಷಗಳ ಅವಧಿಗೆ ಪಕ್ಷದಲ್ಲಿ ಯಾವುದೇ ಸ್ಥಾನದಲ್ಲಿ ಇರಬಾರದು ಎಂಬ ನಿಯಮಗಳನ್ನು ಹಲವು ನಾಯಕರು ಶಿಫಾರಸು ಮಾಡಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯೂ ಸೇರಿದಂತೆ ಪಕ್ಷದ ಎಲ್ಲ ಹಂತಗಳಲ್ಲಿ ಅರ್ಧದಷ್ಟು ಹುದ್ದೆಗಳನ್ನು 50 ವರ್ಷಕ್ಕೂ ಕಡಿಮೆ ವಯಸ್ಸಿನವರಿಗೆ ಕೊಡಬೇಕು ಎಂಬ ಮಾತುಗಳು ಸಭೆಯಲ್ಲಿ ಕೇಳಿಬಂದವು. ರಾಜಕೀಯ ಸವಾಲುಗಳನ್ನು ಎದುರಿಸಲು ರೂಪಿಸಿರುವ ಸಮಿತಿಯ ಸದಸ್ಯರು ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದು ವಿಶೇಷ ಎನಿಸಿತು. ವರದಿಗಳಲ್ಲಿ ಹಿಂದು ಶಬ್ದ ಬಳಸಬೇಕೇ? ಅಥವಾ ಹಿಂದುತ್ವ ಪದವನ್ನು ಬಳಸಬೇಕೆ ಎಂಬ ಬಗ್ಗೆಯೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಲು ಲಿಂಕ್: Chintan Shivir ends today

Published On - 2:32 pm, Sun, 15 May 22