ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಯಾರಾಗಬೇಕು ಎಂಬ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಮತ್ತು ವಸತಿ ಸಚಿವ ಸೋಮಣ್ಣ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿರುವಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ (ನ.3) ಈ ಸಂಬಂಧ ನೀಡಿದ ಹೇಳಿಕೆಯೊಂದು ಮಹತ್ವ ಪಡೆದುಕೊಂಡಿದೆ. ಗೋವಿಂದರಾಜನಗರ ಪೊಲೀಸ್ ಠಾಣೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ‘ಅವರಿಬ್ಬರನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ, ಅಷ್ಟು ಅವಿನಾಭಾವ ಸಂಬಂಧ ಅವರದು’ ಎಂದರು. ‘ನಾನು ಕಾರ್ಯಕ್ರಮಕ್ಕೆ ಬರುವ ಮೊದಲು ಅಶೋಕ್ ನನ್ನ ಜೊತೆಯಲ್ಲೇ ಇದ್ದರು. ಆದರೆ ಇದ್ದಕ್ಕಿದ್ದಂತೆ ಮಾಯವಾದರು. ಆಮೇಲೆ ಗೊತ್ತಾಯ್ತು ಇವತ್ತು ಸೋಮಣ್ಣನವರ ಆಹ್ವಾನವಿದೆ ಎಂದು. ಸೋಮಣ್ಣನವರ ಕಾರ್ಯಕ್ರಮವೆಂದರೆ ಅಶೋಕ್ ಇರಲೇಬೇಕು. ಅವರಿಬ್ಬರನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ. ಅವರ ನಡುವೆ ಅಷ್ಟು ಅವಿನಾಭಾವ ಸಂಬಂಧವಿದೆ’ ಎಂದು ಮುಖ್ಯಮಂತ್ರಿ ಹೇಳಿದರು.
ಮನೆಗಳ ನಿರ್ಮಾಣ ವಿಚಾರದಲ್ಲೂ ಅಷ್ಟೇ ಅಶೋಕ್ ಜಾಗ ಕೊಡ್ತಾರೆ, ಸೋಮಣ್ಣ ನಿರ್ಮಾಣ ನೋಡಿಕೊಳ್ತಾರೆ. ನೋಡಿ ಇಲ್ಲೂ ಸಹ ಅವರಿಬ್ಬರೂ ಒಂದೆ. ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವವರಲ್ಲಿ ಸೋಮಣ್ಣ ಮೊದಲಿಗರು. ಆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಅವರು ಕ್ಷೇತ್ರದ ಉಸ್ತುವಾರಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಹಾಗೆ ನೋಡಿದರೆ ಎಲ್ಲ ಶಾಸಕರು, ಸಚಿವರು ಉಸ್ತುವಾರಿಗಳೇ. ನೀವು ಜನಗಳು ಕೂಡಾ ಉಸ್ತುವಾರಿಗಳೇ; ಆದರೆ ಉಸಾಬರಿ ಇರಬಾರದಷ್ಟೆ ಎಂದು ನಗೆಚಟಾಕಿ ಹಾರಿಸಿದರು. ಸೋಮಣ್ಣ ಬೆಂಗಳೂರಿನಲ್ಲಿ 1.80 ಲಕ್ಷ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ 5 ಲಕ್ಷ ಮನೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿಕೊಂಡಿದ್ದಾರೆ. ಸ್ಲಂ ನಿವಾಸಿಗಳು ಮತ್ತು ಮಧ್ಯಮ ವರ್ಗದ ಜನರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಗೋವಿಂದರಾಜನಗರದಲ್ಲಿ ಪೊಲೀಸ್ ಠಾಣೆ ನಿರ್ಮಿಸಬೇಕು ಎನ್ನುವುದು ನಾನು ಗೃಹ ಸಚಿವನಾಗಿ ಹೊರಡಿಸಿದ ಕೊನೆಯ ಆದೇಶ. ಈಗ ಮುಖ್ಯಮಂತ್ರಿಯಾಗಿ ಬಂದು ಉದ್ಘಾಟಿಸಿರುವುದು ಸಂತಸದ ವಿಚಾರ. ಎಲ್ಲಾ ಕೆಲಸಕ್ಕೆ ಸಮಯವಿದೆ, ಆದರೆ ಪೊಲೀಸ್ ಕೆಲಸಕ್ಕೆ ಸಮಯ ಎನ್ನುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಯಾರಿಗೆ ತೊಂದರೆಯಾದ್ರೂ ನೆನಪಾಗುವುದು ಪೊಲೀಸರು. ನಾನು ಗೃಹ ಸಚಿವನಾದ ಮೇಲೆ ಪೊಲೀಸರನ್ನು ಹತ್ತಿರದಿಂದ ನೋಡಿದ್ದೇನೆ. ಅದರಲ್ಲಿಯೂ ಕರ್ನಾಟಕದ ಪೊಲೀಸರು ಭಾರತದಲ್ಲೇ ನಂಬರ್ ಒನ್. ಸಣ್ಣಪುಟ್ಟ ಘಟನೆಗಳನ್ನು ಬಿಟ್ರೆ ಹಿಂದಿನ ರೌಡಿ ರಾಜ್ಯ ಹೋಗಿ ಕಾನೂನು ಸುವ್ಯವಸ್ಥಿತ ರಾಜ್ಯ ಈಗಿದೆ. ಕರ್ನಾಟಕದ ಪೊಲೀಸರು ವಿಶೇಷವಾಗಿ ಬೆಂಗಳೂರು ಪೊಲೀಸರಿಗೆ ವಾರ್ ಆನ್ ಡ್ರಗ್ಸ್ ಅಂದಿದ್ದೆ. ಡ್ರಗ್ಸ್ ದಂಧೆಯ ಅನೇಕ ವ್ಯೂಹಗಳನ್ನ ಭೇದಿಸಿದ್ದು ಪೊಲೀಸರು. ₹ 50 ಕೋಟಿ ಮೌಲ್ಯದಷ್ಟು ಮಾದಕ ಪದಾರ್ಥಗಳನ್ನು ಒಂದೇ ದಿನ ಸುಟ್ಟು ಹಾಕಲಾಯ್ತು. ಸಮಾಜದ ಪಿಡುಗುಗಳನ್ನು ತೊಡೆದು ಹಾಕಲು ಗಟ್ಟಿ ನಿಲುವುಗಳು ಅಗತ್ಯ. ಆನ್‍ಲೈನ್ ಗ್ಯಾಂಬ್ಲಿಂಗ್ ಸಹ ಎಗ್ಗಿಲ್ಲದೇ ಸಾಗಿತ್ತು, ಅದರ ವಿರುದ್ಧವು ಕಾನೂನು ಜಾರಿ ಮಾಡಿದ್ದೇವೆ. ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಇ ಸಲ್ಲಿಸಿದ್ದರು. ನಾವು ಈ ಪಿಡುಗಿನ ಗಾಂಭೀರ್ಯವನ್ನು ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಡುತ್ತಿದ್ದೇವೆ ಎಂದರು.
ಬೆಂಗಳೂರು ವಿಶ್ವದಲ್ಲೇ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ನಗರ. ವಿಶ್ವದಲ್ಲೇ ಅತಿಹೆಚ್ಚು ವಾಹನ ಸಂಚರಿಸುವ ನಗರ. ಇಲ್ಲಿ ಸುಸಜ್ಜಿತ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇವೆ. ರಾಜಕಾಲುವೆಗಳ ಅವ್ಯವಸ್ಥೆಯಿಂದಾಗಿ ಮಳೆಯಾದಾಗ ಸಮಸ್ಯೆಯಾಗುತ್ತಿದೆ. ಅಂತಹ ಪ್ರದೇಶ ಗುರುತಿಸಿ ರಾಜಕಾಲುವೆ ಮರುನಿರ್ಮಿಸಲು ಡಿಪಿಆರ್ ಸಿದ್ಧಪಡಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ. ಬೆಂಗಳೂರು ನಗರ ಬೆಳೆಯುತ್ತಿದೆ, ಆದ್ರೆ ಯೋಜನಾಬದ್ಧವಾಗಿಲ್ಲ. ಎಲ್ಲಾ ವಾರ್ಡ್ಗಳು ಅಭಿವೃದ್ಧಿಯಾದರೆ ಮಾತ್ರ ಅರ್ಥವಿರುತ್ತೆ. ಬೆಂಗಳೂರು ನಗರ ಅಭಿವೃದ್ಧಿ ಮೋದಿಯವರ ಆಶಯವಾಗಿದೆ. ಪ್ರಧಾನಿ ಭೇಟಿಯಾದಾಗೆಲ್ಲ ಬೆಂಗಳೂರಿನ ಬಗ್ಗೆ ಕೇಳುತ್ತಾರೆ. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದ ನಗರವಾಗಿದೆ. ಹಾಗಾಗಿ ಬೆಂಗಳೂರಿನ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಬಿಟ್ ಕಾಯಿನ್ ದಂಧೆ: ಸಿದ್ದರಾಮಯ್ಯ, ಸೋಮಣ್ಣ ಆರೋಪ ಪ್ರತ್ಯಾರೋಪ
ಇದನ್ನೂ ಓದಿ: Omicron in India ಹೊಸ ಕೊವಿಡ್-19 ರೂಪಾಂತರಿ ಆತಂಕ; ಆರೋಗ್ಯದ ಕಾಳಜಿಗೆ ಇಲ್ಲಿದೆ ತಜ್ಞರ ಸಲಹೆ