ವಿವಿಧ ಜಿಲ್ಲಾ ಪಂಚಾಯಿತಿಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ (ಜಿಪಂ) ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಬುಡವೇ ಅಲ್ಲಾಡುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಯ ಬಗ್ಗೆ ತಿರುಗೇಟು ನೀಡಿದರು. ಕಾಂಗ್ರೆಸ್ನವರಿಗೆ ಬುಡವೇ ಇಲ್ಲ, ಹಾಗಾಗಿ ಮಾತನಾಡ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಕನಸಾಗಿಯೇ ಉಳಿಯಲಿದೆ. ಕನಸು ಕಾಣಲು ಯಾರೂ ತೆರಿಗೆ ಕಟ್ಟಬೇಕಿಲ್ಲ ಎಂದರು. ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಸೋಲುಂಟಾಗಿರುವ ಬಗ್ಗೆ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಯನ್ನೂ ಬೊಮ್ಮಾಯಿ ಒಪ್ಪಲಿಲ್ಲ.
ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಅವರು, ಬಹುತೇಕ ನಗರಸಭೆ ಮತ್ತು ಪುರಸಭೆಗಳಲ್ಲಿ ನಮ್ಮ ಸಾಧನೆ ಉತ್ತಮವಾಗಿದೆ. ಯಾವುದೇ ಭೇದಭಾವ ಇಲ್ಲದೇ ಸಮಗ್ರ ಅಭಿವೃದ್ಧಿ ಮಾಡುತ್ತೇವೆ. ನನ್ನ ಕ್ಷೇತ್ರದಲ್ಲಿ ಈ ಹಿಂದೆಯೂ ಬಿಜೆಪಿ ಗೆದ್ದಿರಲಿಲ್ಲ. ಆದರೆ ನಾವು ಯಾವುದೇ ಅಭಿವೃದ್ಧಿ ಕೆಲಸಗಳನ್ನೂ ನಿಲ್ಲಿಸಿಲ್ಲ ಎಂದರು.
ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟವಾದ ನಂತರ ಬಿಜೆಪಿಯಲ್ಲಿ ಆಂತರಿಕವಾಗಿ ಹಲವಾರು ರೀತಿಯ ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆ. ಚುನಾವಣೆ ನಡೆದಿರುವ 58 ಸ್ಥಳೀಯ ಸಂಸ್ಥೆಗಳ ಪೈಕಿ 51 ಕಡೆ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದೆ. ಇದರಲ್ಲಿ ಬಿಜೆಪಿ 444 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಸ್ಥಳೀಯ ಸಂಸ್ಥೆಗಳು ಹಿಂದೆ ಗ್ರಾಮ ಪಂಚಾಯತಿಗಳಾಗಿದ್ದಾಗ ಕಾಂಗ್ರೆಸ್ ಹೆಚ್ಚು ಗೆದ್ದಿತ್ತು. ಈಗ ಪಟ್ಟಣ ಪಂಚಾಯತಿಗಳಾದ ಬಳಿಕ ಬಿಜೆಪಿ ಮೇಲುಗೈ ಸಾಧಿಸಿದೆ. ಮುಖ್ಯಮಂತ್ರಿಯ ತವರು ಜಿಲ್ಲೆ ಹಾವೇರಿಯಲ್ಲಿ ಅಲ್ಪಸಂಖ್ಯಾತ ಮತಗಳು ಹೆಚ್ಚಿದ್ದ ಕಾರಣ ಬಂಕಾಪುರದಲ್ಲಿ ಬಿಜೆಪಿಗೆ ಹಿನ್ನೆಡೆ ಆಗಿದೆ. ವಿಧಾನ ಪರಿಷತ್ ಚುನಾವಣೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದ ಕಾರಣ ನಿರೀಕ್ಷಿತ ಗೆಲುವು ಸಾಧ್ಯವಾಗಿಲ್ಲ ಎಂದು ಕೆಲ ನಾಯಕರು ಅಭಿಪ್ರಾಯಪಟ್ಟರು.
ಕೊರೊನಾ ನಿರ್ಲಕ್ಷ್ಯ ಸಲ್ಲದು
ವಿವಿಧ ಜಿಲ್ಲೆಗಳ ಜಿಪಂ ಸಿಇಒಗಳೊಂದಿಗೆ ಸಭೆ ನಡೆಸಿದ ಚರ್ಚಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೊವಿಡ್ ನಿರ್ವಹಣೆ ಬಗ್ಗೆ ನಾವು ಚರ್ಚಿಸಿದ್ದೇವೆ. ಕೊರೊನಾ ನಿರ್ಲಕ್ಷಿಸಿದರೆ ಸಮಸ್ಯೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದೇನೆ. ಲಸಿಕೆ ವಿತರಣೆ ಮತ್ತು ಕೊರೊನಾ ನಿಯಂತ್ರಣದ ಬಗ್ಗೆ ಚರ್ಚಿಸಿದ್ದೇನೆ. ಕೊರೊನಾ ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಎಲ್ಲರಿಗೂ ಸೂಚಿಸಲಾಗಿದೆ. ಹಳ್ಳಿಗಳಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಬೆಂಗಳೂರು: ಹೆಬ್ಬಗೋಡಿ ನಗರಸಭೆ ಬಿಜೆಪಿ ಪಾಲಿಗೆ, ಕಾಂಗ್ರೆಸ್ಗೆ ಜಿಗಣಿ, ಬಿಜೆಪಿಗೆ ಚಂದಾಪುರ ಪುರಸಭೆ
ಇದನ್ನೂ ಓದಿ: ಮತಾಂತರ ಕಾಯ್ದೆ ಜಾರಿಗೆ ವಿಶೇಷ ಟಾಸ್ಕ್ ಫೋರ್ಸ್, ಹಿಂದೂ ದೇಗುಲಗಳನ್ನು ಸ್ವತಂತ್ರ ಮಾಡುತ್ತೇವೆ: ಬಸವರಾಜ ಬೊಮ್ಮಾಯಿ