CM Ibrahim: ಸಿದ್ದರಾಮಯ್ಯಗೆ ಮೇಕಪ್ ಮಾಡಿಸಿ ಸಿಎಂ ಮಾಡಿದವನು ನಾನು: ಇಬ್ರಾಹಿಂ

|

Updated on: Feb 10, 2023 | 1:20 PM

Karnataka Politics: ಸಿದ್ದರಾಮಯ್ಯಗೆ ಎರಡು ಸಲ ರಾಜಕೀಯ ಜೀವನ ಕಲ್ಪಿಸಿದ್ದು ನಾನು. ಅವರಿಗೆ ಮೇಕಪ್ ಮಾಡಿಸಿ ಮುಖ್ಯಮಂತ್ರಿ ಮಾಡಿಸಿದವನೂ ನಾನೇ ಎಂದೂ ಜೆಡಿಎಸ್​ನ ರಾಜ್ಯಾಧ್ಯಕ್ಷರಾಗಿರುವ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

CM Ibrahim: ಸಿದ್ದರಾಮಯ್ಯಗೆ ಮೇಕಪ್ ಮಾಡಿಸಿ ಸಿಎಂ ಮಾಡಿದವನು ನಾನು: ಇಬ್ರಾಹಿಂ
ಸಿಎಂ ಇಬ್ರಾಹಿಂ
Follow us on

ಬೀದರ್: ತಮ್ಮ ಭಾಷಣ, ಹೇಳಿಕೆಗಳು, ವ್ಯಂಗ್ಯೋಕ್ತಿಗಳ ಮೂಲಕ ಎಲ್ಲರ ಗಮನ ಸೆಳೆಯುವ ಸಿ.ಎಂ. ಇಬ್ರಾಹಿಂ (CM Ibrahim) ಕರ್ನಾಟಕ ಕಂಡ ಅತ್ಯಂತ ಮನರಂಜನಾತ್ಮಕ ರಾಜಕಾರಣಿಗಳಲ್ಲಿ ಒಬ್ಬರು. ಅವರ ಭಾಷಣಗಳಲ್ಲಿ ಹಾಸ್ಯದ ಹೂರಣ ಇರುತ್ತದೆ. ಜೊತೆಗೆ ಅಷ್ಟೇ ಮೊನಚು ಕೂಡ ಹೌದು. ಜೆಡಿಎಸ್​ನಲ್ಲಿರುವ ಇಬ್ರಾಹಿಂ ಇದೀಗ ತಮ್ಮ ಗುರು ಸಿದ್ದರಾಮಯ್ಯ ವಿರುದ್ಧವೂ ಟೀಕಾ ಪ್ರಹಾರ ನಡೆಸಿದ್ದಾರೆ. ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಿ.ಎಂ. ಇಬ್ರಾಹಿಂ, ತಾನು ಸಿದ್ದರಾಮಯ್ಯಗೆ (Siddaramaiah) ರಾಜಕೀಯ ಸಹಾಯ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಸಿದ್ದರಾಮಯ್ಯಗೆ ಎರಡು ಸಲ ರಾಜಕೀಯ ಜೀವನ ಕಲ್ಪಿಸಿದ್ದು ನಾನು. ಅವರಿಗೆ ಮೇಕಪ್ ಮಾಡಿಸಿ ಮುಖ್ಯಮಂತ್ರಿ ಮಾಡಿಸಿದವನೂ ನಾನೇ ಎಂದೂ ಜೆಡಿಎಸ್​ನ ರಾಜ್ಯಾಧ್ಯಕ್ಷರಾಗಿರುವ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಸಾಹುಕಾರ್ ಮನೆ ನಾಯಿಗೂ ಸಾಕಾಗಲ್ಲ:

ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿಯೊಂದು ಮನೆಗೂ ತಿಂಗಳಿಗೆ 200 ಯೂನಿಟ್ ವಿದ್ಯುತ್ ಪೂರೈಕೆ ಮಾಡುವುದಾಗಿ ನೀಡಿರುವ ವಾಗ್ದಾನವನ್ನು ಸಿ.ಎಂ. ಇಬ್ರಾಹಿಂ ಇದೇ ವೇಳೆ ಹಳಿದಿದ್ದಾರೆ. ಕಾಂಗ್ರೆಸ್ ಕೊಡುವ ಈ 200 ಯೂನಿಟ್ ವಿದ್ಯುತ್ ಬಡವರಿಗೆ ಎಲ್ಲಿ ಸಾಕಾಗುತ್ತದೆ ಎಂದು ಕೇಳಿದ ಅವರು, ಸಾಹುಕಾರರ ಮನೆಯಲ್ಲಿ ಮಲಗುವ ನಾಯಿಗೂ ಇವರು ಕೊಡುವ ವಿದ್ಯುತ್ ಸಾಕಾಗಲ್ಲ ಎಂದು ವ್ಯಂಗ್ಯ ಮಾಡಿದರು.

ಇದನ್ನೂ ಓದಿ: ಹಾಸನ ಜೆಡಿಎಸ್​ ಟಿಕೆಟ್​ ಫೈಟ್ ಮಧ್ಯೆ ಹೊಸ ಬಾಂಬ್ ಸಿಡಿಸಿದ ಹೆಚ್​.ಡಿ.ರೇವಣ್ಣ

ಧಂ ಇದ್ದರೆ ಜೋಶಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ

ಶೃಂಗೇರಿ ಮಠ ಒಡೆದ ಬ್ರಾಹ್ಮಣನನ್ನು ಬಿಜೆಪಿ ಸಿಎಂ ಮಾಡಲು ಹೊರಟಿದೆ ಎಂದು ಪ್ರಹ್ಲಾದ್ ಜೋಶಿ ವಿರುದ್ಧ ಪರೋಕ್ಷವಾಗಿ ಬೊಟ್ಟು ಮಾಡಿದ್ದ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸಿಎಂ ಇಬ್ರಾಹಿಂ ಇದೇ ವೇಳೆ ಸಮರ್ಥಿಸಿಕೊಂಡಿದ್ದಾರೆ.

ಕುಮಾರಣ್ಣ ಯಾವ ತಪ್ಪನ್ನೂ ಹೇಳಿಲ್ಲ. ಶೃಂಗೇರಿ ಮಠವನ್ನು ಒಡೆದವರು ಯಾರು? ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಇನ್ನೂ ಸ್ಪಷ್ಟತೆ ಕೊಡುತ್ತಿಲ್ಲ. ಬಿಜೆಪಿಯವರು ಪ್ರಹ್ಲಾದ್ ಜೋಶಿಯನ್ನೇ ಸಿಎಂ ಮಾಡಲಿ. ಆದರೆ, ಅವರಿಗೆ ತಾಕತ್ತಿದ್ದರೆ ಚುನಾವಣೆಗೆ ಮುನ್ನ ಜೋಶಿಯನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಲಿ ಎಂದು ಇಬ್ರಾಹಿಂ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಈ ಬಾರಿ ಸಾವರ್ಕರ್- ಟಿಪ್ಪು ಹೆಸರಿನಲ್ಲೇ ಚುನಾವಣೆ ನಡೆಯಲಿ: ರೇಣುಕಾಚಾರ್ಯ

ಜೆಡಿಎಸ್ ಪಕ್ಷ ಬಸವಣ್ಣನ ತತ್ವದ ಆಧಾರದಲ್ಲಿ ನಡೆಯುತ್ತಿದೆ. ಬಸವಕೃಪಾದವರಿಗೆ ಕೇಶವಕೃಪಾದಲ್ಲಿ (ಆರ್​ಎಸ್​ಎಸ್) ಜಾಗ ಇಲ್ಲ ಎಂದು ಹೇಳಿದ್ದೆ. ಯಡಿಯೂರಪ್ಪಗೆ ಮೋಸ ಮಾಡುತ್ತಾರೆಂದು 4 ವರ್ಷದ ಹಿಂದೆಯೇ ಹೇಳಿದ್ದೆ ಎಂದು ಸಿ.ಎಂ. ಇಬ್ರಾಹಿಂ ಕಿಡಿಕಾರಿದ್ದಾರೆ.

ಮೇಕಪ್ ಮಾಡಿಕೊಂಡು ಬಂದರು:

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಕಳೆದ ಚುನಾವಣೆಗೂ ಮುನ್ನ ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎಂದಿದ್ದರು. ಆದರೆ, ಕೊನೆಗೆ ಬಿಜೆಪಿ ಮತ್ತು ಕಾಂಗ್ರೆಸ್ಸಿಗರು ಮೇಕಪ್ ಹಾಕಿಕೊಂಡು ಕುಮಾರಸ್ವಾಮಿ ಬಳಿ ಬಂದಿದ್ದರು ಎಂದು ಇಬ್ರಾಹಿಂ ತೀಕ್ಷ್ಣವಾಗಿ ಕುಟುಕಿದ್ದಾರೆ.

Published On - 1:20 pm, Fri, 10 February 23