“ತಾಳ್ಮೆಯೇ ನಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ, ಅಸಮಾಧಾನದ ಪ್ರಶ್ನೆಯೇ ಇಲ್ಲ”: ನೂತನ ಸಂಪುಟ ಸಭೆ ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೂತನ ಸಚಿವರಿಗೆ ಆಗಸ್ಟ್ 5 ರಿಂದಲೇ ಉಸ್ತುವಾರಿ ಜಿಲ್ಲೆಗಳಿಗೆ ತೆರಳಿ ಮಳೆ ಹಾಗೂ ಬರ ಪರಿಸ್ಥಿತಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಸಚಿವ ಸ್ಥಾನ ಸಿಗದ ಶಾಸಕರಿಗೆ ತಾಳ್ಮೆಯಿಂದ ಇರುವಂತೆ ಸಂದೇಶ ನೀಡಿದ ಸಿಎಂ, ಭವಿಷ್ಯದಲ್ಲಿ ಅವಕಾಶ ಖಚಿತಪಡಿಸಿದರು. ಸಿದ್ದರಾಮಯ್ಯ ಅಸಮಾಧಾನದ ವರದಿಗಳನ್ನು ತಳ್ಳಿಹಾಕಿ, ಸಂಪುಟದಲ್ಲಿ ಒಗ್ಗಟ್ಟು ಇದೆ ಎಂದು ಸ್ಪಷ್ಟಪಡಿಸಿದರು.

ತಾಳ್ಮೆಯೇ ನಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ, ಅಸಮಾಧಾನದ ಪ್ರಶ್ನೆಯೇ ಇಲ್ಲ: ನೂತನ ಸಂಪುಟ ಸಭೆ ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ
ಡಿಕೆ ಶಿವಕುಮಾರ್
Edited By:

Updated on: Aug 03, 2026 | 10:09 PM

ಬೆಂಗಳೂರು, ಆ.3: ನೂತನವಾಗಿ ಸೇರ್ಪಡೆಯಾದ 19 ಸಚಿವರೊಂದಿಗೆ ವಿಧಾನಸೌಧದಲ್ಲಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಸುದೀರ್ಘ ಸಂಪುಟ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸಚಿವರಿಗೆ ನೀಡಿರುವ ಗಡುವು, ರಾಜ್ಯದ ಮಳೆ ಹಾಗೂ ಬರ ಪರಿಸ್ಥಿತಿ ಮತ್ತು ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರಿಗೆ ಈ ಮೂಲಕ ಸಂದೇಶಗಳನ್ನು ನೀಡಿದ್ದಾರೆ.

ನೂತನ ಸಚಿವರಿಗೆ ಬೆಂಗಳೂರಿನಲ್ಲಿ ಇರಲು ನಾಳೆ (ಆಗಸ್ಟ್ 4) ಒಂದು ದಿನ ಮಾತ್ರ ಅವಕಾಶ ನೀಡಲಾಗಿದೆ. ನಾಡಿದ್ದಿನಿಂದ (ಆಗಸ್ಟ್ 5) ಎಲ್ಲ ಸಚಿವರೂ ತಮ್ಮ ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ತೆರಳಿ ಪ್ರವಾಸ ಮಾಡುವಂತೆ ಸಿಎಂ ಸೂಚಿಸಿದ್ದಾರೆ. ರಾಜ್ಯದ ಎಲ್ಲೆಲ್ಲಿ ಮಳೆಯಿಂದ ಅನಾಹುತಗಳಾಗಿವೆಯೋ ಹಾಗೂ ಬರದ ಸ್ಥಿತಿಗತಿ ಹೇಗಿದೆ ಎಂಬುದರ ಕುರಿತು ಪ್ರತ್ಯಕ್ಷ ಪರಿಶೀಲನೆ ನಡೆಸಿ, ಕಂದಾಯ ಇಲಾಖೆಗೆ ವರದಿ ಸಲ್ಲಿಸುವಂತೆ ಸಚಿವರಿಗೆ ಮಾರ್ಗದರ್ಶನ ನೀಡಲಾಗಿದೆ. ವರದಿ ಬಂದ ನಂತರ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಈಗಲೇ ಬರ ಘೋಷಣೆ ಮಾಡಿ ಎಂದು ಒತ್ತಾಯಿಸುತ್ತಿರುವ ವಿಪಕ್ಷಗಳಿಗೆ ಸೂಕ್ತ ಸಮಯ ಬಂದಾಗ ಉತ್ತರ ನೀಡಲಾಗುವುದು ಎಂದು ಸಿಎಂ ಹೇಳಿದರು.

ಇಲ್ಲಿದೆ ನೋಡಿ ವಿಡಿಯೋ:

DK Shivakumar Cabinet Meeting: ಹೆಣ್ಮಕ್ಕಳಿಗೆ ಅವಕಾಶ ಕೊಟ್ಟಿಲ್ಲ ಎಂಬ ಚರ್ಚೆ ಬಗ್ಗೆ ಡಿಕೆಶಿ ಪ್ರತಿಕ್ರಿಯೆ|#TV9D

“ಕಾಂಗ್ರೆಸ್‌ನ ಎಲ್ಲಾ ಶಾಸಕರೂ ಅರ್ಹರು, ತಾಳ್ಮೆಯಿಂದಿರಿ”: ಸಚಿವ ಆಕಾಂಕ್ಷಿಗಳಿಗೆ ಅಭಯ

ಸಚಿವ ಸ್ಥಾನ ಸಿಗದೆ ಬಂಡಾಯ ಎದ್ದಿರುವ ಹಾಗೂ ಅಸಮಾಧಾನಗೊಂಡಿರುವ ಶಾಸಕರನ್ನು ಉದ್ದೇಶಿಸಿ ಮಾತನಾಡಿ, ತಮ್ಮದೇ ಉದಾಹರಣೆ ನೀಡಿದರು. “ನಮ್ಮ ಪಕ್ಷದಲ್ಲಿ ಶಾಸಕರಷ್ಟೇ ಅಲ್ಲ, ವಿಧಾನ ಪರಿಷತ್ ಸದಸ್ಯರೂ ಸಚಿವರಾಗಲು ಅರ್ಹರಿದ್ದಾರೆ. ಧರಂ ಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನನ್ನನ್ನು ಹಾಗೂ ಜಿ. ಪರಮೇಶ್ವರ್ ಅವರನ್ನು ಸಂಪುಟದಿಂದ ಹೊರಗಿಡಲಾಗಿತ್ತು. ಆದರೆ ನಾವು ತಾಳ್ಮೆಯಿಂದ ಇದ್ದೆವು. ಆ ತಾಳ್ಮೆಯೇ ಇಂದು ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಹಾಗೂ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ. ಶಾಸಕಾಂಗದಲ್ಲಿ ಶೇ. 15 ರಷ್ಟು ಜನರನ್ನು ಮಾತ್ರ ಸಚಿವರನ್ನಾಗಿ ಮಾಡಲು ಸಾಧ್ಯ. ನನ್ನ ನಾಯಕರು ಹಾಗೂ ಸ್ನೇಹಿತರಿಗೆ ಹೇಳುವುದು ಒಂದೇ—ತಾಳ್ಮೆಯಿಂದಿರಿ, ಮುಂದಿನ ದಿನಗಳಲ್ಲಿ ಖಂಡಿತ ಅವಕಾಶ ಮಾಡಿಕೊಡಲಾಗುವುದು.” ಎಂದು ಹೇಳಿದರು.

ಇದನ್ನೂ ಓದಿ: ಧಾರವಾಡ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್: ಶಾಸಕ ಸ್ಥಾನದ ಅನರ್ಹತೆ ಆದೇಶ ರದ್ದುಗೊಳಿಸಿದ ವಿಧಾನಸಭೆ ಸಚಿವಾಲಯ

“ಸಿದ್ದರಾಮಯ್ಯ ಅಸಮಾಧಾನ ಎಂಬುದು ಮಾಧ್ಯಮಗಳ ಸೃಷ್ಟಿ”: ಒಗ್ಗಟ್ಟಿನ ಮಂತ್ರ

ಸಂಪುಟ ವಿಸ್ತರಣೆಯಿಂದ ಸಿದ್ದರಾಮಯ್ಯ ಅವರಿಗೆ ಅಸಮಾಧಾನವಾಗಿದೆ ಎಂಬ ವರದಿಗಳನ್ನು ತಳ್ಳಾಕಿದ ಸಿಎಂ, “ಯಾಕೆ ಸಿದ್ದರಾಮಯ್ಯ ಅವರಿಗೆ ಅಸಮಾಧಾನ? ನಾವೆಲ್ಲಾ ಒಂದು ಟೀಮ್, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ನಾನೂ ಕೂಡ ಸಿದ್ದರಾಮಯ್ಯ ಅವರ ಅಭ್ಯರ್ಥಿಯೇ ಅಲ್ವಾ? ಸಿದ್ದರಾಮಯ್ಯ ಅವರಲ್ಲಿ ಯಾವುದೇ ಅಸಮಾಧಾನವಿಲ್ಲ, ಇದು ನಿಮ್ಮಿಂದಲೇ (ಮಾಧ್ಯಮಗಳಿಂದ) ಕೇಳ್ತಾ ಇರೋ ಹೊಸ ಸುದ್ದಿ” ಎಂದರು. ಹೈಕಮಾಂಡ್ ನೀಡಿದ ಮಾರ್ಗದರ್ಶನದಂತೆಯೇ ಸಂಪುಟ ರಚನೆ ಮಾಡಲಾಗಿದೆ. ಯಾವುದೇ ಗೊಂದಲಗಳಾಗಿಲ್ಲ. ನಾನು ಸಹಿ ಹಾಕಿ ರಾಜಭವನಕ್ಕೆ ಕಳುಹಿಸಿಕೊಟ್ಟ ಪಟ್ಟಿಯೇ ಅಧಿಕೃತ. ಊಹಾಪೋಹಗಳ ಹೆಸರುಗಳಿಗೆ ಬೆಲೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಸಂಪುಟದಲ್ಲಿ ಮಹಿಳೆಯರಿಗೂ ಸಚಿವ ಸ್ಥಾನ ನೀಡಲಾಗುವುದು ಎಂದು ಅವರು ಪುನರುಚ್ಚರಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ

 

Loading...
Unable to load recommendations.
Follow Us