ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ವಿಶೇಷ ಮಾಹಿತಿ ಇದ್ದರೆ ಪೊಲೀಸರಿಂದ ತನಿಖೆ: ದಿನೇಶ್ ಗುಂಡೂರಾವ್
ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಯಚೂರು, ಆಗಸ್ಟ್ 7: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Chaluvaraya Swamy) ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ಬೇರೆ ಯಾವುದೋ ಉದ್ದೇಶಕ್ಕೆ ರಾಜಕಾರಣ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಸ್ಪಷ್ಟ ಮಾಹಿತಿ, ಉತ್ತರವನ್ನು ಸದನದಲ್ಲಿ ಸಚಿವರು ನೀಡಿದ್ದಾರೆ. ಒಂದು ವೇಳೆ ವಿಶೇಷ ಮಾಹಿತಿ ಇದ್ದರೆ ಪೊಲೀಸರು ತನಿಖೆ ಮಾಡುತ್ತಾರೆ ಎಂದರು.
ಚಲುವರಾಯ ಸ್ವಾಮಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಮೇಲಿಂದಮೇಲೆ ಕೇಳಿಬರುತ್ತಿವೆ. ಇತ್ತೀಚೆಗಷ್ಟೇ, ವರ್ಗಾವಣೆ ವಿಚಾರವಾಗಿ ಮಂಡ್ಯ ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ಕೃಷಿ ಸಚಿವರ ಹೆಸರು ಕೇಳಿಬಂದಿತ್ತು. ಇವರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಇದೀಗ ಲಂಚ ಆರೋಪ ಕೇಳಿಬಂದಿದೆ.
6 ರಿಂದ 8 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡುತ್ತಿರುವುದಾಗಿ ಆರೋಪಿಸಿ ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರಿನ ಸಹಾಯಕ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅಲ್ಲದೆ, ಸಚಿವರ ವಿರುದ್ಧ ಕ್ರಮ ಕೈಗೊಳ್ಳಲಿದ್ದರೆ ವಿಷ ಕುಡಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ಪತ್ರವನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿದ್ದಾರೆ. ಸರ್ಕಾರ ಮುಖ್ಯಕಾರ್ಯದರ್ಶಿ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಪ್ರದೀಪ್ ಸೂಚಿಸಿದ್ದಾರೆ.
ಇದನ್ನೂ ಓದಿ: ಲಂಚಕ್ಕೆ ಬೇಡಿಕೆ, ಚಲುವರಾಯಸ್ವಾಮಿ ವಿರುದ್ಧ ಗಂಭೀರ ಆರೋಪ: ರಾಜ್ಯಪಾಲರಿಗೆ ದೂರು
ವಿಜಯ ರಾಘವೇಂದ್ರ ಕುಟುಂಬಕ್ಕೆ ಗುಂಡೂರಾವ್ ಸಾಂತ್ವಾನ
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂಧನಾ ನಿಧನ ವಿಚಾರವಾಗಿ ಮಾತನಾಡಿದ ದಿನೇಶ್ ಗುಂಡೂರಾವ್, ವಿಜಯ ರಾಘವೇಂದ್ರ ಪತ್ನಿ ಅವರಿಗೆ ಬಹಳ ಚಿಕ್ಕ ವಯಸ್ಸು. ನನಗೆ ಅವರ ಪರಿಚಯವಿದೆ. ವಿಜಯರಾಘವೇಂದ್ರ ಅವರ ಪರಿಚಯ ಕೂಡ ಇದೆ. ಸ್ಪಂದನಾ ಅವರ ತಂದೆ ಶಿವರಾಂ ನಮ್ಮ ಪಕ್ಷದ ಮುಖಂಡರು. ಸ್ಪಂದನಾ ಅವರ ನಿಧನ ದುಃಖಕರವಾಗಿದೆ. ಈ ಚಿಕ್ಕವಯಸ್ಸಿನಲ್ಲಿ ಹೃದಯಾಘಾತದಿಂದ ತೀರಿಕೊಳ್ಳುವಂತದ್ದು ಆಶ್ಚರ್ಯ ಆಗಿದೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಭಗವಂತ ಅವರಿಗೆ ದುಃಖ ಬರಿಸುವ ಶಕ್ತಿ ನೀಡಲಿ ಎಂದರು.
ಹುಟ್ಟೂರು ಬೆಳ್ತಂಗಡಿಯಲ್ಲಿ ಅಂತ್ಯಕ್ರಿಯೆ ವಿಚಾರವಾಗಿ ಮಾತನಾಡಿದ ದಿನೇಶ್ ಗುಂಡೂರಾವ್, ಅದು ಅವರ ಕುಟುಂಬದ ತೀರ್ಮಾನ. ಖಂಡಿತ ಅದಕ್ಕೆ ಎಲ್ಲ ರೀತಿ ಸಹಕಾರ, ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Mon, 7 August 23