ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಅಸ್ತಿತ್ವಕ್ಕೆ; ಸಚಿವರ ಜಾತಿವಾರು, ಪ್ರದೇಶವಾರು ಲೆಕ್ಕಾಚಾರ, ಸಮಗ್ರ ವರದಿ ಹೀಗಿದೆ

| Updated By: ganapathi bhat

Updated on: Aug 04, 2021 | 4:46 PM

Basavaraj Bommai Cabinet: ಮೈಸೂರು, ಬಳ್ಳಾರಿ, ದಾವಣಗೆರೆ, ಹಾಸನ, ಕಲಬುರಗಿ, ರಾಯಚೂರು, ಯಾದಗಿರಿ, ಕೋಲಾರ, ರಾಮನಗರ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ವಿಜಯಪುರ ಜಿಲ್ಲೆಗಳಿಗೆ ಯಾವುದೇ ಸಚಿವ ಸ್ಥಾನ ಲಭ್ಯವಾಗಿಲ್ಲ.

ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಅಸ್ತಿತ್ವಕ್ಕೆ; ಸಚಿವರ ಜಾತಿವಾರು, ಪ್ರದೇಶವಾರು ಲೆಕ್ಕಾಚಾರ, ಸಮಗ್ರ ವರದಿ ಹೀಗಿದೆ
Karnataka Cabinet: ಚೊಚ್ಚಲ ಸಚಿವ ಸಂಪುಟ ರಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿ ಸರಿಯಾಗಿ ಒಂದು ವಾರದ ಬಳಿಕ ಇಂದು (ಆಗಸ್ಟ್ 4) ಸಚಿವ ಸಂಪುಟ ಅಸ್ಥಿತ್ವಕ್ಕೆ ಬಂದಿದೆ. ಹೊಸ ಸಚಿವರಾಗಿ 29 ಮಂದಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ರಾಜ್ಯಪಾಲ ಥಾವರಚಂದ ಗೆಹಲೋತ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದಾರೆ. ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಡಳಿತ ವಹಿಸಿದ ಬಳಿಕ ಸಚಿವ ಸಂಪುಟದ ಬಗ್ಗೆ ಬಹಳ ಕುತೂಹಲ ಮನೆಮಾಡಿತ್ತು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪ್ತರು, ಹೈಕಮಾಂಡ್ ಒಲವುಳ್ಳವರು, ವಲಸಿಗರು, ಹಿರಿಯರು, ಕಿರಿಯರು ಎಂದು ಊಹಾಪೋಹಗಳು ಜೋರಾಗಿದ್ದವು. ಜೊತೆಗೆ, ಸಚಿವ ಸ್ಥಾನಕ್ಕೆ ಪ್ರದೇಶವಾರು, ಜಾತಿವಾರು ಪ್ರಾತಿನಿಧ್ಯ ನೀಡುವ ಬಗ್ಗೆಯೂ ಹೇಳಲಾಗಿತ್ತು. ಇದೀಗ ಎಲ್ಲಾ ಕುತೂಹಲಕ್ಕೆ ತೆರೆ ಬಿದ್ದಿದೆ. ಬಸವರಾಜ ಬೊಮ್ಮಾಯಿ ಸಂಪುಟಕ್ಕೆ 29 ಸಚಿವರು ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಸಚಿವರಾಗಿದ್ದವರ ಸಹಿತ ಹೊಸಬರಿಗೂ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಬಿ. ಶ್ರೀರಾಮುಲು, ವಿ. ಸೋಮಣ್ಣ, ಉಮೇಶ್ ವಿಶ್ವನಾಥ್ ಕತ್ತಿ, ಎಸ್. ಅಂಗಾರ, ಜೆ.ಸಿ. ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಡಾ.ಸಿ.ಎನ್. ಅಶ್ವತ್ಥ್ ನಾರಾಯಣ, ಸಿ.ಸಿ. ಪಾಟೀಲ್, ಆನಂದ್ ಸಿಂಗ್, ಕೋಟ ಶ್ರೀನಿವಾಸ ಪೂಜಾರಿ, ಪ್ರಭು ಚೌಹಾಣ್, ಮುರುಗೇಶ್ ನಿರಾಣಿ, ಶಿವರಾಂ ಹೆಬ್ಬಾರ್, ಎಸ್​.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಭೈರತಿ ಬಸವರಾಜ್, ಡಾ.ಕೆ. ಸುಧಾಕರ್, ಕೆ. ಗೋಪಾಲಯ್ಯ, ಶಶಿಕಲಾ ಜೊಲ್ಲೆ, ಎಂಟಿಬಿ ನಾಗರಾಜ್, ಕೆ.ಸಿ. ನಾರಾಯಣಗೌಡ, ಬಿ.ಸಿ. ನಾಗೇಶ್, ವಿ. ಸುನಿಲ್ ಕುಮಾರ್, ಹಾಲಪ್ಪ ಆಚಾರ್, ಶಂಕರ ಪಾಟೀಲ್ ಮುನೇನಕೊಪ್ಪ, ಮುನಿರತ್ನ ಪ್ರಮಾಣವಚನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಜಾತಿವಾರು ಲೆಕ್ಕಾಚಾರ ಹೇಗಿದೆ?
ನೂತನ ಸಚಿವ ಸಂಪುಟದಲ್ಲಿ ಒಟ್ಟು 8 ಮಂದಿ ಲಿಂಗಾಯತರು ಸಚಿವರಾಗಿದ್ದಾರೆ. ವಿ. ಸೋಮಣ್ಣ, ಶಂಕರ್ ಪಾಟೀಲ್ ಮುನೇನಕೊಪ್ಪ, ಜೆ.ಸಿ. ಮಾಧುಸ್ವಾಮಿ, ಮುರುಗೇಶ್ ನಿರಾಣಿ, ಬಿ.ಸಿ. ಪಾಟೀಲ್, ಸಿ.ಸಿ. ಪಾಟೀಲ್, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಿಂದುಳಿದ ವರ್ಗದಲ್ಲಿ ಕುರುಬ ಸಮುದಾಯದಿಂದ ಕೆ.ಎಸ್. ಈಶ್ವರಪ್ಪ, ಭೈರತಿ ಬಸವರಾಜ್, ಎಂಟಿಬಿ ನಾಗರಾಜ್. ಬಲಿಜ ಸಮುದಾಯದಿಂದ ಮುನಿರತ್ನ, ಈಡಿಗ ಸಮುದಾಯದಿಂದ ವಿ. ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ. ರಜಪೂತ ಸಮುದಾಯದಿಂದ ಆನಂದ್ ಸಿಂಗ್ ಸಚಿವರಾಗಿದ್ದಾರೆ.

ರೆಡ್ಡಿ ಕೋಟಾದಲ್ಲಿ ಹಾಲಪ್ಪ ಆಚಾರ್​ಗೆ ಮಂತ್ರಿ ಭಾಗ್ಯ ಒಲಿದಿದೆ. ದಲಿತ ಸಮುದಾಯದಿಂದ ಎಸ್. ಅಂಗಾರ, ಗೋವಿಂದ ಕಾರಜೋಳ, ಪ್ರಭು ಚೌಹಾಣ್ ಸಚಿವರಾಗಿದ್ದು, ಎಸ್‌ಟಿ ಸಮುದಾಯದ ಬಿ. ಶ್ರೀರಾಮುಲು ಅವರಿಗೂ ಸಚಿವ ಸ್ಥಾನ ಲಭ್ಯವಾಗಿದೆ.

ಇನ್ನು ಬ್ರಾಹ್ಮಣ ಸಮುದಾಯದಿಂದ ಶಿವರಾಮ್ ಹೆಬ್ಬಾರ್, ಬಿ.ಸಿ. ನಾಗೇಶ್ ಸಚಿವರಾಗಿದ್ದು, ಒಕ್ಕಲಿಗ ಸಮುದಾಯದಿಂದ ಸಿ.ಎನ್‌ ಅಶ್ವತ್ಥ ನಾರಾಯಣ, ಕೆ.ಸಿ. ನಾರಾಯಣ ಗೌಡ, ಆರ್. ಅಶೋಕ್, ಡಾ. ಕೆ. ಸುಧಾಕರ್, ಆರಗ ಜ್ಞಾನೇಂದ್ರ, ಕೆ. ಗೋಪಾಲಯ್ಯ, ಎಸ್‌.ಟಿ ಸೋಮಶೇಖರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಲಿಂಗಾಯತ ಸಮುದಾಯದಲ್ಲಿ ಮುರುಗೇಶ್ ನಿರಾಣಿ, ಶಂಕರ ಪಾಟೀಲ್​ ಮುನೇನಕೊಪ್ಪ, ಸಿ.ಸಿ.ಪಾಟೀಲ್‌ ಪಂಚಮಸಾಲಿ ಸಮುದಾಯವನ್ನು ಪ್ರತಿನಿಧಿಸಿದರೆ, ವಿ.ಸೋಮಣ್ಣ ಗೌಡ ಲಿಂಗಾಯತರನ್ನೂ, ಜೆ.ಸಿ.ಮಾಧುಸ್ವಾಮಿ ನೊಳಂಬ ಲಿಂಗಾಯತರನ್ನೂ, ಬಿ.ಸಿ.ಪಾಟೀಲ್ ಸಾದರ ಲಿಂಗಾಯತರನ್ನೂ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ ಬಣಜಿಗ ಲಿಂಗಾಯತರನ್ನೂ ಪ್ರತಿನಿಧಿಸುತ್ತಿದ್ದಾರೆ.

ಕ್ಷೇತ್ರವಾರು ಲೆಕ್ಕಾಚಾರ ಹೀಗಿದೆ:
1. ಕೆ.ಎಸ್. ಈಶ್ವರಪ್ಪ (ಶಿವಮೊಗ್ಗ)
2. ಅರಗ ಜ್ಞಾನೇಂದ್ರ (ತೀರ್ಥಹಳ್ಳಿ)
3. ಬಿ.ಸಿ ಪಾಟೀಲ್ (ಹಿರೇಕೆರೂರು)
4. ಡಾ.ಸಿ.ಎನ್.ಅಶ್ವತ್ಥ ನಾರಾಯಣ (ಮಲ್ಲೇಶ್ವರ)
5. ಉಮೇಶ್ ಕತ್ತಿ (ಹುಕ್ಕೇರಿ)
6. ಎಸ್.ಟಿ.ಸೋಮಶೇಖರ್ (ಯಶವಂತಪುರ)
7. ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ)
8. ಭೈರತಿ‌ ಬಸವರಾಜ (ಕೆ.ಆರ್ ಪುರಂ)
9. ಮುರುಗೇಶ್ ನಿರಾಣಿ (ಬಿಳಿಗಿ)
10. ಶಿವರಾಂ ಹೆಬ್ಬಾರ್ (ಯಲ್ಲಾಪುರ)
11. ಶಶಿಕಲಾ ಜೊಲ್ಲೆ (ನಿಪ್ಪಾಣಿ)
12. ಕೆ.ಸಿ ನಾರಾಯಣ್ ಗೌಡ (ಕೆ‌ಆರ್ ಪೇಟೆ)
13. ಸುನೀಲ್ ಕುಮಾರ್ (ಕಾರ್ಕಳ)
14. ಆರ್. ಅಶೋಕ್ (ಪದ್ಮನಾಭ ನಗರ)
15. ಗೋವಿಂದ ಕಾರಜೋಳ (ಮುಧೋಳ)
16. ಮುನಿರತ್ನ (ಆರ್​ಆರ್ ನಗರ)
17. ಬಿ.ಶ್ರೀ ರಾಮುಲು (ಮೊಳಕಾಲುಮ್ಮೂರು)
18. ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್)
19. ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ)
20. ಹಾಲಪ್ಪ ಆಚಾರ್ (ಯಲ್ಬುರ್ಗ)
21. ಶಂಕರ್ ಪಾಟೀಲ್ ಮುನೇನಕೊಪ್ಪ (ನವಲುಗುಂದ)
22. ಬಿ.ಸಿ ನಾಗೇಶ್ (ತಿಪಟೂರು)
23. ಪ್ರಭು ಚೌವ್ಹಾಣ್ (ಔರಾದ್)
24. ವಿ.ಸೋಮಣ್ಣ (ಗೋವಿಂದರಾಜನಗರ)
25. ಎಸ್.ಅಂಗಾರ (ಸುಳ್ಯ)
26. ಆನಂದ್ ಸಿಂಗ್ (ಹೊಸಪೇಟೆ)
27. ಸಿ.ಸಿ‌ ಪಾಟೀಲ್ (ನರಗುಂದ)
28. ಎಂ.ಟಿ.ಬಿ ನಾಗರಾಜ್ (ಬೆಂಗಳೂರು ಗ್ರಾಮಾಂತರ -ಎಂಎಲ್​ಸಿ)
29. ಕೋಟಾ ಶ್ರೀನಿವಾಸ ಪೂಜಾರಿ (ದಕ್ಷಿಣ ಕನ್ನಡ -ಎಂಎಲ್​ಸಿ)

ಈ 29 ಮಂದಿ ನೂತನ ಸಚಿವ ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಒಟ್ಟು 7 ಸಚಿವ ಸ್ಥಾನ ಸಿಕ್ಕಿದ್ದು, ರಾಜ್ಯದ 6 ಜಿಲ್ಲೆಗಳಿಂದ ತಲಾ ಇಬ್ಬರು ಸಂಪುಟದಲ್ಲಿ ಇದ್ದಾರೆ. ದಕ್ಷಿಣ ಕನ್ನಡ, ಧಾರವಾಡ, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿಂದ ಇಬ್ಬರು ಸಚಿವರಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಪರಿಗಣಿಸಿದರೆ ಹಾವೇರಿ ಜಿಲ್ಲೆಯಿಂದಲೂ ಇಬ್ಬರು ಸಂಪುಟದಲ್ಲಿ ಇದ್ದಂತಾಗುತ್ತದೆ.

13 ಜಿಲ್ಲೆಗಳಿಂದ ಯಾರೂ ಮಂತ್ರಿಗಳಿಲ್ಲ
ಆದರೆ, ಈ ಬಾರಿ ಸಂಪುಟದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವುದು ಗಮನಾರ್ಹ ವಿಚಾರ. ಮೈಸೂರು, ಬಳ್ಳಾರಿ, ದಾವಣಗೆರೆ, ಹಾಸನ, ಕಲಬುರಗಿ, ರಾಯಚೂರು, ಯಾದಗಿರಿ, ಕೋಲಾರ, ರಾಮನಗರ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ವಿಜಯಪುರ ಜಿಲ್ಲೆಗಳಿಗೆ ಯಾವುದೇ ಸಚಿವ ಸ್ಥಾನ ಲಭ್ಯವಾಗಿಲ್ಲ.

ಯಡಿಯೂರಪ್ಪ ಬಳಗದ ಏಳು ಜನರು ಸಂಪುಟದಿಂದ ದೂರ
ಅಂತೆಯೇ, ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿದ್ದ 7 ಜನರನ್ನು ದೂರವಿಡಲಾಗಿದ್ದು, ಅವರೆಲ್ಲರಿಗೂ ಸಚಿವ ಸ್ಥಾನ ಕೈತಪ್ಪಿ ಹೋಗಿದೆ. ಕಳೆದ ಬಾರಿ ಉಪಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿಗೂ ಅವಕಾಶ ತಪ್ಪಿಹೋಗಿದ್ದು, ಜಗದೀಶ್ ಶೆಟ್ಟರ್, ಸಿ.ಪಿ.ಯೋಗೀಶ್ವರ್, ಆರ್. ಶಂಕರ್, ಅರವಿಂದ ಲಿಂಬಾವಳಿ, ಶ್ರೀಮಂತ ಪಾಟೀಲ್, ಸುರೇಶ್ ಕುಮಾರ್ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.

ಇದನ್ನೂ ಓದಿ: ಆ ಕಡೆ ಸಿಎಂ ಬೊಮ್ಮಾಯಿ ಸಚಿವ ಸಂಪುಟ ಫೈನಲ್ ಆಗುತ್ತಿದ್ದಂತೆ, ಈ ಕಡೆ ಯೂಟರ್ನ್ ಹೊಡೆದ ಆನಂದ್ ಮಾಮನಿ!

(Complete Report on Basavaraj Bommai Cabinet Karnataka Govt BJP New Ministers)

Published On - 4:41 pm, Wed, 4 August 21