BS Yediyurappa: ಬಿಎಸ್ ಯಡಿಯೂರಪ್ಪ ಮನೆ ಮೇಲಿನ ದಾಳಿ ಹಿಂದೆ ‘ಸಂತೋಷ ಕೂಟ’ದ ಕೈವಾಡ; ಕಾಂಗ್ರೆಸ್
ಒಳಮೀಸಲಾತಿ ಜಾರಿ ವಿರುದ್ಧ ಬಂಜಾರ ಸಮುದಾಯದವರು ನಡೆಸಿದ್ದ ಪ್ರತಿಭಟನೆ ವೇಳೆ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಅವರ ಶಿಕಾರಿಪುರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದ್ದರ ಹಿಂದೆ ‘ಸಂತೋಷ ಕೂಟ’ದ ಕೈವಾಡ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬೆಂಗಳೂರು: ಒಳಮೀಸಲಾತಿ ಜಾರಿ ವಿರುದ್ಧ ಬಂಜಾರ ಸಮುದಾಯದವರು ನಡೆಸಿದ್ದ ಪ್ರತಿಭಟನೆ ವೇಳೆ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಅವರ ಶಿಕಾರಿಪುರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದ್ದರ ಹಿಂದೆ ‘ಸಂತೋಷ ಕೂಟ’ದ ಕೈವಾಡ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆ ಮೂಲಕ ನೇರವಾಗಿ ಹೆಸರು ಉಲ್ಲೇಖಿಸಿದೆ ಬಿ.ಎಲ್. ಸಂತೋಷ್ ವಿರುದ್ಧ ಆರೋಪ ಮಾಡಿದೆ. ಬಿಎಸ್ವೈ ಅವರು ಮುಖ್ಯಮಂತ್ರಿಯಲ್ಲ, ಸರ್ಕಾರದ ನಿರ್ದಾರಗಳಲ್ಲಿ ಅವರ ಪಾತ್ರವಿಲ್ಲ, ಆದರೂ ಸರ್ಕಾರದ ಅವಾಂತರಕ್ಕೆ ಅವರ ಮನೆ ಮೇಲೆ ದಾಳಿ ಆಗಿದ್ದೇಕೆ? ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದ್ದೇಕೆ ಎನ್ನುವುದೇ ಯಕ್ಷಪ್ರಶ್ನೆ. ಅವರ ಮನೆ ಮೇಲಿನ ದಾಳಿಯ ಹಿಂದೆ ಬಿಜೆಪಿಯ ‘ಸಂತೋಷ ಕೂಟ’ದ ಕೈವಾಡ ಇರುವುದು ನಿಶ್ಚಿತ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಾನೂನು ಸುವ್ಯವಸ್ಥೆ ಉಲ್ಲಂಘನೆಯ ಪ್ರಕರಣಗಳು, ಗಲಭೆ, ಘರ್ಷಣೆಗಳೆಲ್ಲದರ ಬೀಜ ಬಿತ್ತುವುದು ಗೃಹಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲೇ ಏಕೆ? ತನ್ನ ತವರಿನಲ್ಲಿ, ಅದರಲ್ಲೂ ಮಾಜಿ ಸಿಎಂ ಮನೆ ಬಳಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರದ್ದು ಹೊಣೆಗೇಡಿತನವೋ ಅಥವಾ ‘ಸಂತೋಷ ಕೂಟ’ವನ್ನು ಮೆಚ್ಚಿಸುವ ಷಡ್ಯಂತ್ರವೋ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಗೃಹಸಚಿವರ ತವರು ಜಿಲ್ಲೆಯಲ್ಲಿ ಮಾಜಿ ಸಿಎಂ ಮನೆಗೆ ರಕ್ಷಣೆ ಇಲ್ಲವೆಂದರೆ ಏನರ್ಥ. ಗುಪ್ತಚರ ಇಲಾಖೆ ಯಾವ ಬಿಲದಲ್ಲಿ ಗೆಣಸನ್ನು ಹುಡುಕುತ್ತಿತ್ತು? ಆರಗ ಜ್ಞಾನೇಂದ್ರ ಅವರೇ, ಇದು ಕಾನೂನು ಸುವ್ಯವಸ್ಥೆಯ ವೈಫಲ್ಯವೇ ಅಥವಾ ಷಡ್ಯಂತ್ರವೇ? ಮೀಸಲಾತಿ ಅವಾಂತರಕ್ಕೆ ಹೊಣೆಗಾರರಲ್ಲದ ಬಿಎಸ್ವೈ ಮನೆ ಮೇಲೆ ದಾಳಿ ಮಾಡಿದ್ದು ಯಾರ ‘ಸಂತೋಷ’ದ ಕಾರಣಕ್ಕೆ? ಎಂದು ಮತ್ತೊಂದು ಟ್ವೀಟ್ನಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ.
ಇದನ್ನೂ ಓದಿ: BS Yediyurappa: ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ವಿರೋಧ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ
ಬಿಎಸ್ವೈ ನಿವಾಸದ ಮೇಲಿನ ದಾಳಿ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದರು. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು, ಬಿಎಸ್ವೈ ಮನೆ ಮೇಲೆ ಕಲ್ಲುತೂರಾಟ ಪ್ರಕರಣ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಸ್ಫೋಟಗೊಂಡಿರುವದರ ಸೂಚಕ. ಬಿಎಸ್ ಯಡಿಯೂರಪ್ಪ ಅವರನ್ನು ಮುಗಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
BSY ಅವರು ಮುಖ್ಯಮಂತ್ರಿಯಲ್ಲ, ಸರ್ಕಾರದ ನಿರ್ದಾರಗಳಲ್ಲಿ ಅವರ ಪಾತ್ರವಿಲ್ಲ, ಆದರೂ ಸರ್ಕಾರದ ಅವಾಂತರಕ್ಕೆ BSY ಮನೆ ಮೇಲೆ ದಾಳಿ ಆಗಿದ್ದೇಕೆ?
ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದ್ದೇಕೆ ಎನ್ನುವುದೇ ಯಕ್ಷಪ್ರಶ್ನೆ.
BSY ಮನೆಯ ಮೇಲಿನ ದಾಳಿಯ ಹಿಂದೆ ಬಿಜೆಪಿಯ “ಸಂತೋಷ ಕೂಟ”ದ ಕೈವಾಡ ಇರುವುದು ನಿಶ್ಚಿತ.
— Karnataka Congress (@INCKarnataka) March 28, 2023
ಪ್ರತಿಭಟನೆ ವೇಳೆ ಗಲಭೆ ಆಗಬಹುದೆಂಬ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಇತ್ತು. ಈ ವಿಷಯ ಶಿಕಾರಿಪುರ ಪೊಲೀಸರಿಗೆ ತಿಳಿದಿದ್ದರೂ, ಪ್ರತಿಭಟನೆಯನ್ನು ಹಗುರವಾಗಿ ಪರಿಗಣಿಸಿದ್ದು, ಮತ್ತು ನಿರ್ಲಕ್ಷ್ಯ ವಹಿಸಿದ್ದೇ ಬಿಎಸ್ವೈ ಮನೆ ಮೇಲೆ ಕಲ್ಲುತೂರಾಟಕ್ಕೆ ಕಾರಣ ಎಂಬುದು ಬಹಿರಂಗವಾಗಿದೆ. ಈ ಮಧ್ಯೆ, 10 ಮಂದಿ ಆರೋಪಿಗಳನ್ನು ಶಿಕಾರಿಪುರ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 27 ರಂದು ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಪ್ರತಿಭಟನೆ ನಡೆದಿತ್ತು. ಆ ಸಂದರ್ಭದಲ್ಲಿ ಶಿಕಾರಿಪುರ ಪಟ್ಟಣದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಮೈತ್ರಿ ನಿವಾಸದ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಪ್ರತಿಭಟನಾಕಾರರು ಯಡಿಯೂರಪ್ಪ ಮನೆಯ ಕಿಟಕಿ ಗಾಜು ಒಡೆದು ಹಾಕಿದ್ದರು. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟ ನೂಕಾಟ ಉಂಟಾಗಿ, ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ತೂರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Tue, 28 March 23