ಕಾಂಗ್ರೆಸ್-ಜೆಡಿಎಸ್​ ಟ್ವೀಟ್ ವಾರ್: ಕುಮಾರಸ್ವಾಮಿ YST ಆರೋಪಕ್ಕೆ KST ಬಾಣ ಬಿಟ್ಟ ಕೈ ಪಡೆ

ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ವರ್ಗಾವಣೆ ದಂಧೆ ಬಾಂಬ್ ಸಿಡಿಸಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್​ ಹಾಗು ಜೆಡಿಎಸ್​ ನಡುವೆ ವೈಎಸ್​ಟಿ, ಕೆಎಸ್​ಟಿ ವಾಕ್ಸಮರ ಶುರುವಾಗಿದೆ.

ಕಾಂಗ್ರೆಸ್-ಜೆಡಿಎಸ್​ ಟ್ವೀಟ್ ವಾರ್: ಕುಮಾರಸ್ವಾಮಿ YST ಆರೋಪಕ್ಕೆ KST ಬಾಣ ಬಿಟ್ಟ ಕೈ ಪಡೆ
ಜೆಡಿಎಸ್​​, ಕಾಂಗ್ರೆಸ್​
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jul 05, 2023 | 7:40 AM

ಬೆಂಗಳೂರು: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಬಾಂಬ್ ಸಿಡಿಸಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಆದ್ರೆ, ಈ ವರ್ಗಾವಣೆ ದಂಧೆ ಆರೋಪಕ್ಕೆ ಕಾಂಗ್ರೆಸ್(COngress) ಕೆರಳಿ ಕೆಂಡವಾಗಿದ್ದು, ದಳಪತಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರವೂ ತಾರಕಕ್ಕೇರಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಕಳೆದ ನಾಲ್ಕೈದು ದಿನಗಳಿಂದ ವರ್ಗಾವಣೆ ದಂಧೆ ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಸರ್ಕಾರಕ್ಕೆ ದಮ್ಮು ತಾಕತ್ತಿನ ಸವಾಲ್ ಎಸೆದಿದ್ದಾರೆ. ಮುಖ್ಯವಾಗಿ ಜಿಎಸ್​ಟಿ ಜೊತೆಗೆ ವೈಎಸ್​ಟಿ(ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್​) ಸಂಗ್ರಹವಾಗುತ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಯತೀಂದ್ರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್​ ಸಹ ಕುಮಾರಸ್ವಾಮಿ ವಿರುದ್ಧ ಟ್ವೀಟ್ ವಾರ್ ನಡೆಸಿದ್ದು, ವೈಎಸ್​ಟಿಗೆ ಪ್ರತಿಯಾಗಿ ಕೆಎಸ್​ಟಿ ಬಾಣ ಬಿಟ್ಟಿದೆ.

ಇದನ್ನೂ ಓದಿ: ದಾಖಲೆ ಕೊಡ್ತಿನಿ ತನಿಖೆ ಮಾಡೋ ಧಮ್ ನಿಮ್ಗೆ ಇದ್ಯಾ; ಕಾಂಗ್ರೆಸ್​ ಸರ್ಕಾರಕ್ಕೆ ಕುಮಾರಸ್ವಾಮಿ ಸವಾಲ್

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ವೆಸ್ಟ್​ ಎಂಡ್​​ ಹೋಟೆಲ್​ನಲ್ಲಿ 1 ದಿನದ ಬಾಡಿಗೆ ಎಷ್ಟು ಕುಮಾರಸ್ವಾಮಿಯವರೇ? ಅಲ್ಲಿ ಖಾಯಂ ಅಡ್ಡ ತೆರೆದಿದ್ದೀರಿ ಅದಕ್ಕೆ ಎಷ್ಟು ಕೋಟಿ ಸುರಿದಿದ್ದೀರಿ? ಹೋಟೆಲ್​ಗೆ ಜಮೀನಿನಲ್ಲಿ ಉಳುಮೆ ಮಾಡಿ ಬಾಡಿಗೆ ಕಟ್ಟುತ್ತಿದ್ದೀರಾ? ಅಥವಾ ‘ಕೆಎಸ್​ಟಿ’ ಸಂಗ್ರಹದ ಹಣ ಬಳಸುತ್ತಿದ್ದೀರಾ? ‘KST ಕುಮಾರ್’ ಅವರು ಉತ್ತರಿಸಬೇಕು ಎಂದು ಕಾಂಗ್ರೆಸ್ ಟ್ವೀಟ್​ ಪರೋಕ್ಷವಾಗಿ ಕುಮಾರಸ್ವಾಮಿ ಸರ್ವಿಸ್ ಟ್ಯಾಕ್ಸ್ ಎಂದು ತಿರುಗೇಟು ನೀಡಿದೆ.

ಇನ್ನು ಕಾಂಗ್ರೆಸ್​ ಕೆಎಸ್​ಟಿ ಟ್ವೀಟ್​ಗೆ ಜೆಡಿಎಸ್​ ಸಹ ಸರಣಿ ಟ್ವೀಟ್​ ಮಾಡಿದ್ದು, ವೆಸ್ಟ್‌ ಎಂಡ್‌ ಲೆಕ್ಕ ಇರಲಿ, ‘ ಸಿಎಂ ಟಿಪ್ಪಣಿ ಬಿಕರಿ’ಗೆ ಲೆಕ್ಕ ಇಡಿ. ಒಂದು ಎಸಿ ಹುದ್ದೆ, 3 ಟಿಪ್ಪಣಿ. ಇದ್ಯಾವ ಸೀಮೆ ಅರ್ಥಶಾಸ್ತ್ರ? ಕೌಟಿಲ್ಯನೂ ಬೆಚ್ಚಿಬೀಳುವ ಆಡಳಿತ ಹಾಗೂ ರಾಜನೀತಿ. ಈ ಟಿಪ್ಪಣಿಗಳ ಹಣ ಪಕ್ಷದ ಮಂಡಿಗೋ ಅಥವಾ #YstTax ಹುಂಡಿಗೋ? ಇಲ್ಲೇ ಸಾಕ್ಷ್ಯ ಇದೆ. ಪಾಪ.. ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ ಟಾಂಗ್ ಕೊಟ್ಟಿದೆ.

ವೆಸ್ಟ್‌ʼಎಂಡ್‌ ಬಾಡಿಗೆ ಮಾತಿರಲಿ; ಲುಲು ಮಾಲು ವಿಷಯಕ್ಕೆ ಬರೋಣ. ಹೊಲ ಉತ್ತಿ, ಬೀಜ ಬಿತ್ತಿ ಬೆವರಿನ ಹೊಳೆ ಹರಿಸಿ ತೆಗೆದ ಫಸಲಿಗೆ ಲುಲು ಮಾಡಬಹುದಾ? ಒಂದು ವೇಳೆ ಮಾಡಬಹುದಾದರೆ, ನಿಮ್ಮ ʼಲುಲುಕುಮಾರ್ʼಗಿಂತ ಬೆಸ್ಟ್‌ ಎಕನಾಮಿಸ್ಟ್‌ ಇನ್ನೊಬ್ಬರಿಲ್ಲ! ಹಾಗಿದ್ದರೆ, ಅವರನ್ನೇ ವಿತ್ತಮಂತ್ರಿ ಮಾಡಬಹುದಿತ್ತಲ್ಲ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಕಾಲೆಳೆದಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು #YstTax ಬಗ್ಗೆ ಹೇಳಿ, ʼಕಾಸಿಗಾಗಿ ಹುದ್ದೆʼ #CashForPosting ದಂಧೆಯನ್ನು ದಾಖಲೆ ಸಮೇತ ಬಿಚ್ಚಿಟ್ಟರೂ ಆ ಅಸಹ್ಯ ತನ್ನದಲ್ಲ ಎನ್ನುವ ‘ ಅವಿವೇಕ ‘ ಕಾಂಗ್ರೆಸ್ ಪಕ್ಷದ್ದು. ಆ ಅವಿವೇಕವನ್ನು ಮುಚ್ಚಿಕೊಳ್ಳಲು ಈಗ ವೆಸ್ಟ್ʼಎಂಡ್ ಎನ್ನುವ ಸವಕಲು ವಿಷಯ ನೆನಪು ಮಾಡಿಕೊಂಡಿದೆ. ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿ, ಅದು ಮೂಲತಃ ಸುಳ್ಳುಗಳ ವಾಚಾಳಿ. ಮುಖದ ಮೇಲೆ ಕೊಚ್ಚೆ ಹಾಕಿಕೊಂಡವನು ಆ ಗಲೀಜು ಅನ್ಯರ ಕಣ್ಣಿಗೆ ಬೀಳದಿರಲೆಂದು ಇನ್ನೊಬ್ಬರ ಮೇಲೆ ಅದನ್ನೇ ಎರಚಿ ಕುಣಿದನಂತೆ! ಹಂಗಿದೆ ನೋಡಿ ʼಕಮೀಷನ್ ಕಾಂಗ್ರೆಸ್ʼನ ‘ ಹೊಸ ವರಸೆ ಮತ್ತು ಹೊಸ ಕಸವರಿಕೆ ಎಂದು ಕಾಂಗ್ರೆಸ್​ ವಿರುದ್ಧ ಜೆಡಿಎಸ್​ ಸರಣಿ ಟ್ವೀಟ್​ ಮೂಲಕ ಕಿಡಿಕಾರಿದೆ.

ಇನ್ನಷ್ಟು  ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ