ಬೆಂಗಳೂರು, (ಫೆಬ್ರವರಿ 14): ಕರ್ನಾಟಕ ರಾಜ್ಯಸಭಾ ಚುನಾವಣೆಗೆ(Karnataka Rajya Sabha Election 2024) ಕಾಂಗ್ರೆಸ್ (Congress) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು ಮೂರು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಒಂದು ದಿನ (ಫೆಬ್ರವರಿ 15) ಬಾಕಿ ಇರುವಾಗಲೇ ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಇಬ್ಬರಿಗೆ ಮತ್ತೆ ಅವಕಾಶ ನೀಡಿದೆ. ಇನ್ನೊಂದು ಸ್ಥಾನಕ್ಕೆ ಹೊಸ ಮುಖಕ್ಕೆ ಮಣೆ ಹಾಕಿದೆ. ಜಿ.ಸಿ.ಚಂದ್ರಶೇಖರ್ ಮತ್ತು ನಾಸೀರ್ ಹುಸೇನ್ ಅವರಿಗೆ ಕಾಂಗ್ರೆಸ್ ಮತ್ತೊಮ್ಮೆ ಟಿಕೆಟ್ ನೀಡಿದೆ. ಇನ್ನು ಎಐಸಿಸಿ ಖಜಾಂಚಿಯಾಗಿರುವ ದೆಹಲಿ ಮೂಲದ ಅಜಯ್ ಮಕೇನ್ ಅವರಿಗೆ ಕರ್ನಾಟಕ ರಾಜ್ಯಸಭಾ ಟಿಕೆಟ್ ನೀಡಿರುವುದು ಅಚ್ಚರಿ ಮೂಡಿಸಿದೆ.
ಇನ್ನು ತೆಲಂಗಾಣದಲ್ಲಿ ರೇಣುಕಾ ಚೌಧರಿ, ಅನಿಲ್‌ಕುಮಾರ್ ಯಾದವ್‌ಗೆ ಟಿಕೆಟ್ ಸಿಕ್ಕರೆ, ಮಧ್ಯಪ್ರದೇಶದಲ್ಲಿ ಅಶೋಕ್ ಸಿಂಗ್‌ಗೆ ಟಿಕೆಟ್ ಘೋಷಿಸಲಾಗಿದೆ. ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಬಾಗಲಕೋಟೆ ಮೂಲದ ಸಂಘ ಪರಿವಾರದ ಕಟ್ಟಾಳು ನಾರಾಯಣ ಬಾಂಡಗೆ ಟಿಕೆಟ್ ಘೋಷಿಸಿದೆ.
ಇದನ್ನೂ ಓದಿ: Rajya Sabha polls: ಬಿಜೆಪಿಗೆ ಸೇರುತ್ತಿದ್ದಂತೆ ಅಶೋಕ್ ಚವಾಣ್ಗೆ ರಾಜ್ಯಸಭೆ ಟಿಕೆಟ್
ನಾಮಪತ್ರ ಸಲ್ಲಿಸಲು ನಾಳೆ(ಫೆ.15) ಕೊನೆ ದಿನವಾಗಿದ್ದರಿಂದ ಕಾಂಗ್ರೆಸ್ನಿಂದ ಈ ಮೂವರು ನಾಯಕರು ನಾಮಪತ್ರ ಸಲ್ಲಿಸಲಿದ್ದಾರೆ. ಇನ್ನು ದೆಹಲಿ ಮೂಲದ ಅಜಯ್ ಮಾಕೆನ್ ಅವರಿಗೆ ಕರ್ನಾಟಕ ರಾಜ್ಯಸಭಾ ಟಿಕೆಟ್ ನೀಡಿರುವುದರಿಂದ ಅವರು ಇಂದು(ಫೆ.14) ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು. ನಾಳೆ ಬೆಳಗ್ಗೆಅಜಯ್ ಮಾಕೆನ್, ಜಿಸಿ ಚಂದ್ರಶೇಖರ ಹಾಗೂ ನಾಸಿರ್ ಹುಸೇನ್ ಅವರು ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಕಾಂಗ್ರೆಸ್ಸಿನಿಂದ ಮೂವರು, ಬಿಜೆಪಿಯಿಂದ ಒಬ್ಬರು ನಿರಾಯಾಸವಾಗಿ ಈಗಿನ ಸಂಖ್ಯಾಬಲದ ಆಧಾರದ ಮೇಲೆ ಗೆಲ್ಲಬಹುದಾಗಿದೆ. ಅದರಂತೆ ಕಾಂಗ್ರೆಸ್ ಮೂವರು ಅಭ್ಯರ್ಥಿಯನ್ನು ಘೋಷಣೆ ಮಾಡಿದರೆ, ಬಿಜೆಪಿ ತನ್ನ ಪಾಲಿನ ಒಂದು ಸ್ಥಾನಕ್ಕೆ ಓರ್ವ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಹೀಗಾಗಿ ಕಾಂಗ್ರೆಸ್ನ ಮೂವರು ಹಾಗೂ ಬಿಜೆಪಿಯ ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಒಂದು ವೇಳೆ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಚುನಾವಣೆ ನಡೆಯುತ್ತಿತ್ತು. ರಾಜ್ಯಸಭಾ ಚುನಾವಣೆಯಲ್ಲೂ ಅಡ್ಡ ಮತದಾನ ನಡೆದು ಹೈಡ್ರಾಮಾ ನಡೆದ ಬೇಕಾದಷ್ಟು ಉದಾಹರಣೆಗಳಿವೆ. ಆದ್ರೆ, ಈ ಕಾಂಗ್ರೆಸ್ ಹಾಗೂ ಬಿಜೆಪಿ ಹೆಚ್ಚುವರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.
ಕೇವಲ ಹತ್ತೊಂಬತ್ತು ಶಾಸಕರನ್ನು ಹೊಂದಿರುವುದರಿಂದ ಜೆಡಿಎಸ್ ಈ ಸಂಖ್ಯಾಬಲದ ಆಟದಲ್ಲಿಲ್ಲ. ಆದ್ರೆ, ಬಿಜೆಪಿ ಜೆಡಿಎಸ್ ಮೈತ್ರಿ ಆಗಿರುವುದರಿಂದ ಎರಡನೇ ಅಭ್ಯರ್ಥಿಯನ್ನು ಇಳಿಸುವ ಬಗ್ಗೆ ಎರಡೂ ಪಕ್ಷಗಳ ನಾಯಕರು ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಕುಪೇಂದ್ರ ರೆಡ್ಡಿ, ಫಾರೂಕ್, ಉದ್ಯಮಿ ಪ್ರಕಾಶ್ ಶೆಟ್ಟಿಯವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು. ಆದ್ರೆ, ಅಂತಿಮವಾಗಿ ಬಿಜೆಪಿ ಓರ್ವ ಅಭ್ಯರ್ಥಿಯನ್ನೇ ಘೋಷಣೆ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:15 pm, Wed, 14 February 24