
ಬೆಂಗಳೂರು, ಮಾರ್ಚ್ 19: ಲೋಕಸಭೆ ಚುನಾವಣೆಗೆ (Lok Sabha Elections) ದಿನಾಂಕ ಪ್ರಕಟವಾದ ಬೆನ್ನಲ್ಲೇ ರಾಜಕೀಯ ಪಕ್ಷಗಳಿಂದ ಪ್ರಚಾರ ಭರದಿಂದ ಸಾಗುತ್ತಿದೆ. ಆದರೆ, ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿಗಳ ಆಯ್ಕೆ ಇನ್ನೂ ಕಗ್ಗಂಟಾಗಿ ಉಳಿದಿದೆ. ಮೊದಲ ಹಂತದಲ್ಲಿ 95 ಅಭ್ಯರ್ಥಿಗಳನ್ನ ಘೋಷಣೆ ಮಾಡಿರುವ ಕಾಂಗ್ರೆಸ್ ಇದೀಗ ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ದೆಹಲಿಯಲ್ಲಿ ಸಭೆಗಳ ಮೇಲೆ ಸಭೆ ನಡೆಸುತ್ತಿದೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಮಾಲೋಚನಾ ಸಭೆಗಳು ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ದೆಹಲಿಗೆ ತೆರಳಲಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಸಿಎಂ ಕೋಲಾರ ಅಭ್ಯರ್ಥಿ ಆಯ್ಕೆ ಬಗ್ಗೆ ಸಭೆ ನಡೆಸಿದ್ದಾರೆ. ಈ ವೇಳೆ ದಲಿತ ಬಲಗೈ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸುವಂತೆ ರಮೇಶ್ ಕುಮಾರ್ ಹಾಗೂ ತಂಡ ಅಭಿಪ್ರಾಯ ಇಟ್ಟಿದೆ. ಈ ಮೂಲಕ ದಲಿತ ಎಡಗೈ ಸಮುದಾಯದ ಕೆ.ಹೆಚ್.ಮುನಿಯಪ್ಪ ಮತ್ತವರ ಕುಟುಂಬದವರಿಗೆ ಟಿಕೆಟ್ ನೀಡದಂತೆ ಪರೋಕ್ಷವಾಗಿ ಹೇಳಿದೆ. ಅತ್ತ ಸ್ಪರ್ಧೆಗೆ ನಿರಾಸಕ್ತಿ ತೋರಿರೋ ಮುನಿಯಪ್ಪ, ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿಸೋಕೆ ಯತ್ನಿಸ್ತಿದ್ದಾರೆ. ಇದನ್ನ ಅರಿತೇ ರಮೇಶ್ ಕುಮಾರ್ ಅಭಿಪ್ರಾಯ ಮಂಡಿಸಿದ್ದಾರೆ. ಅತ್ತ ಕೆ.ಹೆಚ್.ಮುನಿಯಪ್ಪಗೆ ಕೈ ಹೈಕಮಾಂಡ್ ಬುಲಾವ್ ನೀಡಿದ್ದು, ನಿನ್ನೆಯೇ ದೆಹಲಿಗೆ ತೆರಳಿದ್ದಾರೆ.
ಇತ್ತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಲೇಔಟ್ ಕೃಷ್ಣಪ್ಪ ಪುತ್ರ ಪ್ರಿಯಾಕೃಷ್ಣರನ್ನ ಕಣಕ್ಕಿಳಿಸಲು ಕೈ ನಾಯಕರು ಸರ್ಕಸ್ ನಡೆಸಿದ್ದಾರೆ. ನಾಲ್ಕೈದು ದಿನಗಳ ಹಿಂದೆ ಅವರ ನಿವಾಸಕ್ಕೆ ತೆರಳಿದ್ದ ಸಚಿವರು, ಮನವೊಲಿಸಲು ಮುಂದಾಗಿದ್ದರು. ವಿಶೇಷ ಅಂದ್ರೆ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕೂಡ ಮಾತುಕತೆ ನಡೆಸಿದ್ದಾರೆ.
ಇನ್ನು ಬಾಗಲಕೋಟೆ ಟಿಕೆಟ್ನ್ನು ವೀಣಾ ಕಾಶಪ್ಪನವರ್ಗೆ ಕೊಡುವಂತೆ ಸಿಎಂ ನಿವಾಸದ ಬಳಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಗೃಹ ಕಚೇರಿ ಕೃಷ್ಣಾ ಬಳಿ ವೀಣಾ ಬೆಂಬಲಿಗರು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಎರಡು ಸೀಟಿಗಾಗಿ ಇಷ್ಟೆಲ್ಲಾ ಪ್ರಯತ್ನ ಪಡೆಬೇಕಾ, ಹೊಂದಾಣಿಕೆ ಬೇಕಾ? ಬಿಜೆಪಿ ನಡೆಗೆ ಎಚ್ಡಿ ಕುಮಾರಸ್ವಾಮಿ ಬೇಸರ
ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆಯಾಗಿರುವ ವೀಣಾ ಕಾಶಪ್ಪನವರ್, ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸುವ ಚಿಂತನೆಯಲ್ಲಿದ್ದಾರೆ. ಆದ್ರೆ ಬಾಗಲಕೋಟೆಯಿಂದ ಸಂಯುಕ್ತಾ ಪಾಟೀಲ್ ಹೆಸರು ಕೇಳಿಬಂದಿದೆ. ಸದ್ಯ ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್ಗಾಗಿ ಭಾರಿ ಪೈಪೋಟಿ ನಡೆಯುತ್ತಿದ್ದು, ಈ ಬಾರಿ ಯಾರೆಗೆಲ್ಲಾ ಅವಕಾಶ ಸಿಗಲಿದೆ ಅನ್ನೋದು ಕಾಂಗ್ರೆಸ್ ಸಭೆ ಬಳಿಕವೇ ಅಂತಿಮವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ