ನವದೆಹಲಿ: 2014ರ ಬಳಿಕ ರಾಜಕೀಯ ಪಕ್ಷಗಳ ಚುನಾವಣಾ ಪರಿಭಾಷೆ ಬದಲಾಗಿದೆ. ರಾಷ್ಟ್ರರಾಜಕಾರಣಕ್ಕೆ ಮೋದಿ ಪ್ರವೇಶದ ಬಳಿಕವಂತೂ ಹಿಂದುತ್ವ (Hindutva) ರಾಜಕೀಯ ಕೇಂದ್ರ ಸ್ಥಾನ ಪಡೆದಿದೆ. ಹಲವು ವರ್ಷಗಳಿಂದ ಜಾತ್ಯತೀತತೆಯ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ (Congress) ಈಗ ತನ್ನ ಸಿದ್ಧಾಂತಗಳನ್ನು ಬದಲಿಸಿಕೊಳ್ಳುವ ಪ್ರಯತ್ನ ಶುರುಮಾಡಿದೆ. ದೇಶದ ಜನಸಂಖ್ಯೆಯ ಶೇ 80 ರಷ್ಟಿರುವ ಹಿಂದೂಗಳು ನಿಧಾನವಾಗಿ ಕಾಂಗ್ರೆಸ್ ನಿಂದ ದೂರ ಸರಿಯುತ್ತಿದ್ದಾರೆ ಎನ್ನುವ ಭಾವನೆಯಿಂದ ಹೊರಬರಲು ಯತ್ನಿಸುತ್ತಿದೆ. ಭಾರತೀಯ ಜನತಾ ಪಕ್ಷ ಹಿಂದುತ್ವ ರಾಜಕಾರಣಕ್ಕೆ ಹತ್ತಿರವಾಗುತ್ತಿದೆ ಎಂದು ಕಾಂಗ್ರೆಸ್ ಅರಿತುಕೊಂಡಿದೆ. ಸೆಕ್ಯುಲರಿಸಂ ಹೆಸರಲ್ಲಿ ಅಲ್ಪಸಂಖ್ಯಾತರಿಗೆ ಒಲವು ತೋರಿ ಬಹುಸಂಖ್ಯಾತರನ್ನು ಕಡೆಗಣಿಸುತ್ತಿದೆ ಎಂಬ ಟೀಕೆ ಕಾಂಗ್ರೆಸ್ ವಿರುದ್ಧ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಆರೋಪದಿಂದಲೇ ಒಂದು ಕಾಲದಲ್ಲಿ ಬಲಿಷ್ಠ ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಇಂದು ಸಂಸತ್ತಿನಲ್ಲಿ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ ಎನ್ನುತ್ತಾರೆ. ಕಾಂಗ್ರೆಸ್ ನಿಂದ ದೂರವಿರುವ ಬಹುಸಂಖ್ಯಾತ ಹಿಂದೂಗಳನ್ನು ಸಂತುಷ್ಟಗೊಳಿಸಲು ಪಕ್ಷ ಈಗ ಹಿಂದೂ ಧರ್ಮದತ್ತ ವಾಲುತ್ತಿದೆ. ಅಲ್ಲದೆ, ಬಿಜೆಪಿ ಮಾದರಿಯ ಹಿಂದುತ್ವ ರಾಜಕಾರಣಕ್ಕಿಂತ ನಮ್ಮ ಹಿಂದೂ ರಾಜಕಾರಣ ಬೇರೆ ಎಂದು ಕಾಂಗ್ರೆಸ್ ಹೇಳತೊಡಗಿದೆ.
ಹಿಂದುತ್ವದ ಪ್ರಭಾವ ಪ್ರಬಲವಾಗಿರುವ ಉತ್ತರ ಮತ್ತು ಮಧ್ಯ ಭಾರತದ ರಾಜ್ಯಗಳಲ್ಲಿ ಕಾಂಗ್ರೆಸ್ ‘ಮೃದು ಹಿಂದುತ್ವ’ ನೀತಿಗಳನ್ನು ಅನುಸರಿಸುತ್ತಿದೆ. ಈ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹಿಂದೂ ಮತದಾರರನ್ನು ಓಲೈಸಲು ಹಿಂದುತ್ವದ ಪರವಾದ ಯೋಜನೆಗಳೊಂದಿಗೆ ಕಾಂಗ್ರೆಸ್ ಮುನ್ನಡೆಯುತ್ತಿದೆ. ಹೀಗಾಗಿ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಮತ್ತೆ ಅಧಿಕಾರ ಹಿಡಿಯಲು ಮತ್ತು ಮಧ್ಯಪ್ರದೇಶದಲ್ಲಿ ಕಳೆದುಹೋದ ಅಧಿಕಾರವನ್ನು ಮರಳಿ ಪಡೆಯಲು ಹವಣಿಸುತ್ತಿದೆ.
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿವಿಧ ಸಮುದಾಯಗಳಿಂದ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಜನಸಂಖ್ಯೆಯ ಸುಮಾರು ಶೇ.5.65 ರಷ್ಟಿರುವ ರಜಪೂತ ಸಮುದಾಯವನ್ನು ತೃಪ್ತಿಪಡಿಸುವ ಉದ್ದೇಶದಿಂದ ‘ವೀರ್ ಶಿರೋಮಣಿ ಮಹಾರಾಣಾ ಪ್ರತಾಪ್ ಬೋರ್ಡ್’ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ. ರಾಜ್ಯದ ಜನಸಂಖ್ಯೆಯ ಶೇ.2ರಷ್ಟು ಇರುವ ಯಾದವ ಸಮುದಾಯವನ್ನು ಸಮಾಧಾನಪಡಿಸಲು ‘ಶ್ರೀಕೃಷ್ಣ ಬೋರೆ’ ಸ್ಥಾಪಿಸುವುದಾಗಿಯೂ ಗೆಹ್ಲೋಟ್ ಘೋಷಣೆ ಮಾಡಿದ್ದಾರೆ. ಅಲ್ಲದೆ ಜಾಟ್‌ಗಳು, ಧೋಬಿಗಳು ಮತ್ತು ಸೈನಾಗಳು ಸೇರಿದಂತೆ ಇತರ ಸಮುದಾಯಗಳಿಗೆ ಈಗಾಗಲೇ ಹಲವಾರು ಮಂಡಳಿಗಳನ್ನು ರಚಿಸಲಾಗಿದೆ. ಮತ್ತೊಂದೆಡೆ, ರಾಜ್ಯದಾದ್ಯಂತ ವಿವಿಧ ದೇವಾಲಯಗಳಲ್ಲಿ ಸೇವೆ ಸಲ್ಲಿಸಲು SC, ST ಮತ್ತು OBC ಸಮುದಾಯದ 16 ಮಹಿಳಾ ಅರ್ಚಕರನ್ನು ಸಿಎಂ ಗೆಹ್ಲೋಟ್ ನೇಮಿಸಿದ್ದಾರೆ. ಈ ನಿರ್ಧಾರವನ್ನು ಹಿಂಪಡೆಯಲು ಬ್ರಾಹ್ಮಣ ಸಮುದಾಯಗಳ ವಿರೋಧವಿದ್ದರೂ ಗೆಹ್ಲೋಟ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಧೋರಣೆ ಹೀಗಿದ್ದರೆ, ಮಧ್ಯಪ್ರದೇಶದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಹಿಂದುತ್ವ ಗುಂಪು ಬಜರಂಗ ಸೇನೆಯನ್ನು ತನ್ನ ತೆಕ್ಕೆಗೆ ಕಾಂಗ್ರೆಸ್ ಸೇರಿಸಿಕೊಂಡಿದೆ. ಮಾಜಿ ಸಿಎಂ ಕಮಲ್ ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಮೃದು ಹಿಂದುತ್ವ ಅನುಸರಿಸುತ್ತಿದೆ. ತನ್ನ ಕ್ಷೇತ್ರವಾದ ಚಿಂದ್ವಾರದಲ್ಲಿ, ಅವರು ಹನುಮಂತನ ಎತ್ತರದ ಪ್ರತಿಮೆಯನ್ನು ನಿರ್ಮಿಸುವುದು ಮತ್ತು ವಿವಿಧ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸುವುದು ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಶೇ.91ರಷ್ಟು ಇರುವ ಹಿಂದೂಗಳ ಮನ ಗೆಲ್ಲಲು ಕಮಲ್ ನಾಥ್ ಶ್ರಮಿಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಮಧ್ಯಪ್ರದೇಶದಲ್ಲಿ ಪ್ರಚಾರ ಆರಂಭಿಸಿದ ಪ್ರಿಯಾಂಕಾ ಗಾಂಧಿ, ರಾಜ್ಯದ ಜನತೆಗೆ ಐದು ಭರವಸೆಗಳ ಗ್ಯಾರೆಂಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ನರ್ಮದಾ ನದಿಯ ದಡದಲ್ಲಿ ನಿಂತು ಸುಳ್ಳು ಹೇಳುವುದಿಲ್ಲ ಎಂದು ಹೇಳಿದ್ದಾರೆ.
ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ತನ್ನ ಮೃದು ಹಿಂದುತ್ವದ ಅಜೆಂಡಾವನ್ನು ದೀರ್ಘಕಾಲದಿಂದ ಜಾರಿಗೆ ತರುತ್ತಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಕಾಂಗ್ರೆಸ್ ಸಿದ್ಧಾಂತಗಳನ್ನು ಬದಿಗಿಟ್ಟು ಜನಪ್ರಿಯ ಹಿಂದುತ್ವ ರಾಜಕಾರಣದಲ್ಲಿ ತೊಡಗುವ ಮೂಲಕ ಮತದಾರರನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಬಘೆಲ್ ಸರ್ಕಾರವು ಇತ್ತೀಚೆಗೆ ರಾಯ್‌ಗಢದಲ್ಲಿ ‘ರಾಷ್ಟ್ರೀಯ ರಾಮಾಯಣ ಉತ್ಸವ’ವನ್ನು ಆಯೋಜಿಸಿತ್ತು. ಈ ಉತ್ಸವಗಳಲ್ಲಿ ಕಾಂಬೋಡಿಯಾ ಮತ್ತು ಇಂಡೋನೇಷ್ಯಾದ ರಾಮಾಯಣ ಅರಣ್ಯ ಕಾಂಡದ ಮೇಲೆ ಪ್ರದರ್ಶನ ನೀಡಲಾಗಿತ್ತು. ಕಾರ್ಯಕ್ರಮವು ಹನುಮಾನ್ ಚಾಲಿಸ ಪಠಣ ಒಳಗೊಂಡಿದೆ. ಬಘೇಲ್ ಅವರು ಅಂತರಾಷ್ಟ್ರೀಯ ರಾಮಾಯಣ ಉತ್ಸವಕ್ಕೆ ಬಜೆಟ್‌ನಲ್ಲಿ ರೂ.12 ಕೋಟಿಗಳನ್ನು ಮೀಸಲಿಟ್ಟಿದ್ದಾರೆ. ಹೆಚ್ಚುವರಿಯಾಗಿ, ಕೌಶಲ್ಯ ಮಹೋತ್ಸವ ರಾಮಲೀಲಾ ಮತ್ತು ಮಾನಸ ಗಣಂಗಳಂತಹ ಹಿಂದೂ ಕಾರ್ಯಕ್ರಮಗಳಿಗೆ 10 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗಾಗಿ ಕೆಜಿಎಫ್ 2 ಹಾಡು ಬಳಕೆ: ರಾಹುಲ್ ಗಾಂಧಿ ವಿರುದ್ಧದ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ
ಬಘೇಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಕೌಸಲ್ಯ ದೇವಸ್ಥಾನದ ಜೀರ್ಣೋದ್ಧಾರ ಮಾಡಿದೆ. ಅಲ್ಲದೆ, ಹಿಂದೂ ಧರ್ಮ ಬಿಜೆಪಿಗೆ ಸೀಮಿತವಲ್ಲ ಎಂಬ ಸಂದೇಶವನ್ನು ಸಾರಲು ಮುಖ್ಯಮಂತ್ರಿಗಳು ರಾಜ್ಯಾದ್ಯಂತ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಬಿಜೆಪಿ ಹಿಂದುತ್ವ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದ ಕಾಂಗ್ರೆಸ್ ಪಕ್ಷ ಈಗ ಅದೇ ಹಾದಿಯಲ್ಲಿ ಸಾಗುತ್ತಿರುವ ಬಗ್ಗೆ ಈ ಮೂರು ರಾಜ್ಯಗಳಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಪಕ್ಷಕ್ಕೆ ಹಿಂದುತ್ವ ಪರ ನೀತಿ ಮಾತ್ರ ಸಾಕಾಗುವುದಿಲ್ಲ ಎಂಬ ಅಭಿಪ್ರಾಯವಿದೆ. ಬಿಜೆಪಿಯನ್ನು ಎದುರಿಸುವ ಈ ಹೊಸ ತಂತ್ರ ಕಾಂಗ್ರೆಸ್ ಗೆ ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿದ್ದರೂ ಬಿಜೆಪಿಯ ಅಬ್ಬರಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಸಾಕಷ್ಟು ಸರ್ಕಸ್ ಮಾಡಬೇಕಿದೆ. ಹಿಂದೂ ಧರ್ಮಾಧಾರಿತ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರುವ ಕಾಂಗ್ರೆಸ್, ಬಿಜೆಪಿ ಹಿಂದುತ್ವಕ್ಕೂ, ಕಾಂಗ್ರೆಸ್ ಹಿಂದುತ್ವಕ್ಕೂ ವ್ಯತ್ಯಾಸವಿದೆ ಎಂದು ಹೇಳಲು ಹೊರಟಿದೆ. ಆದ್ರೆ ಇದು ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನು ಕಾದುನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ