ಸಿಎಂ-ಡಿಸಿಎಂ ಮಧ್ಯೆ ವರ್ಗಾವಣೆ ಸಂಘರ್ಷ: ಅಷ್ಟಕ್ಕೂ ಆಗಿದ್ದೇನು? ಡಿಕೆಶಿ ಆಕ್ರೋಶಗೊಂಡಿದ್ಯಾಕೆ?
ಇದೊಂದು ಪತ್ರ ಬಿಜೆಪಿಗೆ ಅಸ್ತ್ರವಾಗಿದ್ದರೆ, ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿದೆ. ಇದು ಸಾಮಾನ್ಯವಾಗಿ ಬರೆದ ಪತ್ರ ಆಗಿದ್ರೆ ಇಷ್ಟು ಸದ್ದು ಮಾಡುತ್ತಿರಲಿಲ್ಲ. ಅದೇನೆಂದ್ರೆ ತಮ್ಮ ಇಲಾಖೆಯಲ್ಲಿ ವರ್ಗಾವಣೆ ವಿಚಾರದಲ್ಲಿ ಆಕ್ಷೇಪ ಎತ್ತಿರೋ ಡಿಸಿಎಂ ಡಿಕೆ ಶಿವಕುಮಾರ್, ಖಾರವಾಗಿಯೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇದೇ ಈಗ ಕಾಂಗ್ರೆಸ್ ಪಾಳಯದಲ್ಲಿ ಹತ್ತು ಹಲವು ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ ಪತ್ರದಲ್ಲಿರುವುದೇನು? ಅಷ್ಟಕ್ಕೂ ಆಗಿದ್ದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು, (ಮೇ 29): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಡುವೆ ಮತ್ತೊಂದು ಮುಸುಕಿನ ಗುದ್ದಾಟ ಶುರುವಾಗಿದೆ. ಅಧಿಕಾರಿಗಳ ವರ್ಗಾವಣೆ ಸಂಬಂಧ ಇಬ್ಬರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿರುವುದಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಕ್ರೋಶಗೊಂಡಿದ್ದು, ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಸಿಎಂ-ಡಿಸಿಎಂ ನಡುವೆ ಮತ್ತೊಂದು ಸಂಘರ್ಷ ಶುರುವಾಗಿದ್ದು, ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿದೆ. ಇನ್ನು ಇದನ್ನೇ ವಿಪಕ್ಷ ಬಿಜೆಪಿ ಅಸ್ತ್ರವನ್ನಾಗಿ ಮಾಡಿಕೊಂಡಿದೆ.
ಜಲಸಂಪನ್ಮೂಲ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆಯಾಗಿದ್ದಕ್ಕೆ ಸಿಟ್ಟಾದ ಡಿಕೆಶಿ ಮೇ 13 ರಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಐವರು ಎಂಜಿನಿಯರ್‌ಗಳ ವರ್ಗಾವಣೆಯನ್ನು ಹಿಂದಕ್ಕೆ ಪಡೆಯಿರಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮುಂದಿನ ತಿಂಗಳಿನಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆ ಸಿಗಲ್ವಾ? ಸಂಚಲನ ಮೂಡಿಸಿದ ರಾಯರೆಡ್ಡಿ ಮಾತು
ಡಿಕೆಶಿ ಬರೆದ ಪತ್ರದಲ್ಲೇನಿದೆ?
ಮೇ13ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ. ಅದರಲ್ಲಿ ನನ್ನ ಇಲಾಖೆಗೆ ಸಂಬಂಧಿಸಿದಂತೆ ವರ್ಗಾವಣೆ, ನೇಮಕಾತಿ ಆದೇಶಕ್ಕೆ ನನ್ನ ಅನುಮತಿ ಪಡೆಯಲೇಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಮುಖ್ಯಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಕೆಲ ಮುಖ್ಯ ಇಂಜಿನಿಯರ್ ಗಳನ್ನೇ ತಮ್ಮ ಅನುಮತಿ ಇಲ್ಲದೇ ಜನಸಂಪನ್ಮೂಲ ಇಲಾಖೆಗೆ ವರ್ಗಾವಣೆ ಮಾಡಿರುವುದಕ್ಕೆ ಆಕ್ಷೇಪಿಸಿದ್ದಾರೆ. ಕೂಡಲೇ ಆದೇಶ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದ್ದಾರೆ. ಅಸಲಿಗೆ ಸರ್ಕಾರದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಿಎಂ ಸಿದ್ದರಾಮಯ್ಯ ವ್ಯಾಪ್ತಿಗೆ ಬರುತ್ತೆ. ಯಾವ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಆದರೂ ಸಿಎಂ ಸೂಚನೆ ಇಲ್ಲದೇ ಆಗುವುದಿಲ್ಲ. ಇದೀಗ ಇದಕ್ಕೆ ಆಕ್ಷೇಪ ಎತ್ತುವ ಮೂಲಕ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನಿರ್ಣಯವನ್ನೇ ಪರೋಕ್ಷವಾಗಿ ವಿರೋಧಿಸಿದ್ದಾರೆ.
ಇನ್ನು ತಮ್ಮ ಅನುಮತಿ ಇಲ್ಲದೇ ವರ್ಗಾವಣೆ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಇಲಾಖೆಯಲ್ಲಿ ಇಂಜಿನಿಯರ್ ಗಳ ಕೊರತೆ ಇದೆ. ಮೇಲ್ಮಟ್ಟದಲ್ಲಿ ಅವಕಾಶ ಕೊಡುತ್ತಿದ್ದಾರೆ. ನಮ್ಮ ಎಂಎಲ್ಎಗಳೇ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿದರು.
ವಿಪಕ್ಷ ನಾಯಕರು ಹೇಳಿದ್ದೇನು?
ಕಾಂಗ್ರೆಸ್ ನಲ್ಲಿ ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ ವಿಪಕ್ಷ ಬಿಜೆಪಿ ಸುಮ್ಮನೆ ಕುಳಿತುಕೊಳ್ಳುತ್ತಾ? ಇಲ್ಲ ವರ್ಗಾವಣೆ ವಿಚಾರದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕ್ಲೈಮ್ಯಾಕ್ಸ್ ಗೂ ಮೊದಲು ಇವೆಲ್ಲಾ ಬೆಳವಣಿಗೆ ನಡೆಯುತ್ತೆ ಎಂದು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಸಿಎಸ್ ಗೆ ಬರೆದಿರುವ ಪತ್ರ ನೆಪ ಮಾತ್ರ ಎಂದಿದ್ದಾರೆ. ಇನ್ನು ವರ್ಗಾವಣೆ ಬಗ್ಗೆ ಡಿಕೆ ಪತ್ರ ಬರೆದಿರುವುದು ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಸಾಕ್ಷಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟ್ವೀಟ್ ಮಾಡಿದ್ದಾರೆ.
ನಿಜಕ್ಕೂ ಆಗಿದ್ದೇನು?
ಹಲವು ತಿಂಗಳುಗಳುಗಳಿಂದ ಜಲಸಂಪನ್ಮೂಲ ಇಲಾಖೆಯಲ್ಲಿ (Water Resources Ministry) ಕರ್ತವ್ಯದಲ್ಲಿದ್ದ ಐವರು ಮುಖ್ಯ ಎಂಜಿನಿಯರ್‌ಗಳು ಹುದ್ದೆಯ ನಿರೀಕ್ಷೆಯಲ್ಲಿದ್ದರು. ಐವರು ಎಂಜಿನಿಯರ್‌ಗಳನ್ನು ಖಾಲಿ ಇದ್ದ ಲೋಕೋಪಯೋಗಿ ಇಲಾಖೆಯ ಹುದ್ದೆಗಳಿಗೆ ವರ್ಗಾವಣೆ ಮಾಡಿ ಮೇ 9ರಂದು ಡಿಪಿಎಆರ್ ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್‌ಗಳು ಕರ್ತವ್ಯಕ್ಕೆ ಹಾಜರಾಗಿದ್ದರು.
ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡಲಾಗಿದೆ. ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು, ಪ್ರಭಾರ ವರ್ಗಾವಣೆ ಪ್ರಮಾಣ ಪತ್ರವನ್ನು (ಸಿಟಿಸಿ) ಸಲ್ಲಿಸಬೇಕು ಎಂದೂ ಡಿಪಿಎಆರ್ ನಿರ್ದೇಶನ ನೀಡಿತ್ತು. ಅದರ ಅನ್ವಯ ಎಲ್ಲಾ ಐವರು ಇಂಜಿನಿಯರ್‌ಗಳು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು.
ವರ್ಗಾವಣೆಗೊಂಡ ಅಧಿಕಾರಿಗಳು ಯಾರು?
- ಎಚ್.ಸಿ.ರಮೇಂದ್ರ- ಅಂತರರಾಜ್ಯ ಜಲ ವಿವಾದ, ಬೆಂಗಳೂರು.
- ವಿನಾಯಕ ಜಿ.ಸುಗೂರ- ನೀರಾವರಿ ಯೋಜನೆಗಳ ವಲಯ, ಕರ್ನಾಟಕ ನೀರಾವರಿ ನಿಗಮ, ತುಮಕೂರು.
- ಜೆ.ಇ. ಯತೀಶ್ ಚಂದ್ರನ್-ಎತ್ತಿನಹೊಳೆ ಯೋಜನಾ ವಲಯ, ಕರ್ನಾಟಕ ನೀರಾವರಿ ನಿಗಮ, ತುಮಕೂರು.
- ಶಿವಾನಂದ ಆರ್.ನಾಯಕ್- ಆಡಳಿತಾಧಿಕಾರಿ, ಕಾಡಾ ನೀರಾವರಿ ಯೋಜನೆಗಳ ವಲಯ, ಕಲಬುರಗಿ.
- ಪಿ.ಬಿ.ಪ್ರಕಾಶ್- ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ, ಬೆಂಗಳೂರು.
ಈ ವರ್ಗಾವಣೆ ಡಿಕೆ ಶಿವಕುಮಾರ್ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಅನುಮತಿ ಇಲ್ಲದೇ ತಮ್ಮದೇ ಇಲಾಖೆಯಲ್ಲಿ ಇದು ಹೇಗಾಯ್ತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ವರ್ಗಾವಣೆ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಮುಖ್ಯಕಾರ್ಯದರ್ಶಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ನಡೆಗೆ ಆಕ್ರೋಶಗೊಂಡಿದ್ದಾರೆ.
ಒಟ್ಟಿನಲ್ಲಿ ಕಳೆದ 2 ವರ್ಷಗಳಿಂದ ವರ್ಗಾವಣೆ ವಿಚಾರದಲ್ಲಿ ಸಚಿವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧವೇ ವರ್ಗಾವಣೆ ವಿಚಾರದಲ್ಲಿ ಡಿಕೆ ಶಿವಕುಮಾರ್ ಸಿಡಿದ ನಿಂತ್ರಾ ಎನ್ನುವ ಮಾತುಗಳು ವಿಧಾನಸೌಧದ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Thu, 29 May 25