AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉರ್ದುಗೆ 100, ಕನ್ನಡ 32 ಕೋಟಿ ರೂ.: ಬಿಜೆಪಿಯ ಅನುದಾನ ವಿವಾದಕ್ಕೆ ಸಿಎಂ ಸ್ಪಷ್ಟನೆ

ಕರ್ನಾಟಕ ಸರ್ಕಾರವು ಕನ್ನಡಕ್ಕೆ 32 ಕೋಟಿ ರೂ. ಮತ್ತು ಉರ್ದು ಭಾಷೆಗೆ 100 ಕೋಟಿ ರೂ. ಅನುದಾನ ನೀಡಿದೆ ಎಂಬ ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಆರೋಪಗಳನ್ನು ತಳ್ಳಿಹಾಕಿದ್ದು, ಕನ್ನಡ ಭಾಷೆಗೆ ಅಪಾರ ಅನುದಾನ ನೀಡಲಾಗಿದೆ ಎಂದು ಸ್ಪಷ್ಟೀಕರಿಸಿದ್ದಾರೆ. ಉರ್ದು ಭಾಷಾ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಅನುದಾನ ಮೀಸಲಿಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಉರ್ದುಗೆ 100, ಕನ್ನಡ 32 ಕೋಟಿ ರೂ.: ಬಿಜೆಪಿಯ ಅನುದಾನ ವಿವಾದಕ್ಕೆ ಸಿಎಂ ಸ್ಪಷ್ಟನೆ
ಸಿಎಂ ಸಿದ್ದರಾಮಯ್ಯ
ವಿವೇಕ ಬಿರಾದಾರ
|

Updated on:May 27, 2025 | 7:35 PM

Share

ಬೆಂಗಳೂರು, ಮೇ 27: ಕರ್ನಾಟಕ ಸರ್ಕಾರ ಉರ್ದು (Urdu) ಭಾಷೆಗೆ 100 ಕೋಟಿ ರೂ. ಮತ್ತು ಕನ್ನಡ (Kannada) ಭಾಷೆಗೆ 32 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ ಎಂಬ ಪೋಸ್ಟರ್​ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಇದೇ ಪೋಸ್ಟರ್​ ಅನ್ನು ಕರ್ನಾಟಕ ಬಿಜೆಪಿ (BJP) ಕೂಡ ಪೋಸ್ಟ್​ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದೆ. ಬಿಜೆಪಿಯ ಈ ಟ್ವೀಟ್​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ತಿರುಗೇಟು ನೀಡಿದ್ದು, ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ಉರ್ದು ಭಾಷೆಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಮಾಡುತ್ತಿರುವ ಅಪಪ್ರಚಾರ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು ಎಂದು ವಾಗ್ದಾಳಿ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಟ್ವೀಟ್​ ಮಾಡಿದ ಸಿಎಂ ಸಿದ್ದರಾಮಯ್ಯ, “ರಾಜ್ಯ ಬಿಜೆಪಿ ಮಾಡುತ್ತಿರುವ ಅಪಪ್ರಚಾರ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಕೋಮುವೈಷಮ್ಯ ಹುಟ್ಟಿಸುವ ದುರುದ್ದೇಶದಿಂದ ಕೂಡಿದ್ದಾಗಿದೆ. ಒಂದು ರಾಷ್ಟ್ರೀಯ ಪಕ್ಷ ಇಷ್ಟೊಂದು ಬೇಜವಾಬ್ದಾರಿತನದಿಂದ ಕಿಡಿಗೇಡಿ ಟ್ರೋಲರ್ ಗಳ ರೀತಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುತ್ತಿರುವುದು ವಿಷಾದನೀಯ” ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ
Image
ಜನರಲ್ಲಿ ಗೊಂದಲ, ಅಶಾಂತಿ ಸೃಷ್ಟಿಸುವುದೇ ಬಿಜೆಪಿ ನಾಯಕರ ಕೆಲಸ: ಸಿದ್ದರಾಮಯ್ಯ
Image
ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ: ಮತ್ತೆ ರಾಜಭವನದ ಕದ ತಟ್ಟಿದ ಸರ್ಕಾರ
Image
ಜ್ವರ, ನೆಗಡಿ ಇರುವ ವಿದ್ಯಾರ್ಥಿಗಳಿಗೆ ರಜೆ: ಕೋವಿಡ್ ಸಭೆ ವಿವರ ಇಲ್ಲಿದೆ
Image
ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಸಂಪುಟ ಒಪ್ಪಿಗೆ: ಹಠ ಸಾಧಿಸಿ ಗೆದ್ದ DKS

“2025-26ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಗೆ ₹34,438 ಕೋಟಿ ಮತ್ತು ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳಿಗೆ ಸೇರಿದ ಶಾಲೆಗಳಿಗೆ ₹4,150 ಕೋಟಿ ಹೀಗೆ ಕನ್ನಡ ಭಾಷೆಯ ಶಾಲೆಗಳಿಗಾಗಿಯೇ ರಾಜ್ಯ ಸರ್ಕಾರ ಒಟ್ಟು 38,688 ಕೋಟಿ ರೂ.ಗಳನ್ನು ನೀಡಿದೆ” ಎಂದು ತಿಳಿಸಿದ್ದಾರೆ.

“ಇದರ ಜೊತೆಯಲ್ಲಿ ಸರ್ಕಾರಿ ಶಾಲೆಗಳ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಒಟ್ಟು 999.30 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ. ಈ ಒಟ್ಟು ಅನುದಾನ ಕನ್ನಡ ಭಾಷೆಯ ಅಭಿವೃದ್ದಿಗಾಗಿಯೇ ವ್ಯಯವಾಗಲಿದೆ. ಹೀಗಿರುವಾಗ ಕನ್ನಡ ಭಾಷೆಗೆ ರಾಜ್ಯ ಸರ್ಕಾರ ಕೇವಲ 32 ಕೋಟಿ ರೂಪಾಯಿ ಅನುದಾನ ನೀಡುತ್ತಿದೆ ಎಂಬ ಮಾಹಿತಿಯ ಪ್ರಸಾರದ ಹಿಂದೆ ರಾಜಕೀಯ ದುರುದ್ದೇಶ ಇರುವುದು ಸ್ಪಷ್ಟವಾಗುತ್ತದೆ” ಎಂದಿದ್ದಾರೆ.

“ಅತಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಇರುವ ರಾಜ್ಯದ ಉರ್ದು ಮಾಧ್ಯಮ ಶಾಲೆಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಮೂಲಸೌಕರ್ಯಗಳನ್ನು ಒದಗಿಸಿ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸುವ ಹಾಗೂ ಮೌಲಾನ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸುವ ಉದ್ದೇಶದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ 100 ಕೋಟಿ ರೂ.ಗಳನ್ನು ಅಲ್ಪಸಂಖ್ಯಾತ ಇಲಾಖೆಯಡಿ ಒದಗಿಸಲಾಗಿದೆ” ಎಂದು ತಿಳಿಸಿದ್ದಾರೆ.

“ಈ ಅನುದಾನವನ್ನು ಕೇವಲ ಭಾಷಾ ಕಲಿಕೆಗೆ ಮಾತ್ರವಲ್ಲ ಶಾಲಾ ಮೂಲಸೌಕರ್ಯ, ಶಿಕ್ಷಕರ ನೇಮಕಾತಿಗಾಗಿ, ಪಠ್ಯಪುಸ್ತಕಗಳು ಮತ್ತು ಹೊಸ ಶಾಲಾ ಕಟ್ಟಡಗಳ ನಿರ್ಮಾಣಕ್ಕೂ ಬಳಸಲಾಗುವುದು” ಎಂದು ಪೋಸ್ಟ್​ ಮಾಡಿದ್ದಾರೆ.

“ಕನ್ನಡ, ಉರ್ದು ಭಾಷೆಗಳು ಸೇರಿದಂತೆ ಯಾವುದೇ ಭಾಷೆಯನ್ನು ನಿರ್ದಿಷ್ಠ ಜಾತಿ, ಧರ್ಮದ ಜೊತೆ ಜೋಡಿಸುವುದು ಆ ಭಾಷೆಗಳಿಗೆ ತೋರುವ ಅಗೌರವವಾಗುತ್ತದೆ. ನಮ್ಮ ಸರ್ಕಾರ ರಾಜ್ಯದಲ್ಲಿ ಬಳಕೆಯಲ್ಲಿರುವ ಎಲ್ಲ ಭಾಷೆಗಳ ಬಗ್ಗೆ ಸಮಾನ ಕಾಳಜಿಯನ್ನು ಹೊಂದಿದೆ. ಇದೇ ಸದುದ್ದೇಶದಿಂದ ರಾಜ್ಯದಲ್ಲಿ ಬಳಕೆಯಲ್ಲಿರುವ ತುಳು, ಕೊಂಕಣಿ, ಅರೆಬಾಸೆ, ಕೊಡವ ಭಾಷೆಗಳಿಗಾಗಿಯೇ ಪ್ರತ್ಯೇಕ ಅಕಾಡೆಮಿಗಳನ್ನು ಸ್ಥಾಪಿಸಲಾಗಿದ್ದು, ಇವುಗಳಿಗೆ ವಾರ್ಷಿಕ 80 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಲಾಗುತ್ತದೆ. ಇದರ ಜೊತೆಗೆ ವಿಶೇಷ ಕಾರ್ಯಕ್ರಮಗಳಿಗಾಗಿ ಹೆಚ್ಚುವರಿ ಅನುದಾನವನ್ನು ನೀಡಲಾಗುತ್ತದೆ” ಎಂದರು.

“ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿಯೇ ಪ್ರತ್ಯೇಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೆ. ಇದರಡಿಯಲ್ಲಿ 14 ಅಕಾಡೆಮಿಗಳು, 3 ಪ್ರಾಧಿಕಾರ ಮತ್ತು ಸಾಹಿತಿಗಳ ಹೆಸರಿನ 24 ಟ್ರಸ್ಟ್ ಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವೂ ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಮೀಸಲಾಗಿವೆ” ಎಂದಿದ್ದಾರೆ.

ಇದನ್ನೂ ಓದಿ: ಎಂದಿಗೂ ಕನ್ನಡ ಮಾತನಾಡಲ್ಲ ಅಂತ ದರ್ಪ ತೋರಿದ್ದ SBI ಬ್ಯಾಂಕ್​ ಮ್ಯಾನೇಜರ್​: ಸಿಎಂ ಖಂಡನೆ ಬೆನ್ನಲ್ಲೇ ಎತ್ತಂಗಡಿ

“ಕನ್ನಡ ಭಾಷೆಗೆ ಕನ್ನಡಿಗರೆಲ್ಲರೂ ತಾಯಿಯ ಸ್ಥಾನವನ್ನು ನೀಡಿದ್ದು ಇದೇ ಗೌರವವನ್ನು ನಮ್ಮ ಸರ್ಕಾರ ಕೂಡಾ ಹೊಂದಿದೆ. ನೆಲ-ಜಲ-ಭಾಷೆಯ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎನ್ನುವುದನ್ನು ನಾನು ಪದೇ ಪದೇ ಹೇಳಿಕೊಂಡು ಬಂದಿದ್ದೇನೆ. ಇದೇ ರೀತಿ ನಾಡು-ನುಡಿಗೆ ಬಗೆವ ಅವಮಾನವನ್ನು ಕೂಡಾ ನಮ್ಮ ಸರ್ಕಾರ ಸಹಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

ಟ್ವಿಟರ್​ ಪೋಸ್ಟ್​

“ಹೀಗಿರುವಾಗ ಕನ್ನಡ ಭಾಷೆಗಾಗಿ ಕೇವಲ 32 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ರಾಜ್ಯ ಬಿಜೆಪಿ ಹಂಚಿಕೊಂಡು ಜನರನ್ನು ತಪ್ಪು ದಾರಿಗೆಳೆಯುತ್ತಿರುವುದು ಅಕ್ಷಮ್ಯ ಅಪರಾಧ ಮಾತ್ರವಲ್ಲ ಕನ್ನಡ ನಾಡು ಮತ್ತು ನುಡಿಗೆ ಬಗೆವ ದ್ರೋಹವಾಗಿದೆ. ರಾಜ್ಯ ಬಿಜೆಪಿ ತಕ್ಷಣ ಸ್ಪಷ್ಟೀಕರಣದ ಮೂಲಕ ಸತ್ಯ ಸಂಗತಿಯನ್ನು ತಿಳಿಸುವ ಜೊತೆಯಲ್ಲಿ ತಮ್ಮಿಂದ ಆಗಿರುವ ತಪ್ಪಿಗೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು” ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:35 pm, Tue, 27 May 25

Follow Us