ಮೈಸೂರಿನಲ್ಲೇ ‘ಗೃಹಲಕ್ಷ್ಮೀ’ಗೆ ಚಾಲನೆ ಹಿಂದೆ ‘ಕೈ’ ಮಾಸ್ಟರ್ ಪ್ಲ್ಯಾನ್, ಈ 4 ಕ್ಷೇತ್ರಗಳು ಟಾರ್ಗೆಟ್!
ರಾಜ್ಯ ಸರ್ಕರದ ಬಹುನಿರೀಕ್ಷಿತ ಮತ್ತು 5 ಗ್ಯಾರಂಟಿಗಳಲ್ಲೇ ಅತೀ ದೊಡ್ಡ ಗ್ಯಾರಂಟಿಯಾದ ಗೃಹಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಇಂದು (ಆಗಸ್ಟ್ 30) ಚಾಲನೆ ಸಿಕ್ಕಿದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಕರೆಯಿಸಿ ಮಹತ್ವದ ಯೋಜನೆಗೆ ಚಾಲನೆ ಕೊಡಿಸುವ ಮೂಲಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಮುನ್ನುಡಿ ಬರೆದಿದ್ದಾರೆ.
ಬೆಂಗಳೂರು, (ಆಗಸ್ಟ್ 30): ಆಪರೇಷನ್ ಹಸ್ತದ (Opeation Hasta) ಜೊತೆ ಜೊತೆಗೆ ಕಾಂಗ್ರೆಸ್(Congress) ಲೋಕಸಭಾ ಚುನಾವಣೆಗೆ (Loksabha elections 2024) ಸರ್ಕಾರದ ಮಟ್ಟದಲ್ಲೂ ತಯಾರಿ ನಡೆಸಿದೆ. ಗ್ಯಾರಂಟಿ ಯೋಜನೆಗಳನ್ನು ಅದರಲ್ಲೂ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme )ಅದ್ಧೂರಿಯಾಗಿ ಚಾಲನೆ ನೀಡುವ ಮೂಲಕ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಮುನ್ನುಡಿ ಬರೆದಿದೆ. ಹೌದು…ಮೊದಲು ಬೆಳಗಾವಿಯಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಮೈಸೂರಿಗೆ ಶಿಫ್ಟ್ ಮಾಡಿರುವುದರ ಹಿಂದೆ ಅಸಲಿ ರಾಜಕೀಯವೇ ಬೇರೆ ಇದೆ ಎನ್ನುವ ಮಾತುಗಳು ಕೇಳಿಬಂದಿವೆ. ಅದೇನಂದ್ರೆ ಲೋಕಸಭೆ ಚುನಾವಣೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಐದು ಜಿಲ್ಲೆಗಳನ್ನೊಳಗೊಂಡ 4 ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದ್ದು, ಮಹಿಳೆಯರ ಮತ ಕ್ರೂಢೀಕರಿಸಲು ಸಿಎಂ ಮತ್ತು ಡಿಸಿಎಂ ಗೃಹಲಕ್ಷ್ಮೀ ಯೋಜನೆಯನ್ನು ವೇದಿಕೆ ಮಾಡಿಕೊಂಡಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಹಳೇ ಮೈಸೂರು ಭಾಗದಲ್ಲಿ ಶಕ್ತಿವರ್ಧನೆಗೆ ಅದರಲ್ಲೂ ಮೈಸೂರು-ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಕಾಂಗ್ರೆಸ್ ಸರ್ಕಾರ ಮೈಸೂರಿನಲ್ಲೇ ಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದೆ ಎನ್ನುವ ಚರ್ಚೆ ರಾಜ್ಯ ರಾಜಕರಾಣದಲ್ಲಿ ಶುರುವಾಗಿದೆ. ಅಲ್ಲದೇ ಬಿಜೆಪಿ ಜೆಡಿಎಸ್ಗೆ ಮೂಗುದಾರ ಹಾಕಲು ಕಾಂಗ್ರೆಸ್, ಈ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮದ ಮೂಲಕ ಸ್ಕೆಚ್ ಹಾಕಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮದಲ್ಲಿ ಶಕ್ತಿ ಪ್ರದರ್ಶನ ಮಾಡಿದರು. ಅಲ್ಲದೇ ಈ ಕಾರ್ಯಕ್ರಮದೊಂದಿಗೆ ಮುಂಬರುವ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದರು.
ಸದ್ಯ ಈ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಸದರು ಇಲ್ಲ. ಚಾಮರಾಜನಗರ ಮತ್ತು ಮೈಸೂರಿನಲ್ಲಿ ಬಿಜೆಪಿ ಸಂಸದರಿದ್ದಾರೆ. ಮಂಡ್ಯದಲ್ಲಿ ಪಕ್ಷೇತರ, ಹಾಸನದಲ್ಲಿ ಜೆಡಿಎಸ್ ಸಂಸದರಿದ್ದಾರೆ. 4 ಕ್ಷೇತ್ರ ಗೆಲ್ಲುವ ಟಾರ್ಗೆಟ್ ಮಾಡಿರೋ ಕಾಂಗ್ರೆಸ್ ಗೃಹಲಕ್ಷ್ಮೀ ಯೋಜನೆಯನ್ನು ವೇದಿಕೆ ಮಾಡಿಕೊಂಡಿದೆ. ಇಂದು ಗೃಹಲಕ್ಷ್ಮೀ ಗ್ಯಾರಂಟಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ಭಾಷಣದ ಕೊನೆಯಲ್ಲಿ ಹಳೇ ಮೈಸೂರು ಭಾಗದ ನಾಲ್ಕು ಕ್ಷೇತ್ರಗಳ ಹೆಸರುಗಳನ್ನ ಹೇಳಿದ್ರು. ಈ ಮೂಲಕ ಲೋಕಸಭೆ ತಂತ್ರಗಾರಿಕೆಯ ಸುಳಿವು ನೀಡಿದರು.
ನಾಲ್ಕು ಜಿಲ್ಲೆಗಳ ಫಲಾನುಭವಿಗಳ ಸಂಖ್ಯೆ ಎಷ್ಟು?
ಅಷ್ಟಕ್ಕೂ ಹಳೇ ಮೈಸೂರು ಭಾಗದ ನಾಲ್ಕು ಕ್ಷೇತ್ರಗಳಲ್ಲಿ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಫಲಾನುಭವಿಗಳು ಎಷ್ಟು ಎನ್ನುವುದನ್ನು ನೋಡುವುದಾದರೆ, ಹಳೇ ಮೈಸೂರು ಭಾಗದದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳ ಸಂಖ್ಯೆ ಹೆಚ್ಚಿದೆ. ಮೈಸೂರಲ್ಲಿ 6 ಲಕ್ಷದ 29 ಸಾವಿರ ಫಲಾನುಭವಿಗಳಿದ್ದಾರೆ. ಮಂಡ್ಯದಲ್ಲಿ 4 ಲಕ್ಷದ 15 ಸಾವಿರ ಗೃಹಲಕ್ಷ್ಮಿಯರ ಖಾತೆಗೆ ಹಣ ಜಮೆ ಆಗಲಿದೆ. ಇನ್ನು ಹಾಸನದಲ್ಲೂ 4 ಲಕ್ಷ 11 ಸಾವಿರ ಫಲಾನುಭವಿಗಳಿದ್ದಾರೆ. ಚಾಮರಾಜನಗರದಲ್ಲಿ 2 ಲಕ್ಷದ 44 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀಯ ಲಾಭ ಸಿಗುತ್ತಿದೆ. ಕೊಡಗಿನಲ್ಲಿ 1 ಲಕ್ಷದ ಐದು ಸಾವಿರ ಫಲಾನುಭವಿಗಳಿಗೆ ಪ್ರತಿ ತಿಂಗಳು 2 ಸಾವಿರ ಹಣ ಸಿಗಲಿದೆ.
ಒಟ್ಟಾರೆ ಲೋಕಸಭೆ ಚುನಾವಣೆಯಲ್ಲಿ ಮಿಷನ್ 20 ಗುರಿ ಇಟ್ಟುಕೊಂಡಿರೋ ಕಾಂಗ್ರೆಸ್ ನಾಯಕರು ಗ್ಯಾರಂಟಿಗಳನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಇದಕ್ಕೆ ಬಿಜೆಪಿ ರೀತಿ ಪ್ರತಿತಂತ್ರ ಹೆಣೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ