ದಲಿತರ ಹಣ, ದೇವಸ್ಥಾನದ ಹಣ ಕಾಂಗ್ರೆಸ್ ಬಾಚಿಕೊಳ್ಳುತ್ತಿದೆ: ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ
ಹಳಿಯಾಳ ಪಟ್ಟಣದ ಅರ್ಬನ್ ಬ್ಯಾಂಕ್ ವೃತ್ತದಲ್ಲಿ ಮೋದಿ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾದ ನಮೋ ವಿಕಸಿತ ಭಾರತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದಲಿತರಿಗೆ ಮೀಸಲಾಗಿದ್ದ ಹಣ, ದೇವಸ್ಥಾನದ ಹಣ ಹಾಗೂ ಎಲ್ಲೆಲ್ಲಿಂದ ಹಣ ಸಿಗುತ್ತೋ ಅಲ್ಲಿಂದೆಲ್ಲಾ ಬಾಚಿಕೊಳ್ಳುತ್ತಿದ್ದಾರೆ ಎಂದರು.
ಕಾರವಾರ, ಫೆ.12: ರಾಜ್ಯ ಸರಕಾರಕ್ಕೆ 50 ಸಾವಿರ ಕೋಟಿ ರೂಪಾಯಿ ಬೇಕಾಗಿದೆ. ಆದರೆ ಎಲ್ಲಿಂದ ತರುವುದು ಎಂದು ತಿಳಿಯುತ್ತಿಲ್ಲ. ಹೀಗಾಗಿ ದಲಿತರಿಗೆ ಮೀಸಲಾಗಿದ್ದ ಹಣ, ದೇವಸ್ಥಾನದ ಹಣ ಹಾಗೂ ಎಲ್ಲೆಲ್ಲಿಂದ ಹಣ ಸಿಗುತ್ತೋ ಅಲ್ಲಿಂದೆಲ್ಲಾ ಬಾಚಿಕೊಳ್ಳುತ್ತಿದ್ದಾರೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarty Sulibele) ವಾಗ್ದಾಳಿ ನಡೆಸಿದರು. ಹಳಿಯಾಳ ಪಟ್ಟಣದ ಅರ್ಬನ್ ಬ್ಯಾಂಕ್ ವೃತ್ತದಲ್ಲಿ ಮೋದಿ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾದ ನಮೋ ವಿಕಸಿತ ಭಾರತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರದಿಂದ ಜನರಿಗೆ ಫ್ರೀ ಬಸ್ ಟಿಕೆಟ್ ಸಿಕ್ಕಿರಬಹುದು, ಆದರೆ ಬಸ್ ಸಿಗಲ್ಲ, ಹೊಸ ಬಸ್ ಕೂಡಾ ಬರುವುದಿಲ್ಲ. ಜನರ ಮನೆಯ ಕಾರುಗಳು ಕೂಡಾ ಓಡಾಡಲು ಉತ್ತಮ ರಸ್ತೆಗಳು ದೊರೆಯುವುದಿಲ್ಲ. ಕಳೆದ ಎಂಟು ತಿಂಗಳಲ್ಲಿ ಕಾಂಗ್ರೆಸ್ ಸರಕಾರದಿಂದ ಯಾವುದೇ ಒಂದು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆದಿಲ್ಲ. ಪ್ರಧಾನಿ ಮೋದಿ ದೇಶವನ್ನು 100 ವರ್ಷ ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರೆ, ಕರ್ನಾಟಕ 50 ವರ್ಷ ಹಿಂದೆ ಹೋಗುತ್ತಿದೆ ಎಂದರು.
ಮಧು ಬಂಗಾರಪ್ಪ ದುರದೃಷ್ಠವಶಾತ್ ನಮ್ಮ ಶಿಕ್ಷಣ ಸಚಿವರು. ಇತ್ತೀಚೆಗೆ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಶುಕ್ರವಾರ ಬಿಟ್ಟು ಉಳಿದೆಲ್ಲಾ ದಿನಗಳಲ್ಲಿ ಬೆಳಗ್ಗೆ ಪರೀಕ್ಷೆಯಿತ್ತು. ಇದನ್ನು ಪ್ರಶ್ನಿಸಿದಕ್ಕೆ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಶ್ನೆ ಕೇಳಬಾರದಂತಹ ಧಮನ ನೀತಿಯನ್ನು ಸರಕಾರ ಪಾಲಿಸುತ್ತಿದೆ. ಕಾಂಗ್ರೆಸಿನವರು ಮಾತೆತ್ತಿದರೆ ಪ್ರಜಾಪ್ರಭುತ್ವ, ಕಾನೂನು, ನ್ಯಾಯ ಅಂತಾರೆ. ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಗೌರವ ಕೊಡುವಂತಹ ಯಾವುದೇ ಪ್ರಕ್ರಿಯೆ ನಡೆಸಲ್ಲ ಎಂದರು.
ಇದನ್ನೂ ಓದಿ: ಶುಕ್ರವಾರದ SSLC ಪರೀಕ್ಷಾ ಸಮಯದಲ್ಲಿ ಬದಲಾವಣೆ; ಟೀಕಿಸಿದ ಚಕ್ರವರ್ತಿ ಸೂಲಿಬೆಲೆ ವಿರುದ್ಧ FIR
2014ರಲ್ಲಿ ಗುಲ್ಬರ್ಗಾದಲ್ಲಿ ಖರ್ಗೆ ಇಎಸ್‌ಐ ಆಸ್ಪತ್ರೆ ಲೋಕಾರ್ಪಣೆಗೆ ಸಜ್ಜು ಎಂದು ಮಾಧ್ಯಮದಲ್ಲಿ ಪ್ರಕಟವಾಗಿತ್ತು. ಆಗ ಪ್ರಕಟವಾದ ಸುದ್ದಿಗಳು ಇವರಿಗೆ ಮಿಸ್ ಇನ್ಫಾರ್ಮೇಶನ್ ಅಲ್ಲ. ಆದರೆ, ಪ್ರಧಾನಿ ಮೋದಿ ಈಗ ಮಾಡುವ ಉತ್ತಮ ಕಾರ್ಯಗಳು ಇವರಿಗೆ ಮಿಸ್ ಇನ್ಫಾರ್ಮೇಶನ್ ಆಗುತ್ತಿದೆ ಎಂದರು.
ರಾಮ ಮಂದಿರ ಕೇವಲ ಕಲ್ಲಿನ ಕಟ್ಟಡವಲ್ಲ, ಹಿಂದೂವಿನ ಆತ್ಮಪ್ರಜ್ಞೆಯ ಸಂಕೇತ. ಹಿಂದೂವಿನ ಆತ್ಮಾಭಿಮಾನದ, ಜಾಗೃತಿಯ ಸಂಕೇತ ರಾಮ ಮಂದಿರ. ಮಂದಿರ ವಿಚಾರದಲ್ಲಿ ಬಿಜೆಪಿ ಯಾಕೆ ಕ್ರೆಡಿಟ್ ತೆಗೆದುಕೊಳ್ಳಬೇಕು ಅನ್ನೋದು ಕಾಂಗ್ರೆಸಿಗರಿಗೆ ಟೆನ್ಶನ್. ರಾಮ ಮಂದಿರ ಮಾಡಲು ಬಿಜೆಪಿ ರಥಯಾತ್ರೆ ಮಾಡಿತ್ತು, ಕಲ್ಯಾಣ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಲಾಲ್ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾಭಾರತಿ ಪ್ರಕರಣ ಎದುರಿಸಿದರು ಎಂದರು.
ಮ್ಯಾನ್ಯುಫಿಸ್ಟೋದಲ್ಲಿ ರಾಮ ಮಂದಿರ ಕಟ್ಟುವುದು ತಮ್ಮ ಜವಾಬ್ದಾರಿ ಎಂದು ಬಿಜೆಪಿ ಹೇಳುತ್ತಿತ್ತು. ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಎಲ್ಲಾ ತೊಡಕುಗಳನ್ನು ಮೋದಿ ಹಾಗೂ ಯೋಗಿ ಆದಿತ್ಯನಾಥ್ ನಿವಾರಿಸಿದರು. ಎಲ್ಲಾ ಬಿಜೆಪಿಯವರು ನಡೆಸಿ ಮುಂದೆ ನಾವು ನಿಂತುಕೊಳ್ಳುತ್ತೇವೆ ಅಂದರೆ ಕಾಂಗ್ರೆಸಿಗರಿಗೆ ಯಾಕೆ ಸಮಸ್ಯೆ ಎಂದು ಪ್ರಶ್ನಿಸಿದರು.
ಬಿಜೆಪಿಯವರು ರಾಮ ಮಂದಿರ ತೆಗೆದುಕೊಳ್ಳಲಿ, ಮಥುರಾ ಕೃಷ್ಣನ ಮಂದಿರವಾಗಲಿ ಅಂತಾ ಕಾಂಗ್ರೆಸಿನವರು ಹೋರಾಟ ಮಾಡಲಿ, ಅದು ಅವರಿಗೆ ಚಾಲೆಂಜ್. ಸ್ವರ್ಗದಂತೆ ಕೇಥಾರನಾಥ ದೇವಸ್ಥಾನವನ್ನು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಎಂತದ್ದೇ ಪ್ರವಾಹ ಬಂದರೂ ಕೇದಾರನಾಥ ದೇವಸ್ಥಾನಕ್ಕೆ ಯಾವುದೇ ಸಮಸ್ಯೆಯಾಗದಂತಹ ಆರ್ಕಿಟೆಕ್ಚರ್ ಮಾಡಿಕೊಡಲಾಗಿದೆ ಎಂದರು.
ಹಿಮಾಲಯದ ಮೇಲೆ ಎರಡು ಸಬ್ ಸ್ಟೇಷನ್ ನಿರ್ಮಾಣ ಮಾಡಿ ವಿದ್ಯುತ್ ಹೋಗದಂತೆಯೂ ವ್ಯವಸ್ಥೆ ಮಾಡಲಾಗಿದೆ. ರಾಹುಲ್ ಗಾಂಧಿಗೆ ತುಂಬಾ ಕಷ್ಟವಿತ್ತು ಅನಿಸುತ್ತದೆ, ರಾಹುಲ್ ಮೇಲೆ ತುಂಬಾ ಅನುಕಂಪವಿದೆ. ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋದರೆ ಹೇಗೆ ವರ್ತಿಸಬೇಕೆಂದು ಗೊತ್ತಿಲ್ಲ, ಜನರ ಜತೆ ಹೇಗೆ ಬೆರೆಯಬೇಕೆಂದು ಗೊತ್ತಿಲ್ಲ. ಸುದ್ದಿಗೋಷ್ಠಿಯಲ್ಲಿ ಕುಳಿತರೂ ಏನು ಮಾತಾಡಬೇಕು ಅಂತಾ ಇನ್ನೊಬ್ಬರು ಹೇಳುವ ಪರಿಸ್ಥಿತಿ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ರಾಹುಲ್ ಗಾಂಧಿಯನ್ನು ತುಲನೆ ಮಾಡಲು ಸಾಧ್ಯನಾ ಎಂದು ವ್ಯಂಗ್ಯವಾಡಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ