ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕನಾಗಿ ಕಾಂಗ್ರೆಸ್ನ ಬಿ.ಕೆ ಹರಿಪ್ರಸಾದ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ವಿಧಾನ ಸೌಧದ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹರಿಪ್ರಸಾದ್ಗೆ ಸರ್ಕಾರದ ಅಧಿಸೂಚನಾ ಪ್ರತಿ ನೀಡಿದ್ದಾರೆ. ಸಂವಿಧಾನ ಪ್ರತಿಗೆ ಕೈ ಮುಗಿದು ಪರಿಷತ್ ವಿಪಕ್ಷ ನಾಯಕನ ಖುರ್ಚಿ ಮೇಲೆ ಹರಿಪ್ರಸಾದ್ ಕುಳಿತುಕೊಂಡಿದ್ದಾರೆ. ಆ ಮೂಲಕ, ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಬಿ.ಕೆ ಹರಿಪ್ರಸಾದ್ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಅಷ್ಟೇ ಅಲ್ಲದೆ, ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಎಸ್.ಆರ್ ಪಾಟೀಲ್ ವಿದಾಯದ ಬಳಿಕ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕನಾಗಿ ಆಯ್ಕೆ ಬಳಿಕ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಬಿ.ಕೆ. ಹರಿಪ್ರಸಾದ್ ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪರಿಷತ್‌ನ ನೂತನ ವಿಪಕ್ಷನಾಯಕ ಬಿ.ಕೆ. ಹರಿಪ್ರಸಾದ್ ಅಧಿಕಾರ ವಹಿಸಿದ ಬಳಿಕ ಮೊದಲ ಬಾರಿಗೆ ಭೇಟಿ ಆಗಿದ್ದಾರೆ.
ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ ಪಾಟೀಲ್ ನೇಮಕ
ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಂ.ಬಿ ಪಾಟೀಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಂತೆ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದ್ದು ಕಾಂಗ್ರೆಸ್ ಚುನಾವಣಾ ಕಣಕ್ಕೆ ಭರ್ಜರಿ ಉತ್ಸಾಹದಲ್ಲಿ ಪೈಪೋಟಿಗೆ ಮುನ್ನುಗ್ಗುವಂತೆ ಕಂಡಿದೆ. ಕಾಂಗ್ರೆಸ್ ಅಧ್ಯಕ್ಷರು ಎಂ.ಬಿ ಪಾಟೀಲ್ ಅವರನ್ನು ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಮಂಗಳವಾರ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿತ್ತು.
ಎಂ.ಬಿ ಪಾಟೀಲ್ (ಮಲ್ಲನಗೌಡ ಬಸನಗೌಡ ಪಾಟೀಲ) ಈ ಹಿಂದೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವಾರಗಿ ಕೆಲಸ ಮಾಡಿದ್ದರು. ಹೆಚ್.ಡಿ ಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ತಮ್ಮ 27ನೇ ವಯಸ್ಸಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಎಂ.ಬಿ. ಪಾಟೀಲ್ ಮುಂದೆ ಲೋಕಸಭೆ ಸದಸ್ಯರಾಗಿಯೂ ಆಯ್ಕೆ ಆಗಿದ್ದರು.
ಇದನ್ನೂ ಓದಿ: ಶಾಂತರಾಮ ಸಿದ್ದಿ ಬಸ್ ಸ್ಟ್ಯಾಂಡಿನಲ್ಲಿ ಕುಳಿತ ಫೋಟೊ ವೈರಲ್; ಬೇಸರ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ
ಇದನ್ನೂ ಓದಿ: ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾಗಿ ಸೂರಜ್ ರೇವಣ್ಣ ಪ್ರಮಾಣ ವಚನ ಸ್ವೀಕಾರ
Published On - 6:57 pm, Fri, 28 January 22