ವಿಧಾನಮಂಡಲ ಅಧಿವೇಶನ ಮೊಟಕುಗೊಳಿಸಿ ಪ್ರಜಾಪ್ರಭುತ್ವ ಮೌಲ್ಯಗಳ ಬಗ್ಗೆ ಪಾಠ: ಸಿದ್ದರಾಮಯ್ಯ ಆಕ್ರೋಶ

| Updated By: ganapathi bhat

Updated on: Sep 24, 2021 | 5:57 PM

Siddaramaiah: ಆಪರೇಷನ್ ಕಮಲ ಎಂಬ ಅನೈತಿಕ ರಾಜಕೀಯದ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಬುನಾದಿ ಬುಡಮೇಲು ಮಾಡಿದ ರಾಜ್ಯ ಬಿಜೆಪಿ ಸದಸ್ಯರಿಗೆ ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ಸಂಸದೀಯ ಮೌಲ್ಯಗಳ ಕುರಿತು ಚರ್ಚಿಸುವ ನೈತಿಕತೆ ಇಲ್ಲ: ಸಿದ್ದರಾಮಯ್ಯ ಟ್ವೀಟ್

ವಿಧಾನಮಂಡಲ ಅಧಿವೇಶನ ಮೊಟಕುಗೊಳಿಸಿ ಪ್ರಜಾಪ್ರಭುತ್ವ ಮೌಲ್ಯಗಳ ಬಗ್ಗೆ ಪಾಠ: ಸಿದ್ದರಾಮಯ್ಯ ಆಕ್ರೋಶ
ಸಿದ್ದರಾಮಯ್ಯ
Follow us on

ಬೆಂಗಳೂರು: ನಿಯಮಾವಳಿಯಂತೆ ಕಲಾಪ ನಡೆಸದೆ ಸ್ಪೀಕರ್​ರಿಂದ ಪಾಠ ಹೇಳಲಾಗಿದೆ. ವಿಧಾನಮಂಡಲ ಅಧಿವೇಶನವನ್ನು ನಿಯಮಾವಳಿಯಂತೆ ನಡೆಸದೇ, ರಾಜ್ಯ ಬಿಜೆಪಿ ಸರ್ಕಾರ ಅಧಿವೇಶನವನ್ನು ಮೊಟಕುಗೊಳಿಸಿ, ಸರ್ಕಾರ ಲೋಕಸಭಾಧ್ಯಕ್ಷರನ್ನ ಕರೆಸಿ ಪಾಠ ಮಾಡಿಸುತ್ತಿದೆ ಎಂದು ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಭಾಷಣಕ್ಕೆ ಟ್ವೀಟ್​ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ, ಸಂಸದೀಯ ಮೌಲ್ಯಗಳ ಬಗ್ಗೆ ಪಾಠ ಮಾಡಿಸುತ್ತಿರುವುದು ಪ್ರಹಸನದಂತೆ ಕಾಣಿಸುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಜನಪ್ರತಿನಿಧಿಗಳ ಪಾಲಿನ ಪವಿತ್ರ ಕ್ಷೇತ್ರ ವಿಧಾನಸಭೆ. ಅಂತಹ ವಿಧಾನಸಭೆಯಲ್ಲಿ ಶಾಸಕರಲ್ಲದವರಿಗೂ ಪ್ರವೇಶ ನೀಡಿ, ಸಾರ್ವಜನಿಕ ವೇದಿಕೆ ಮಾಡಿದ ಅಪಕೀರ್ತಿಗೆ ಸಿಎಂ, ವಿಧಾನಸಭಾಧ್ಯಕ್ಷರು ಅಪಕೀರ್ತಿಗೆ ಭಾಜನರಾಗಿದ್ದಾರೆ. ಇಂದಿನ ಈ ಘಟನೆಯನ್ನು ಇತಿಹಾಸ ಎಂದಿಗೂ ಕ್ಷಮಿಸಲ್ಲ. ಬಿಜೆಪಿ ಪ್ರಜಾಪ್ರಭುತ್ವದ ವಿರೋಧಿ ಎಂದು ಟ್ವೀಟ್​ ಮೂಲಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಆಪರೇಷನ್ ಕಮಲ ಎಂಬ ಅನೈತಿಕ ರಾಜಕೀಯದ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಬುನಾದಿ ಬುಡಮೇಲು ಮಾಡಿದ ರಾಜ್ಯ ಬಿಜೆಪಿ ಸದಸ್ಯರಿಗೆ ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ಸಂಸದೀಯ ಮೌಲ್ಯಗಳ ಕುರಿತು ಚರ್ಚಿಸುವ ನೈತಿಕತೆ ಇಲ್ಲ ಎಂದು ಕಟುವಾಗಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ವಿರೋಧ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯ ಕಾರ್ಯವಿಧಾನ/ನಡವಳಿಕೆಯ ನಿಯಮದಂತೆ ವರ್ಷದಲ್ಲಿ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕಾಗುತ್ತದೆ. ಇಲ್ಲಿಯ ವರೆಗೆ ಈ ವರ್ಷ ಅಧಿವೇಶನ ನಡೆದಿರುವುದು 30 ದಿನ ಮಾತ್ರ. ಈ ವೈಫಲ್ಯ ಮುಚ್ಚಿಟ್ಟುಕೊಂಡು ಯಾವ ಮುಖ ಹೊತ್ತು ಲೋಕಸಭಾಧ್ಯಕ್ಷರಿಂದ ಪಾಠ ಕೇಳುತ್ತಿರಿ ಶಾಸಕರೇ? ಎಂದು ಬಿಜೆಪಿ ಶಾಸಕರಿಗೆ ಸಿದ್ದರಾಮಯ್ಯ ಪ್ರಶ್ನೆ ಕೇಳಿದ್ದಾರೆ. #BJPAgainst Democracy ಎಂಬ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಬೆಲೆ ಏರಿಕೆ, ಇಂಧನ ದರ, ಜಿಎಸ್​ಟಿ, ರಾಷ್ಟ್ರೀಯ ಶಿಕ್ಷಣ ನೀತಿ, ರೈತರ ಹೋರಾಟದ ಬಗ್ಗೆಯೂ 12 ಟ್ವೀಟ್​ಗಳನ್ನು ಮಾಡಿರುವ ಸಿದ್ದರಾಮಯ್ಯ, ಸದನದ ಒಳಗೆ ನಮ್ಮ ಬಾಯಿ ಮುಚ್ಚಿಸಿರಬಹುದು. ಆದರೆ, ನಾವು ಹೋರಾಟವನ್ನು ಬೀದಿಗೆ ಕೊಂಡೊಯ್ಯುತ್ತೇವೆ. ಅಕ್ಟೋಬರ್ 2 ರಿಂದ ರಾಜ್ಯಾದ್ಯಂತ ಪ್ರತಿಭಟನೆ ಆರಂಭಿಸಿ, ಬೆಲೆ ಇಳಿಕೆ ಆಗುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Om Birla: ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಲು ಶ್ರಮಿಸಿದ ಕನ್ನಡಿಗರಿಗೆ ನಾನು ಕೃತಜ್ಞ: ವಿಧಾನಮಂಡಲದಲ್ಲಿ ಓಂ ಬಿರ್ಲಾ

ಇದನ್ನೂ ಓದಿ: ಓಂ ಬಿರ್ಲಾರಿಂದ ಜಂಟಿ ಅಧಿವೇಶನ: ಬಿಜೆಪಿಯಿಂದ ಕೆಟ್ಟ ಸಂಪ್ರದಾಯ; ಕಾರ್ಯಕ್ರಮ ಬಹಿಷ್ಕಾರಕ್ಕೆ ಕಾಂಗ್ರೆಸ್ ನಿರ್ಧಾರ

Published On - 5:50 pm, Fri, 24 September 21